Advertisement

ಬೆಂಗಳೂರು: ಶಸ್ತ್ರಧಾರಿ ಸಮಾಜ ಘಾತುಕ ಶಕ್ತಿಗಳನ್ನು ಶಸ್ತ್ರರಹಿತವಾಗಿಯೂ ಎದುರಿಸುವುದಕ್ಕೆ ರಾಜ್ಯದ ಪೊಲೀಸರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ಇಸ್ರೇಲಿ “ಕ್ರಾವ್‌ ಮಾಗಾ’ ಸಮರಕಲೆಯನ್ನು ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಪೊಲೀಸ್‌ನ ಆಂತರಿಕ ಭದ್ರತ ದಳ (ಐಎಸ್‌ಡಿ)ದಲ್ಲಿ ಪರಿಚಯಿಸಲಾಗುತ್ತಿದೆ.

Advertisement

ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಿ ಅನೇಕ ರಕ್ಷಣ ಸಂಬಂಧಿ ಕರಾರುಗಳಿಗೆ ಸಹಿ ಹಾಕಿದ ಬಳಿಕ ಅಲ್ಲಿನ ಅತ್ಯಾಧುನಿಕ ಸಮರ ಕಲೆ “ಕ್ರಾವ್‌ ಮಾಗಾ’ಗೆ ಪ್ರಾಮುಖ್ಯ ದೊರೆತಿದೆ. ಸೇನೆಯಲ್ಲಿ ಇದನ್ನು ಅಳ ವಡಿಸಲಾಗಿದೆ. ಈಗ ರಾಜ್ಯ ಪೊಲೀಸ್‌ ಪಡೆಯಲ್ಲೂ ಜಾರಿಗೊಳಿಸಲಾಗುತ್ತಿದೆ.

ಎಲ್ಲೆಲ್ಲಿ ಬಳಕೆ? :

“ಕ್ರಾವ್‌ ಮಾಗಾ’ ತರಬೇತಿ ಪಡೆದ ರಾಜ್ಯದ ಕಮಾಂಡೋಗಳನ್ನು ಭದ್ರತೆ, ಭಯೋತ್ಪಾದನೆ ನಿಗ್ರಹ ದಳ, ಕರಾವಳಿ ಕಾವಲು ಪಡೆ, ನಕ್ಸಲ್‌ ನಿಗ್ರಹ ದಳ ಮತ್ತಿತರ ಕಡೆ ನಿಯೋಜಿಸಲಾಗುತ್ತದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಕಮಾಂಡೊಗಳಿಗೆ ತರಬೇತಿ ನೀಡಿ ರಾಜ್ಯದ ಆಂತರಿಕ ಭದ್ರತೆ ಹೆಚ್ಚಿಸಿಕೊಳ್ಳಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕ್ರಾವ್‌ ಮಾಗಾ ತರಬೇತಿಗೆ ಐಎಸ್‌ಡಿಯಲ್ಲಿ ದೈಹಿಕವಾಗಿ ಸಮರ್ಥವಾಗಿರುವ 30 ಮಹಿಳಾ ಸಿಬಂದಿ ಸೇರಿ ಸುಮಾರು 100 ಮಂದಿ ಈಗಾಗಲೇ ಆಯ್ಕೆಯಾಗಿದ್ದು, 20 ಮಂದಿಯ ಸೇನಾ ತಂಡ ತರಬೇತಿ ನೀಡಲಿದೆ.

ಏನಿದು ಕ್ರಾವ್‌ ಮಾಗಾ? :

Advertisement

“ಕ್ರಾವ್‌ಮಾಗಾ’ ಇಸ್ರೇಲಿ ರಕ್ಷಣ ಪಡೆಗಳಿಗಾಗಿ ಅಭಿವೃದ್ಧಿ ಪಡಿಸಿದ ಆತ್ಮರಕ್ಷಣೆಯ ಹೋರಾಟ ಕಲೆ. ಐಕಿಡೊ, ಬಾಕ್ಸಿಂಗ್‌, ಕುಸ್ತಿ, ಜೂಡೋ ಮತ್ತು ಕರಾಟೆ ತಂತ್ರಗಳನ್ನು ಒಳಗೊಂಡಿದೆ. ಇಸ್ರೇಲ್‌ನ ಗುಪ್ತಚರ ಸಂಸ್ಥೆಗಳು ಇದನ್ನು ಬಳಸಿ ಯಶಸ್ವಿಯಾಗಿವೆ. ಮುಖ್ಯವಾಗಿ ಯಾವುದೇ ಶಸ್ತ್ರಧಾರಿಯ ಮೇಲೂ ದಾಳಿ ನಡೆಸಬಹುದು.

ಐಎಸ್‌ಡಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ರಾವ್‌ಮಾಗಾ ಪರಿಚಯಿಸಲಾಗುತ್ತಿದೆ.  ಇಲಾಖೆ ವ್ಯಾಪ್ತಿಯ ಎಲ್ಲ ವಿಭಾಗಗಳಲ್ಲಿಯೂ ಕ್ರಾವ್‌ ಮಾಗಾ ತರಬೇತಿ ಪಡೆದ  ಅಧಿಕಾರಿ-ಸಿಬಂದಿ ನಿಯೋಜಿಸಲಾಗುತ್ತದೆ. -ಭಾಸ್ಕರ್‌ ರಾವ್‌, ಎಡಿಜಿಪಿ, ಐಎಸ್‌ಡಿ

 

ಮೋಹನ್‌ ಭದ್ರಾವತಿ

 

Advertisement

Udayavani is now on Telegram. Click here to join our channel and stay updated with the latest news.

Next