ಹಾವೇರಿ: ಕೃಷಿ ಸಿಂಚಾಯಿ ಯೋಜನೆ ರಾಜ್ಯದ ಆಯ್ದ 57 ತಾಲೂಕುಗಳಲ್ಲಿ ಜಾರಿಗೊಳಿಸಲಾಗಿದ್ದು, ಒಂದು ಕೋಟಿ ಕೃಷಿ, ತೋಟಗಾರಿಕೆ ಸಸಿ ನೆಡುವ ಕಾರ್ಯಕಮಕ್ಕೆ ಚಾಲನೆ ನೀಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ನೆಗಳೂರ ಗ್ರಾಮದಲ್ಲಿ ಸೋಮವಾರ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ – ಜಲಾನಯನ ಅಭಿವೃದ್ಧಿ ಘಟಕ ಯೋಜನೆಯಡಿ ತೋಟಗಾರಿಕೆ, ಕೃಷಿ ಅರಣ್ಯ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತುಮಕೂರಿನಲ್ಲಿ ಒಂದು ಕೋಟಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಮುಂದಿನ 5 ವರ್ಷಗಳಲ್ಲಿ ರೈತರಿಗೆ ಕೃಷಿ ಅರಣ್ಯ ಸಸಿ ನೆಡುವುದರಿಂದ ಆಗುವ ಲಾಭ ದೊರಕಲಿದೆ. ಜಿಲ್ಲೆಯ 7 ತಾಲೂಕಿನ 28 ಗ್ರಾಪಂಗಳ 68 ಗ್ರಾಮಗಳ 69 ಕಿರು ಜಲಾನಯನ ನಿರ್ಮಿಸಲಾಗಿ 31,588.50 ಹೆ. ಪ್ರದೇಶದಲ್ಲಿ ಯೋಜನೆಯಡಿ ಬಂಡು ನಿರ್ಮಾಣ, ಕೃಷಿ ಅರಣ್ಯ ಸಸಿಗಳ ನೆಡುವಿಕೆ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. 5.89 ಲಕ್ಷ ಸಸಿ ನೆಡಲಾಗುತ್ತಿದೆ. ಅರಣ್ಯೀಕರಣಕ್ಕೆ 3.90 ಲಕ್ಷ ರೂ., ತೋಟಗಾರಿಕೆ ಕ್ಷೇತ್ರದಲ್ಲಿ 1.99 ಲಕ್ಷ ಸಸಿ ನೆಡಲಾಗುತ್ತಿದೆ. ಕೃಷಿ ಇಲಾಖೆ ಜಲಾನಯನ ಪ್ರದೇಶದಲ್ಲಿ 4.48 ಕೋಟಿ ವೆಚ್ಚ ಮಾಡಲಾಗಿದೆ ಎಂದರು.
ಪ್ರಮಾಣೀಕೃತ ಬೀಜ ಖರೀದಿಸಿ: ರೈತರಿಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ರೈತರು ಪ್ರಮಾಣೀಕೃತ ಬೀಜ ಮಾತ್ರ ಖರೀದಿಸಬೇಕು. ಐವತ್ತು ರೂ. ಹಣ ಉಳಿಸಲು ಹೋಗಿ ಪ್ರಮಾಣೀಕೃತವಲ್ಲದ ಬೀಜ ಖರೀದಿಸಿದರೆ ಬೆಳೆ ಉತ್ತಮವಾಗಿ ಬಾರದೇ ಸಾವಿರಾರು ರೂ. ನಷ್ಟ ಉಂಟಾಗುತ್ತದೆ ಎಂದರು. ನನ್ನ ಬೆಳೆ ನನ್ನ ಹಕ್ಕು ಯೋಜನೆಯಡಿ ರೈತರಿಂದಲೇ ಬೆಳೆ ಸಮೀಕ್ಷೆ ಮಾಡಿಸಲಾಗುತ್ತಿದೆ. ಸಮೀಕ್ಷೆಗೆ ರೈತರಿಗೆ ಅಧಿಕಾರ ನೀಡಲಾಗಿದೆ. ಬೆಳೆ ಸಮೀಕ್ಷೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಶಾಸಕ, ರಾಜ್ಯ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ನೆಹರು ಓಲೇಕಾರ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ, ಉಪ ನಿರ್ದೇಶಕ ಹುಲಿರಾಜ್ ಇತರರು ಇದ್ದರು.
ಅಗ್ನಿಪಥ ಯೋಜನೆ; ಕಾಂಗ್ರೆಸ್‌ನಿಂದ ಅಪಪ್ರಚಾರ
ಕೊರೊನಾದಿಂದಾಗಿ ಸರ್ಕಾರ ಎಲ್ಲಿಯೂ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಿಲ್ಲ. ನಮ್ಮ ಅಭಿವೃದ್ಧಿ ಕಾರ್ಯಕ್ರಮ ಸಹಿಸದೇ ಮಾಜಿ ಸಿಎಂ ಸಿದ್ದರಾಮಯ್ಯ ಏನೇನೋ ಹೇಳಿಕೆ ಕೊಡ್ತಾ ಇದ್ದಾರೆ. ಅವಕ್ಕೆಲ್ಲ ಉತ್ತರ ನಾನ್ಯಾಕೆ ಕೊಡಬೇಕು. ಅಗ್ನಿಪಥ ಯೋಜನೆಯನ್ನು ರಾಜಕೀಯ ಮಾಡಲಾಗುತ್ತಿದೆ. ಯುವಕರಿಗೆ ನಾಲ್ಕು ವರ್ಷದ ನಂತರ 23 ಲಕ್ಷ ರೂ. ಸಿಗುತ್ತದೆ. ದೇಶ ರಕ್ಷಣೆಗೆ ಯುವಶಕ್ತಿ ಬಳಸಿಕೊಳ್ಳಲಾಗುವುದು. ಇದರಲ್ಲಿ ತಪ್ಪೇನಿದೆ. ಇದು ಉತ್ತಮ ಕೆಲಸ. ಇದನ್ನು ಸಹಿಸದೇ ಕಾಂಗ್ರೆಸ್‌ನವರು ಅಪಪ್ರಚಾರ ನಡೆಸಿದ್ದಾರೆ. ದೇಶ ಕಾಯಬೇಕು. ರಕ್ಷಣೆ ಮಾಡಬೇಕು ಎನ್ನುವುದು ಅನೇಕ ಯುವಕರ ಉದ್ದೇಶವಾಗಿದೆ. ದೇಶ ಕಾಯಲು ಸಜ್ಜಾದವರು ಬಸ್, ರೈಲಿಗೆ ಬೆಂಕಿ ಹಚ್ಚುತ್ತಾರಾ?. ಇದೆಲ್ಲ ಕಾಂಗ್ರೆಸ್ ಪಿತೂರಿಯಿಂದ ನಡೆಯುತ್ತಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು.