ಮುಧೋಳ: ಕೇಂದ್ರ ಸರಕಾರ, ರಾಜ್ಯಕ್ಕೆ ಅನುದಾನದ ವಿಚಾರದಲ್ಲಿ ಅನ್ಯಾಯವೆಸಗಿದೆ. ಇದನ್ನು ಮರೆಮಾಚಲು ರಾಜ್ಯ ಬಿಜೆಪಿ ನಾಯಕರು ಅನಾವಶ್ಯಕವಾಗಿ ಮುಡಾ ವಿಚಾರ ಮುನ್ನೆಲೆಗೆ ತಂದು ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.
ಸುದ್ದಿಗಾರರ ಜತೆ ಮಾತನಾಡಿ, ಮುಡಾದವರು ಜಮೀನು ಮಾಲಕರಿಗೆ ಗೊತ್ತಿಲ್ಲದಂತೆ ಅವರ ಜಮೀನಿನಲ್ಲಿ ಬಡಾವಣೆ ನಿರ್ಮಿಸಿದ್ದರು. ಅದಕ್ಕೆ ಬದಲಾಗಿ ಸೈಟ್ ಹಂಚಿಕೆ ಮಾಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿಗಳ 3.16 ಎಕರೆ ಜಾಗ ಮುಡಾ ಪಡೆದುಕೊಂಡಿತ್ತು. ಅದಕ್ಕೆ ಬದಲಾಗಿ ಮುಖ್ಯಮಂತ್ರಿಯವರಿಗೆ ಸೈಟ್ ನೀಡಲಾಗಿದೆ.
ಇದು ಬಿಜೆಪಿ ಅಧಿಕಾರದಲ್ಲಿದ್ದಾಗಲೇ ನಡೆದಿರುವ ಪ್ರಕ್ರಿಯೆ. ಈ ಬಗ್ಗೆ ಯಾರಿಗಾದರೂ ತಪ್ಪು ಕಂಡುಬಂದಲ್ಲಿ ಕೋರ್ಟ್‌ಗೆ ಹೋಗಬಹುದು ಎಂದರು.
ಈ ಮಧ್ಯೆ ಡಿ ಲಿಮಿಟೇಷನ್ ಹೆಸರಿನಲ್ಲಿ ಲೋಕಸಭೆಯಲ್ಲಿ ರಾಜ್ಯದ ಸೀಟುಗಳನ್ನು ಕಡಿತಗೊಳಿಸುವ ಹುನ್ನಾರಕ್ಕೆ ಕೇಂದ್ರ ಸರಕಾರ ಕೈ ಹಾಕಿದೆ ಎಂದು ತಿಳಿಸಿದರು.
ಇದರ ವಿರುದ್ಧ ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಠರಾವು ಪಾಸ್ ಮಾಡಿದ್ದಾರೆ ಎಂದರು.