ಮುಂಬಯಿ: ಬಣ್ಣದ ಲೋಕದಲ್ಲಿ ಹತ್ತಾರು ಸವಾಲುಗಳಿರುತ್ತವೆ. ಬಣ್ಣ ಹಚ್ಚಿ ನಮ್ಮನ್ನು ರಂಜಿಸುವ ಕಲಾವಿದರ ಬದುಕು ಅಷು ಸಲುಭದಾಗಿರುವುದಿಲ್ಲ. ಇಂದು ಬಾಲಿವುಡ್, ಟಿವಿ ಮಾಧ್ಯಮ ಹೀಗೆ ಎಲ್ಲೆಡೆ ಕಿರುಕುಳ ನೀಡುವವರು ಹೆಚ್ಚಾಗಿದ್ದಾರೆ.
ಹಿಂದಿ ಕಿರುತೆರೆಯ ನಟಿ ಕೃಷ್ಣ ಮುಖರ್ಜಿ ಅವರು ತಮಗಾದ ಕಿರುಕುಳದ ಬಗ್ಗೆ ಮೌನ ಮುರಿದು, ಕರಾಳ ವಿಚಾರವನ್ನು ಹಂಚಿಕೊಂಡಿದ್ದಾರೆ. ತಾವು ಮಾಡುತ್ತಿದ್ದ ಧಾರಾವಾಹಿಯ ನಿರ್ಮಾಪಕರ ವಿರುದ್ಧ ಕಿರುಕುಳದ ಆರೋಪವನ್ನು ಮಾಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಿರುಕುಳದ ಬಗ್ಗೆ ಬರೆದುಕೊಂಡಿದ್ದಾರೆ. “ನನಗೆ ಈ ರೀತಿ ಮಾತನಾಡಲು ಎಂದಿಗೂ ಧೈರ್ಯವಿರಲಿಲ್ಲ. ಆದರೆ ಇನ್ಮುಂದೆ ನಾನಿದನ್ನು ತಡೆಯಲು ಆಗಲ್ಲ. ನಾನು ಕಠಿಣ ಸಮಯವನ್ನು ಎದುರಿಸುತ್ತಿದ್ದೇನೆ ಮತ್ತು ಕಳೆದ ಒಂದೂವರೆ ವರ್ಷಗಳು ನನಗೆ ಸುಲಭವಾಗಿರಲಿಲ್ಲ. ನಾನು ಒಬ್ಬಂಟಿಯಾಗಿರುವಾಗ ನಾನು ಖಿನ್ನತೆಗೆ ಒಳಗಾಗಿದ್ದೆ, ಆತಂಕಕ್ಕೊಳಗಾಗಿದ್ದೆ ಮತ್ತು ಅಂತರಾಳದಿಂದ ಅಳುತ್ತಿದ್ದೆ. ಇದೆಲ್ಲವೂ ಶುರುವಾದದ್ದು ನಾನು ದಂಗಲ್ ಟಿವಿಗಾಗಿ ನನ್ನ ಕೊನೆಯ ಕಾರ್ಯಕ್ರಮ “ಶುಭ್ ಶಗುನ್” ಮಾಡಲು ಪ್ರಾರಂಭಿಸಿದಾಗ. ಇದು ನನ್ನ ಜೀವನದ ಅತ್ಯಂತ ಕೆಟ್ಟ ನಿರ್ಧಾರವಾಗಿತ್ತು. ನನಗೆ ಆ ಶೋ ಮಾಡಲು ಇಷ್ಟವಿರಲಿಲ್ಲ. ಇತರರ ಮಾತು ಕೇಳಿ ಒಪ್ಪಂದಕ್ಕೆ ಸಹಿ ಹಾಕಿದೆ. ಪ್ರೊಡಕ್ಷನ್ ಹೌಸ್ ಮತ್ತು ನಿರ್ಮಾಪಕ ಕುಂದನ್ ಸಿಂಗ್ ನನಗೆ ಹಲವು ಬಾರಿ ಕಿರುಕುಳ ನೀಡಿದ್ದಾರೆ” ಎಂದು ಆರೋಪಿಸಿದ್ದಾರೆ.
“ಒಂದು ಬಾರಿ ನಾನು ಅನಾರೋಗ್ಯವಾಗಿ ಹಾಗೂ ಶೂಟಿಂಗ್ ಮಾಡಲು ಸಾಧ್ಯವಿಲ್ಲವೆಂದಾಗ ಅವರು ನನ್ನನ್ನು ಮೇಕಪ್ ರೂಮ್ ನಲ್ಲಿ ಲಾಕ್ ಮಾಡಿಟ್ಟಿದ್ದರು. ಅವರು ನನ್ನ ಕೆಲಸಕ್ಕೆ ಹಣ ಪಾವತಿಸದ ಕಾರಣಕ್ಕೆ ಕೆಲಸ ಮಾಡದಿರಲು ನಿರ್ಧರಿಸಿದ್ದೆ. ನಾನು ಬಟ್ಟೆ ಬದಲಾಯಿಸುವಾಗ ಅವರು ನನ್ನ ಮೇಕಪ್ ಕೋಣೆಯ ಬಾಗಿಲು ಮುರಿಯುವಂತೆ ಅದನ್ನು ಬಡಿಯುತ್ತಿದ್ದರು. 5 ತಿಂಗಳವರೆಗೆ ನನ್ನ ಹಣವನ್ನು ಪಾವತಿಸಿಲ್ಲ. ಅದು ದೊಡ್ಡ ಮೊತ್ತವಾಗಿದೆ. ನಾನು ಪ್ರೊಡಕ್ಷನ್ ಹೌಸ್ ಮತ್ತು ದಂಗಲ್ ಆಫೀಸ್‌ಗೆ ಹೋಗಿದ್ದೇನೆ ಆದರೆ ಅವರು ಎಂದಿಗೂ ನನ್ನ ಬಗ್ಗೆ ಗಮನ ಹರಿಸಿಲ್ಲ. ಇದಲ್ಲದೆ ಅನೇಕ ಬಾರಿ ಧಮ್ಕಿ ಹಾಕಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
“ನಾನು ಅಸುರಕ್ಷಿತವಾಗಿದ್ದೇನೆ ಎಂದು ನನಗೆ ಭಾಸವಾಗುತ್ತಿತ್ತು. ಹಲವಾರು ಜನರ ಸಹಾಯವನ್ನು ಕೇಳಿದ್ದೆ ಆದರೆ ಯಾರಿಂದ ಯಾವ ಸಹಾಯನೂ ಬಂದಿಲ್ಲ. ಆ ಬಗ್ಗೆ ಯಾರೂ ಏನೂ ಮಾಡಲಾಗಲಿಲ್ಲ. ನಾನು ಯಾಕೆ ಯಾವುದೇ ಶೋ ಮಾಡುತ್ತಿಲ್ಲ ಎಂದು ಜನ ಕೇಳುತ್ತಾರೆ. ಇದೇ ಕಾರಣ. ಮತ್ತೆ ಅದೇ ಸಂಭವಿಸಿದರೆ ನನಗೆ ಭಯವಾಗಿದೆ ?? ನನಗೆ ನ್ಯಾಯ ಬೇಕು” ಎಂದು ನಟಿ ಬರೆದುಕೊಂಡಿದ್ದಾರೆ.
ನಟಿ ಕರಾಳ ಅನುಭವವನ್ನು ಹಂಚಿಕೊಂಡ ಬಳಿಕ ಆಕೆಗೆ ಅನೇಕರು ಧೈರ್ಯ ತುಂಬಿದ್ದಾರೆ. ನಟಿ ಮುಖರ್ಜಿ ‘ಯೇ ಹೈ ಮೊಹಬ್ಬತೇನ್’ ಧಾರಾವಾಹಿಯಿಂದ ಖ್ಯಾತಿಯಾಗಿದ್ದಾರೆ.