ಬೈಲಹೊಂಗಲ: (ಸಂಗೊಳ್ಳಿ ರಾಯಣ್ಣ ವೇದಿಕೆ): ದೇಶಕ್ಕಾಗಿ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಜಾತ್ಯತೀತವಾಗಿ ಗುರುತಿಸಬೇಕು. ರಾಯಣ್ಣನ ಕುರುಹುಗಳನ್ನು ಪತ್ತೆ ಮಾಡಿ ಸಂಶೋಧನೆ ಮಾಡಬೇಕು ಎಂದು ಸಂಗೊಳ್ಳಿ ಗುರುಸಿದ್ಧಲಿಂಗೇಶ್ವರ ಸಂಸ್ಥಾನ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಸಂಗೊಳ್ಳಿ ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ಸಂಜೆ ಉದ್ಘಾಟನೆಗೊಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಯುವಕರು ದುಶ್ಚಟಗಳಿಗೆ ಬಲಿಯಾಗಿ ಹಾಳಾಗುತ್ತಿದ್ದಾರೆ. ಅವರು ಆರೋಗ್ಯದತ್ತ ಗಮನ ಹರಿಸಿ ದೇಶದ ಅಭಿವೃದ್ಧಿಗೆ ಕಾರ್ಯ ಪ್ರವೃತ್ತರಾಗಬೇಕು. ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಸಂಗೊಳ್ಳಿಯನ್ನು ಮಾದರಿ ಗ್ರಾಮವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ಬಲಿದಾನ ಮಾಡಿರುವ ವೀರರ ಸ್ಮರಣೆ ಅತ್ಯವಶ್ಯವಾಗಿದೆ. ಯುವಕರು ರಾಯಣ್ಣನ ಶೌರ್ಯ, ಸಾಹಸ, ದೇಶಾಭಿಮಾನ ಮೈಗೂಡಿಸಿಕೊಂಡು ಅಂತಾರಾಷ್ಟ್ರ ಮಟ್ಟದಲ್ಲಿ ಹೆಮ್ಮೆ ಪಡುವಂತ ಕಾರ್ಯ ಮಾಡಬೇಕು ಎಂದರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಗೊಳ್ಳಿಯಲ್ಲಿ ನೂರಾರು ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದರು.
ಸರ್ಕಾರದ ಮುಖ್ಯಸಚೇತಕ ಗಣೇಶ ಹುಕ್ಕೇರಿ ಸಮಾರಂಭ ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಲಕ್ಷ್ಮಣರಾವ ಚಿಂಗಳೆ ಮಾತನಾಡಿದರು. ತಾಪಂ ಅಧ್ಯಕ್ಷೆ ಶೈಲಾ ಸಿದ್ರಾಮನಿ, ಗ್ರಾಪಂ ಅಧ್ಯಕ್ಷೆ ಯಲ್ಲವ್ವ ತಳವಾರ, ಉಪಾಧ್ಯಕ್ಷ ಬಸವರಾಜ ಕೊಡ್ಲಿ, ತಾಪಂ ಸದಸ್ಯ ಗೌಸಸಾಬ ಬುಡ್ಡೆಮುಲ್ಲಾ, ಜಿಪಂ ಸದಸ್ಯ ಅನಿಲ ಮ್ಯಾಕಲಮರಡಿ ಇದ್ದರು. ಎಸಿ ಶಿವಾನಂದ ಭಜಂತ್ರಿ ಸ್ವಾಗತಿಸಿದರು. ಬಸವರಾಜ ಕುಪ್ಪಸಗೌಡರ ನಿರೂಪಿಸಿದರು. ತಹಶೀಲ್ದಾರ್ ಪ್ರಕಾಶ, ಕಿತ್ತೂರು ಚನ್ನಮ್ಮ ಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.