ಶ್ರೇಷ್ಠ ಪರಂಪರೆಯ ಭೂಮಿ ಭಾರತ. ಈ ಪುಣ್ಯ ಮಣ್ಣಿನ ಅಸ್ತಿತ್ವವೇ ಸನಾತನ ಧರ್ಮ. ಹಿಂದೂ ಸಂಪ್ರದಾಯದಲ್ಲಿ ಆಚರಿಸುವಂತಹ ಪ್ರಮುಖ ಹಬ್ಬಗಳಲ್ಲಿ ಕೃಷ್ಣ ಜನ್ಮಾಷ್ಟಮಿಯೂ ಒಂದು. ಪುರಾಣದ ಪ್ರಕಾರ ಕೃಷ್ಣನು ಶ್ರಾವಣಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಜನಿಸಿದನು ಎಂಬ ಪ್ರತೀತಿ ಇದೆ. ಜಗದೋದ್ಧಾರಕ ಕೃಷ್ಣನ ಜನ್ಮವು ಸಾಮಾನ್ಯವಾದುದ್ದಲ್ಲ, ಲೋಕಕಲ್ಯಾಣಕ್ಕಾಗಿ ವಸುದೇವ ಮತ್ತು ದೇವಕಿಯ ಮಗನಾಗಿ ವಿಷ್ಣುವಿನ 8ನೇ ಅವತಾರದಲ್ಲಿ ಭೂಲೋಕದಲ್ಲಿ ಜನ್ಮ ತಾಳಿದನು.
ಆತನ ಜನನವೇ ಒಂದು ವಿಶೇಷ. ಕೃಷ್ಣ ಹುಟ್ಟಿದೊಡನೆ ತಂದೆ ವಸುದೇವನು ಸೋದರಮಾವನಾದ ಕಂಸನಿಗೆ ತಿಳಿಯದಂತೆ ಈತನನ್ನು ಗೋಕುಲಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ನಂದರಾಜನ ಮನೆಯಲ್ಲಿ ಕೃಷ್ಣನನ್ನು ಬಿಟ್ಟು ಬರಲು ಪ್ರಕೃತಿಯು ನೆರವಾಗುತ್ತದೆ. ದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆ, ಯಶೋದೆ ಅವನನ್ನು ಸಾಕಿ ಬೆಳೆಸಿದ ತಾಯಿಯಾದಳು. ಈ ರೀತಿಯಾಗಿ ಜಗದೋದ್ಧಾರಕನ ಹುಟ್ಟಿನ ವಿಚಾರವಾಗಿದೆ.
ಎಲ್ಲೆಡೆಯು ಬಹಳ ವಿಜೃಂಭಣೆಯಿಂದ ಆಚರಿಸುವ ಈ ಹಬ್ಬವು, ವಿಶೇಷವಾಗಿ ಕರ್ನಾಟಕದ ಉಡುಪಿ ಜಿಲ್ಲೆಯ ಕೃಷ್ಣ ಮಠದಲ್ಲಿ ಬಹಳ ಅದ್ದೂರಿಯಿಂದ ಸಂಭ್ರಮಿಸುತ್ತಾರೆ. ಪ್ರತಿಯೊಂದು ಕೃಷ್ಣ ಮಂದಿರದಲ್ಲಿಯೂ ವಿಶೇಷವಾದ ಪೂಜೆ-ಪುನಸ್ಕಾರಗಳು ನಡೆಯುತ್ತವೆ. ಹಾಗೆಯೇ ಈ ಪುಣ್ಯ ದಿನದಂದು ಕೃಷ್ಣನಿಗೆ ಅಭಿಷೇಕ, ಜನ್ಮಾಷ್ಟಮಿ ವ್ರತ, ದೇಗುಲ ದರ್ಶನ ಈ ರೀತಿಯಾಗಿ ನಾನಾ ತರಹದಲ್ಲಿ ಆಚರಿಸಲ್ಪಡುವ ಕೃಷ್ಣ ಜನ್ಮಾಷ್ಟಮಿಯು ಅದೆಷ್ಟೋ ರೀತಿಯ ವಿಶೇಷತೆಯನ್ನು ಹೊಂದಿದೆ. ಕೃಷ್ಣನ ಬಾಲಲೀಲೆಗಳ ದ್ಯೋತಕವಾಗಿ ಮಕ್ಕಳಿಗೆ ಕೃಷ್ಣವೇಷ ಹಾಗೂ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸುವುದು ಈ ಹಬ್ಬದ ವಿಶೇಷತೆಗಳಲ್ಲಿ ಒಂದಾಗಿದೆ.
ಕೃಷ್ಣನ ಜನ್ಮ ದಿನವನ್ನಾಗಿ ಆಚರಿಸುವ ಈ ಹಬ್ಬವು, ದೇಶದ ಹಲವೆಡೆ ಮುಕುಂದನನ್ನು ಉಯ್ನಾಲೆಯಲ್ಲಿ ತೂಗುವ ಕ್ರಮವನ್ನು ಕಾಣಬಹುದು. ಅಂತೆಯೇ ಬಗೆ ಬಗೆಯ ತಿಂಡಿ ತಿನಿಸುಗಳನ್ನು ಮಾಡಿ ನೈವೇದ್ಯದ ರೂಪದಲ್ಲಿ ಸಮರ್ಪಿಸಲಾಗುತ್ತದೆ ಮತ್ತು ಮಹಿಳೆಯರು ತಮ್ಮ ಮನೆಗಳ ಮುಂದೆ ಪುಟ್ಟ ಪುಟ್ಟ ಹೆಜ್ಜೆಗಳನ್ನು ಬಿಡಿಸುತ್ತಾರೆ. ಕಾರಣ, ಕೃಷ್ಣನು ಮನೆಗೆ ಬರುತ್ತಾನೆ ಎಂಬ ನಂಬಿಕೆ. ಒಟ್ಟಾರೆಯಾಗಿ, ಈ ಒಂದು ಅಷ್ಟಮಿಯನ್ನು ಪ್ರತಿಯೊಬ್ಬರೂ ಬಹು ಸಂತಸ ಸಡಗರದಿಂದ ಆಚರಿಸುತ್ತಾರೆ.
ಮಹಾಭಾರತದಲ್ಲಿ ಕೃಷ್ಣನ ಪಾತ್ರ ಬಹುಮುಖ್ಯವಾದುದು. ಲೋಕಕಲ್ಯಾಣಕ್ಕಾಗಿ ಕೃಷ್ಣನು ನೀಡಿದ ಸಂದೇಶಗಳು ಮಹತ್ವವಾದದ್ದು, ಮಾತ್ರವಲ್ಲ ಕೃಷ್ಣನ ಜೀವನವೇ ಸಂದೇಶವಾಗಿ ನಮ್ಮ ಬಾಳನ್ನು ಬೆಳಗಬಹುದು. ಮುರಾರಿಯ ಅತೀ ಶ್ರೇಷ್ಠ ಜೀವನ ಪಾಠವನ್ನು ನಮ್ಮ ಬದುಕಲ್ಲಿ ಅಳವಡಿಸಿಕೊಂಡರೆ ಅವನ ಶ್ರೀ ರಕ್ಷೆ ಸದಾ ನಮ್ಮ ಬದುಕ ಮೇಲೆ ಬೆಳಕು ಚೆಲ್ಲುವುದು.
–
ಧನ್ಯಶ್ರೀ,
ವಿವೇಕಾನಂದ ಸ್ವಾಯತ್ತ ಕಾಲೇಜು
ಪುತ್ತೂರು