Advertisement

ಬ್ರಾತ್‌ವೇಟ್‌, ಹೆಟ್‌ಮೇಯರ್‌ ಪ್ರತಿಹೋರಾಟ

07:05 AM Dec 04, 2017 | Team Udayavani |

ವೆಲ್ಲಿಂಗ್ಟನ್‌: ಆತಿಥೇಯ ನ್ಯೂಜಿಲ್ಯಾಂಡ್‌ ಮತ್ತು ವೆಸ್ಟ್‌ಇಂಡೀಸ್‌ ನಡುವಣ ವೆಲ್ಲಿಂಗ್ಟನ್‌ ಟೆಸ್ಟ್‌ ಕುತೂಹಲದಿಂದ ಸಾಗುತ್ತಿದೆ. ಮೂರನೇ ದಿನದಾಟದ ಮುಗಿದಿದ್ದು ವೆಸ್ಟ್‌ಇಂಡೀಸ್‌ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪ್ರತಿಹೋರಾಟ ನೀಡುತ್ತಿದೆ.

Advertisement

ಮೊದಲ ಇನ್ನಿಂಗ್ಸ್‌ನಲ್ಲಿ 386 ರನ್‌ ಹಿನ್ನಡೆ ಪಡೆದ ವೆಸ್ಟ್‌ಇಂಡೀಸ್‌ ತಂಡವು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭರ್ಜರಿ ಆಟ ಆಡುತ್ತಿದೆ. ಆರಂಭಿಕ ಕ್ರೆಗ್‌ ಬ್ರಾತ್‌ವೇಟ್‌ ಮತ್ತು ಶಿಮ್ರಾನ್‌ ಹೆಟ್‌ಮೇಯರ್‌ ಅವರ ಅರ್ಧಶತಕದಿಂದಾಗಿ ವೆಸ್ಟ್‌ಇಂಡೀಸ್‌ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟಿಗೆ 214  ರನ್‌ ಪೇರಿಸಿದೆ. ಇನ್ನಿಂಗ್ಸ್‌ ಸೋಲು ತಪ್ಪಿಸಲು ವೆಸ್ಟ್‌ಇಂಡೀಸ್‌ ಇನ್ನೂ 172 ರನ್‌ ಗಳಿಸಬೇಕಾಗಿದೆ. ಬ್ರಾತ್‌ವೇಟ್‌ 79 ರನ್ನುಗಳಿಂದ ಆಡುತ್ತಿದ್ದಾರೆ.

ಬ್ಲಿಂಡೆಲ್‌ ಶತಕ
9 ವಿಕೆಟಿಗೆ 447 ರನ್ನುಗಳಿಂದ ದಿನದಾಟ ಆರಂಭಿಸಿದ ನ್ಯೂಜಿಲ್ಯಾಂಡ್‌ 9 ವಿಕೆಟಿಗೆ 520 ರನ್‌  ಪೇರಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. 57 ರನ್ನಿನಿಂದ ದಿನದಾಟ ಆರಂಭಿಸಿದ ಟಾಮ್‌ ಬ್ಲಿಂಡೆಲ್‌ ಅವರು ಟ್ರೆಂಟ್‌ ಬೋಲ್ಟ್ ಜತೆಗೂಡಿ ಅಮೋಘವಾಗಿ ಆಡಿದರು. ಈ ಪಂದ್ಯದ ಮೂಲಕ ಟೆಸ್ಟ್‌ಗೆ ಪಾದಾರ್ಪಣೆಗೈದ ಬ್ಲಿಂಡೆಲ್‌ ಶತಕ ಪೂರ್ತಿಗೊಳಿಸಿದ ಬಳಿಕ ನ್ಯೂಜಿಲ್ಯಾಂಡ್‌ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಅವರು ಸರಿಯಾಗಿ 100 ಎಸೆತ ಎದುರಿಸಿ 13 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 107 ರನ್‌ ಗಳಿಸಿ ಅಜೇಯರಾಗಿ ಉಳಿದರು. ಅಂತಿಮ ವಿಕೆಟಿಗೆ ಅವರು ಬೋಲ್ಟ್ ಜತೆ 78 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಇದರಿಂದಾಗಿ ನ್ಯೂಜಿಲ್ಯಾಂಡ್‌ ಮೊತ್ತ 500ರ ಗಡಿ ದಾಟುವಂತಾಯಿತು.

2007ರಲ್ಲಿ ಮ್ಯಾಟ್‌ ಪ್ರಿಯರ್‌ ಬಳಿಕ ಟೆಸ್ಟ್‌ಗೆ ಪಾದಾರ್ಪಣೆಗೈದ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ವಿಕೆಟ್‌ಕೀಪರ್‌ ತಥಾ ಬ್ಯಾಟ್ಸ್‌ಮನ್‌ ಎಂಬ ಗೌರವಕ್ಕೆ ಬ್ಲಿಂಡೆಲ್‌ ಪಾತ್ರರಾಗಿದ್ದಾರೆ.

ವಿಂಡೀಸ್‌ ಪ್ರತಿಹೋರಾಟ
386 ರನ್‌ ಹಿನ್ನಡೆಯಿದ್ದರೂ ವೆಸ್ಟ್‌ಇಂಡೀಸ್‌ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭರ್ಜರಿ ಪ್ರತಿ ಹೋರಾಟ ನೀಡುತ್ತಿದೆ. ಮೊದಲ ವಿಕೆಟಿಗೆ ಬ್ರಾತ್‌ವೇಟ್‌ ಮತ್ತು ಕೈರನ್‌ ಪೊವೆಲ್‌ 72 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಈ ಹಂತದಲ್ಲಿ 40 ರನ್‌ ಗಳಿಸಿದ ಪೊವೆಲ್‌ ಔಟಾದರು. ಬ್ರಾತ್‌ವೇಟ್‌ ಆಬಳಿಕ ಹೆಟ್‌ಮೇಯರ್‌ ಜತೆಗೂಡಿ ದ್ವಿತೀಯ ವಿಕೆಟಿಗೆ 94 ರನ್‌ ಪೇರಿಸಿದರು. ಉತ್ತಮವಾಗಿ ಆಡುತ್ತಿದ್ದ ಹೆಟ್‌ಮೇಯರ್‌ ಅವರನ್ನು ಹೆನ್ರಿ ಉರುಳಿಸಿದರು.

Advertisement

ಕ್ರೀಸ್‌ನ ಒಂದು ಕಡೆ ಗಟ್ಟಿಯಾಗಿ ನಿಂತಿರುವ ಬ್ರಾತ್‌ವೇಟ್‌ ಮುರಿಯದ ಮೂರನೇ ವಿಕೆಟಿಗೆ ಹೋಪ್‌ ಜತೆ ಈಗಾಗಲೇ 48 ರನ್‌ ಪೇರಿಸಿದ್ದಾರೆ. ಇವರಿಬ್ಬರ ಜತೆಯಾಟದ ಮೇಲೆ ವೆಸ್ಟ್‌ಇಂಡೀಸ್‌ನ ಸ್ಥಿತಿ ಅವಲಂಭಿಸಿದೆ. ಬ್ರಾತ್‌ವೇಟ್‌ 79 ಮತ್ತು ಹೋಪ್‌ 21 ರನ್ನುಗಳಿಂದ ಆಡುತ್ತಿದ್ದಾರೆ. ಇನ್ನಿಂಗ್ಸ್‌ ಸೋಲು ತಪ್ಪಿಸಲು ವೆಸ್ಟ್‌ಇಂಡೀಸ್‌ ಇನ್ನೂ 172 ರನ್‌ ಗಳಿಸಬೇಕಾಗಿದೆ.

ಸಂಕ್ಷಿಪ್ತ ಸ್ಕೋರು: ವೆಸ್ಟ್‌ಇಂಡೀಸ್‌ 134 ಮತ್ತು 2 ವಿಕೆಟಿಗೆ 214 (ಬ್ರಾತ್‌ವೇಟ್‌ 79 ಬ್ಯಾಟಿಂಗ್‌, ಕೈರನ್‌ ಪೊವೆಲ್‌ 40, ಹೆಟ್‌ಮೇಯರ್‌ 66, ಹೋಪ್‌ 21 ಬ್ಯಾಟಿಂಗ್‌, ಮ್ಯಾಟ್‌ ಹೆನ್ರಿ 33ಕ್ಕೆ 2); ನ್ಯೂಜಿಲ್ಯಾಂಡ್‌ 9 ವಿಕೆಟಿಗೆ 520 ಡಿಕ್ಲೇರ್‌x (ಗ್ರ್ಯಾಂಡ್‌ಹೋಮ್‌ 105, ಟಾಮ್‌ ಬ್ಲಿಂಡೆಲ್‌ 107 ಔಟಾಗದೆ, ನಿಕೋಲ್ಸ್‌67, ರಾಸ್‌ ಟಯ್ಲರ್‌ 93, ರಾವಲ್‌ 42, ಲಾಥಂ 37, ರೋಶ್‌ 85ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next