Advertisement

“ಹಂಚಿ ತಿನ್ನಿ, ಕೂಡಿ ಇಡಬೇಡಿ’ಸಂದೇಶ ಸಾರಿದ್ದ ಶ್ರೀಕೃಷ್ಣ

09:21 AM Sep 02, 2018 | |

ಲಿಂಗ ಭೇದ, ಜಾತಿ ಮತ ಭೇದವಿಲ್ಲದೆ ದೇಶಾದ್ಯಂತ ಮನೆಮನೆಗಳಲ್ಲಿ ಆಚರಿಸುವ ಹಬ್ಬ ಕೃಷ್ಣಾಷ್ಟಮಿ. ಹೊಟ್ಟೆ ಪೂರ್ತಿ ತಿನ್ನುವ ಮತ್ತು ಹೊಟ್ಟೆ ಪೂರ್ತಿ ಖಾಲಿ ಇಡುವ ಹಬ್ಬವೂ ಕೃಷ್ಣಾಷ್ಟಮಿ. ಅಂದರೆ ಕೃಷ್ಣಾಷ್ಟಮಿ ದಿನ ಉಪವಾಸ, ಮರುದಿನ ಪೂಜೆ ಮಾಡಿ ಪ್ರಸಾದ ಸ್ವೀಕರಿಸುವ ಹಬ್ಬ. ಇದರ ಅರ್ಥ ಸಾಧನೆಗೂ ಅವಕಾಶವಿದೆ, ಫ‌ಲವೂ ಇದೆ.

Advertisement

ಈಗ ಸರಕಾರವೇ ಕೃಷ್ಣಾಷ್ಟಮಿ ಆಚರಿಸಬೇಕೆಂದು ನಿರ್ಧರಿಸಿರುವುದು ಸಂತೋಷ. ಕೃಷ್ಣನ ಬಳಿ ಬಂದ ಯಾರೂ ಬರಿಗೈಯಲ್ಲಿ ಹೋಗಲಿಲ್ಲ. ಗೋವರ್ಧನ ಪರ್ವತದಲ್ಲಿ ಭಾರೀ ಮಳೆ ಬಂದಾಗ ಗೋವಳರು ಕೊಟ್ಟ ಪೂಜೆಯನ್ನು ಸ್ವೀಕರಿಸಿ ಪ್ರಕೃತಿ ವಿಕೋಪವನ್ನು ಸರಿಪಡಿಸಿದ. ಈಗ ನಾವು ಕೊಟ್ಟದ್ದನ್ನು ಸ್ವೀಕಾರ ಮಾಡಿ ಪ್ರಕೃತಿ ವಿಕೋಪ ಸರಿಪಡಿಸಿ ಸಂತ್ರಸ್ತರಿಗೆ ಅನುಗ್ರಹಿಸಬೇಕೆಂದು ಪ್ರಾರ್ಥಿಸೋಣ.

ಕೃಷ್ಣಾಷ್ಟಮಿಯಲ್ಲಿ ಅರ್ಘ್ಯ ಪ್ರದಾನವೇ ಪ್ರಧಾನ. ಕೃಷ್ಣನ ಆಗಮನವೇ ಜಾತಃ ಕಂಸವಧಾರ್ಥಾಯ. ದುರ್ಯೋಧನ, ಕಂಸಾದಿಗಳು ಯಾವಾಗಲೋ ಸತ್ತು ಹೋಗಿದ್ದಾರೆ. ಆದರೆ ಅಂತಹವರ ದುಷ್ಟ
ಚಿಂತನೆಗಳು ಮಾತ್ರ ನಾಶ ವಾಗಬೇಕು. ಒಳ್ಳೆಯ ಚಿಂತನೆಗಳು ಮೈಗೂಡಬೇಕು. ಲೋಕದಲ್ಲಿ ಕ್ಷೋಭೆ ಇಲ್ಲವಾಗಬೇಕು. ಕಾಲಕಾಲದಲ್ಲಿ ಮಳೆ ಬೆಳೆ ಬಂದು ಸುಭಿಕ್ಷೆ ನೆಲೆಗೊಳ್ಳಬೇಕು. ಇದಕ್ಕೆ ಬೇಕು ಕೃಷ್ಣಾನುಗ್ರಹ. ಆ ದೇವರು ನಮ್ಮಲ್ಲಿಯೂ ಬಂದು ಅನುಗ್ರಹಿಸಬೇಕಾದರೆ ಭಕ್ತಿಯಿಂದ ಮನೆ ಮನೆಗಳಲ್ಲಿ “ಶ್ರೀಕೃಷ್ಣಾಯ ನಮಃ’ ಎಂದು ಪ್ರಾರ್ಥಿಸಿ ಅರ್ಘ್ಯಪ್ರದಾನ ಮಾಡಬೇಕು.

ಕೃಷ್ಣ ಮೊಸರು ಗಡಿಗೆಯನ್ನು ಒಡೆದು ಚೆಲ್ಲಾಟವಾಡಿದ. ಕೃಷ್ಣ ಮೊಸರು ಕುಡಿದದ್ದಲ್ಲ, ಜತೆಗಿದ್ದವರಿಗೆ ಹಂಚಿ ತಿಂದ. “ಹಂಚಿ ತಿನ್ನಿ, ಕೂಡಿ ಇಡಬೇಡಿ’ ಎಂಬ ಸಂದೇಶವನ್ನು ಕೃಷ್ಣ ಜಗತ್ತಿಗೆ ಸಾರಿದ. ಆದ್ದರಿಂದಲೇ ಇಂದಿಗೂ ಅವನ ಸಂದೇಶ ಪ್ರಸ್ತುತ. ರಾಜನೀತಿಜ್ಞರು, ವ್ಯಾಪಾರಿಗಳು, ಅರ್ಚಕರು ಹೀಗೆ ಎಲ್ಲ ಬಗೆಯವರಿಗೆ ಆತ ಆದರ್ಶ ಪ್ರಾಯ. ಕೃಷ್ಣ ಆನಂದದ ದೇವರು, ಎಲ್ಲರಿಗೂ ಆನಂದ ಕೊಡಲಿ, ದುಃಖ ನಿವಾರಣೆಯಾಗಲಿ ಎಂದು ಶ್ರೀಕೃಷ್ಣಾಷ್ಟಮಿಯ ಶುಭ ಸಂದರ್ಭ ಪ್ರಾರ್ಥಿಸುತ್ತೇವೆ.

ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು,
ಪರ್ಯಾಯ ಶ್ರೀ ಪಲಿಮಾರು ಮಠ, 
ಶ್ರೀಕೃಷ್ಣ ಮಠ, ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next