ಮಂಗಳೂರು: ಕೃಷ್ಣ ಮೃಗದ ಚರ್ಮವನ್ನು ಮಾರಾಟ ಮಾಡಲು ಯತ್ನಿಸಿದ್ದ ಗದಗ ಜಿಲ್ಲೆ ಮುಳಗುಂದ ಗ್ರಾಮದ ದೇವಪ್ಪ ಮಾಗಡಿ (43) ಅವರನ್ನು ನಗರದ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಬರ್ಕೆ ಪೊಲೀಸರು ಶನಿವಾರ ಬೆಳಗ್ಗೆ ಬಂಧಿಸಿದ್ದಾರೆ.
ಆರೋಪಿಯು ಇದನ್ನು ಹುಬ್ಬಳ್ಳಿ ಯಿಂದ ಮಂಗಳೂರಿಗೆ ಬಂದ ಬಸ್ಸಿನಲ್ಲಿ ಸಾಗಿಸಿದ್ದನು.
ಖಚಿತ ಮಾಹಿತಿ ಮೇರೆಗೆ ಎಸಿಪಿ ಉದಯ ನಾಯಕ್ ಮತ್ತು ಬರ್ಕೆ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ರಾಜೇಶ್ ಅವರ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಪಿಎಸ್‌ಐ ನರೇಂದ್ರ ಅವರ ನೇತೃತ್ವದಲ್ಲಿ ಎಎಸ್‌ಐ ಪ್ರಕಾಶ್, ಹೆಡ್‌ಕಾನ್‌ಸ್ಟೆಬಲ್ ಗಣೇಶ್, ಕಾನ್‌ಸ್ಟೆಬಲ್‌ಗಳಾದ ಕಿಶೋರ್ ಕೋಟ್ಯಾನ್, ರಾಜೇಶ್, ಕಿಶೋರ್ ಪೂಜಾರಿ, ಜಯರಾಂ, ಮಹೇಶ್ ಪಾಟಿಲ್, ನಾಗರಾಜ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ವಶ ಪಡಿಸಿಕೊಂಡಿರುವ ಕೃಷ್ಣ ಮೃಗದ ಚರ್ಮದ ಮೌಲ್ಯವನ್ನು ಎಫ್‌ಎಸ್‌ಎಲ್ ಪರೀಕ್ಷೆ ನಡೆಸಿದ ಬಳಿಕ ಅದರ ವರದಿಯ ಆಧಾರದಲ್ಲಿ ನಿರ್ಧರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬರ್ಕೆ ಪೊಲೀಸರು ಇತ್ತೀಚೆಗೆ ಜಿಂಕೆ ಚರ್ಮ ಮಾರಾಟ ಪ್ರಕರಣವನ್ನು ಪತ್ತೆ ಹಚ್ಚಿದ್ದು, ಕಳೆದ ಒಂದು ತಿಂಗಳ ಅವಧಿಯಲ್ಲಿ ಪತ್ತೆ ಮಾಡಿದ ಅಕ್ರಮ ಚರ್ಮ ಮಾರಾಟ ಯತ್ನದ ಎರಡನೇ ಪ್ರಕರಣ ಇದಾಗಿದೆ.