Advertisement

ತೀರ್ಥಯಾತ್ರೆಗೆ ಮಾರ್ಗದರ್ಶನ ಮಾಡುವ ‘ಕೃಷ್ಣ’

11:21 AM Nov 04, 2018 | |

ಉಪ್ಪಿನಂಗಡಿ: ತೀರ್ಥಯಾತ್ರೆ ಕೈಗೊಳ್ಳುವ ಯೋಗ ಎಲ್ಲರಿಗೂ ಇರುವುದಿಲ್ಲ. ಅನ್ಯ ರಾಜ್ಯಗಳಲ್ಲಿರುವ ಕ್ಷೇತ್ರಗಳನ್ನು ಸಂದರ್ಶಿಸಲು ಭಾಷೆಯ ತೊಡಕು ಬೇರೆ. ಮಾಹಿತಿಯ ಕೊರತೆಯೂ ಕಾಡುತ್ತದೆ. ತೀರ್ಥಯಾತ್ರೆ ಮಾಡುವ ಮನಸ್ಸಿರುವ ಆಸ್ತಿಕರಿಗೆ ಮಾರ್ಗದರ್ಶನ ಮಾಡುವ ವ್ಯಕ್ತಿಯೊಬ್ಬರು ಉಪ್ಪಿನಂಗಡಿಯಲ್ಲಿದ್ದಾರೆ.

Advertisement

ಉಪ್ಪಿನಂಗಡಿಯಲ್ಲಿ ಎಣ್ಣೆ ಗಿರಣಿಯನ್ನು ಹೊಂದಿರುವ ಕೆ. ವಾಸುದೇವ ಪ್ರಭು ಯಾನೆ ಕೃಷ್ಣ ಅವರಿಗೀಗ 71ರ ಹರೆಯ. 20 ವರ್ಷಗಳಿಂದ ಪ್ರತಿ ವರ್ಷ ಜುಲೈ ತಿಂಗಳಲ್ಲಿ ತೀರ್ಥಯಾತ್ರೆ ಕೈಗೊಳ್ಳುತ್ತಾರೆ. ವೆಚ್ಚ ಹಂಚಿಕೆ ಆಧಾರದಲ್ಲಿ ಆಸಕ್ತರನ್ನೂ ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಇವರ ಅನುಭವದಿಂದಾಗಿ ಯಾತ್ರೆಯ ವೆಚ್ಚ ನಿರೀಕ್ಷೆಗೂ ಸಿಗದ ರೀತಿಯಲ್ಲಿ ಅತೀ ಕಡಿಮೆಯಾಗಿರುತ್ತದೆ. ಯಾವ ತೀರ್ಥ ಕ್ಷೇತ್ರಗಳಲ್ಲಿ ಉಚಿತ ವಸತಿ, ದಕ್ಷಿಣ ಭಾರತೀಯ ಶೈಲಿಯ ಊಟೋಪಹಾರದ ವ್ಯವಸ್ಥೆಯಿದೆ ಎಂಬುದು ಅವರಿಗೆ ಚೆನ್ನಾಗಿ ತಿಳಿಸಿದೆ.

ಪ್ರತಿ ಸಲವೂ ಇವರೊಂದಿಗೆ 40ಕ್ಕೂ ಹೆಚ್ಚು ಯಾತ್ರಿಗಳಿರುತ್ತಾರೆ. ತಂಡದಲ್ಲಿ ಬಹುತೇಕ 60 ವರ್ಷ ಮೀರಿದವರೇ ಇರುವುದು ವಿಶೇಷ. ಅವರೆಲ್ಲರಿಗೂ ಆರೋಗ್ಯ ಸಮಸ್ಯೆ ಒಂದಿನಿತೂ ಕಾಡದಂತೆ ಮುನ್ನೆಚ್ಚರಿಕೆ ವಹಿಸುತ್ತಾರೆ. ರೈಲು ಪ್ರಯಾಣವನ್ನೇ ನೆಚ್ಚುವ ಅವರು, ಸೀಟು ಕಾಯ್ದಿರಿಸುವ ಪ್ರಕ್ರಿಯೆಯನ್ನು ಮಾಡುತ್ತಾರೆ. ದೇಶದೆಲ್ಲೆಡೆ ಇರುವ ತೀರ್ಥ ಕ್ಷೇತ್ರಗಳಿಗೆ ರೈಲು, ಬಸ್ಸು ಹಾಗೂ ಕೆಲವು ಕಡೆಗಳಿಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶವೂ ಪ್ರಾಪ್ತವಾಗುತ್ತದೆ.

12 ಜ್ಯೋತಿರ್ಲಿಂಗ ದರ್ಶನ
ಹರಿದ್ವಾರ, ಬದರೀನಾಥ, ಕೇದಾರನಾಥ, ಯಮುನೇತ್ರಿ, ರಾಮೇಶ್ವರ ಸಹಿತ ಎಲ್ಲ ಪುಣ್ಯ ಕ್ಷೇತ್ರಗಳ ಸಂದರ್ಶನ ಸಿಗುತ್ತದೆ. ಹಲವಾರು ಬಾರಿ ಒಂದೇ ಯಾತ್ರೆಯಲ್ಲಿ ದ್ವಾದಶ ಜ್ಯೋತಿರ್ಲಿಂಗ ದರ್ಶನವನ್ನೂ ಮಾಡಿದ ಹಿರಿಮೆ ಪ್ರಭುಗಳದು. ಪುಣೆಯ ಭೀಮಾಶಂಕರ ಜ್ಯೋತಿರ್ಲಿಂಗ, ನಾಸಿಕದಲ್ಲಿನ ತ್ರ್ಯಂಬಕೇಶ್ವರ, ಸೋಮನಾಥೇಶ್ವರ, ದ್ವಾರಕದ ನಾಗೇಶ್ವರ, ಕೇದಾರನಾಥೇಶ್ವರ, ಉಜೈ ನಿಯ ಮಹಾಕಾಳೇಶ್ವರ, ಶಿವಪುರಿಯ ಓಂಕಾರೇಶ್ವರ, ವಾರಾಣಶಿಯ ಕಾಶಿ ವಿಶ್ವನಾಥ, ಜಾರ್ಖಂಡ್‌ನ‌ ವೈದ್ಯನಾಥೇಶ್ವರ, ಶ್ರೀಶೈಲದ ಮಲ್ಲಿಕಾರ್ಜುನ, ರಾಮೇಶ್ವರ ಸಹಿತ ಎಲ್ಲ ಜ್ಯೋತಿರ್ಲಿಂಗಗಳ ದರ್ಶನದ ಭಾಗ್ಯ ಸಿಗುತ್ತದೆ. ನೇಪಾಲದ ಪಶುಪತಿನಾಥ ಸಹಿತ ಬಹುತೇಕ ಎಲ್ಲ ಪ್ರಸಿದ್ಧ ದೇವಸ್ಥಾನಗಳ ಸಹಿತ 600ಕ್ಕೂ ಮಿಕ್ಕಿ ದೇವಸ್ಥಾನಗಳಿಗೆ ಯಾತ್ರೆ ಮಾಡಿದ ಹಿರಿಮೆ ಇವರದು. ಗಂಗೋತ್ರಿ, ಯಮುನೋತ್ರಿ, ಅಮರನಾಥ ಸಹಿತ ಕಠಿನ ಯಾತ್ರೆಗಳನ್ನೂ ಮಾಡಿದ್ದಾರೆ.

ವಿಹಿಂಪ ಸ್ಥಾಪಕಾಧ್ಯಕ್ಷರು
ಉಪ್ಪಿನಂಗಡಿಯಲ್ಲಿ ವಿಶ್ವ ಹಿಂದೂ ಪರಿಷತ್‌ ಸ್ಥಾಪಕ ಅಧ್ಯಕ್ಷರಾಗಿ ಸುದೀರ್ಘ‌ ಸೇವೆ ಸಲ್ಲಿಸಿದ್ದ ವಾಸುದೇವ ಪ್ರಭು ಅವರು ಉಪ್ಪಿನಂಗಡಿಯಲ್ಲಿ ‘ಕೃಷ್ಣ’ ಎಂದೇ ಪ್ರಸಿದ್ಧರು. ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಮುಂಚೂಣಿಯ ನಾಯಕತ್ವ ನೀಡುವ ಅವರು ಉಪ್ಪಿನಂಗಡಿಯಲ್ಲಿ ಹೆಸರಾಂತ ಹೊಟೇಲ್‌ ಉದ್ಯಮಿಯಾಗಿದ್ದು, ಪ್ರಸಕ್ತ ಎಣ್ಣೆ ಮಿಲ್‌ ಮಾಲಕರಾಗಿದ್ದಾರೆ. ತಾವೂ ಯಾತ್ರೆ ಮಾಡುತ್ತ, ಆಸಕ್ತರನ್ನೂ ಕರೆದೊಯ್ಯುತ್ತ ವಿಶಿಷ್ಟವಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ.

Advertisement

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next