ಕೆ.ಆರ್.ಪುರ: ತನ್ನ ನಾಯಿಯನ್ನು ಪಕ್ಕದ ಮನೆಯ ನಾಯಿ ಕಚ್ಚಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ಕಾಂಪೌಂಡ್ ಒಳಗೆ ನುಗ್ಗಿ ನಾಯಿಯನ್ನು ಹಗ್ಗದಿಂದ ಕಟ್ಟಿಹಾಕಿ ದೊಣ್ಣೆಯಿಂದ ಮನಸೋಇಚ್ಛೆ ಹೊಡೆ ದು ವಿಕೃತಿ ಮರೆದಿರುವ ಘಟನೆ ಭಟ್ಟರಹಳ್ಳಿ ಸಮೀಪದ ಮಂಜುನಾಥ್ ಲೇಔಟ್ ನಲ್ಲಿ ನಡೆದಿದೆ. ಘಟನೆ ಸಂಬಂಧ ಮೂವರು ಆರೋಪಿಗಳನ್ನು ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಭಟ್ಟರಹಳ್ಳಿ ಸಮೀಪದ ಮಂಜುನಾಥ್ ಲೇಔಟ್ ನಿವಾಸಿ ಗದ್ದಿಗೆಪ್ಪ ಎಂಬುವವರಿಗೆ ಸೇರಿದ ನಾಯಿ(ಅಚ್ಚ) ಯನ್ನು ಹಿಗ್ಗಾಮುಗ್ಗಾ ಥಳಿಸಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದೆ. ನಾಗರಾಜ್ ಅವರ ನಾಯಿಯನ್ನು ಗದ್ದಿಗೆಪ್ಪ ಎಂಬುವರ ನಾಯಿ ಕಚ್ಚಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಸೋಮವಾರ ರಾತ್ರಿ 10 ಗಂಟೆ ಸಮಯದಲ್ಲಿ ಪಕ್ಕದ ಮನೆ ನಾಗರಾಜ್ ಅವರ ಮೂವರು ರಾಹುಲ್, ರಜತ್ ಮತ್ತು ರಂಜಿತ್ ಮನೆಯ ಕಾಂಪೌಡ್ ಒಳಗೆ ನುಗ್ಗಿ ಕಟ್ಟಿದ್ದ ನಾಯಿಯನ್ನು ಹಗ್ಗದಿಂದ ಕಟ್ಟಿಹಾಕಿ ನಾಯಿ ಸುತ್ತ ಸುತ್ತುವರೆದು ಕಣ್ಣುಗುಡ್ಡೆ ಮಾಂಸ ಹೊರ ಬರುವಂತೆ ಮನಬಂದಂತೆ ದೊಣ್ಣೆಗಳಿಂದ ಹೊಡೆದಿದ್ದಾರೆ.
ನಾಯಿಯ ಮಾಲೀಕ ಹೊಡೆಯದಂತೆ ಪರಿ ಪರಿಯಾಗಿ ಕೇಳಿಕೊಂಡರೂ ನಾಯಿಯನ್ನು ದೊಣ್ಣೆಗಳಿಂದ ಹೊಡೆಯುವುದನ್ನು ನಿಲ್ಲಿಸಲಿಲ್ಲ. ಹಗ್ಗದಿಂದ ಕಟ್ಟಿಹಾಕಿ ನಾಯಿಯನ್ನು ಹೊಡೆಯುವ ವಿಡಿಯೋ ವೈರಲ್ ಅಗಿದ್ದು, ಪ್ರಾಣಿ ಪ್ರಿಯರು ಹಾಗೂ ಸಾರ್ವಜನಿಕರು ಈ ಪೈಶಾಚಿಕ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಲೆಗೆ ತೀವ್ರ ಗಾಯಗೊಂಡಿರುವ ನಾಯಿಗೆ ದೊಮ್ಮಲೂರಿನ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಹಿನ್ನಲೆ ನಾಯಿ ಮಾಲೀಕ ಗದ್ದಿಗೆಪ್ಪ ನಾಯಿಗಳ ಜಗಳ ವಿಚಾರದಲ್ಲಿ ನಮ್ಮ ಮನೆ ಕಾಂಪೌಂಡ್ ಒಳಗೆ ಬಂದು ಕಟ್ಟಿದ ನಾಯಿಯನ್ನು ಮನಬಂದಂತೆ ಹೊಡೆಯುತ್ತಿರುವ ಏಕೆ ಎಂದು ಹೊಡೆಯುತ್ತಿದ್ದೀರಾ ಎಂದು ಪ್ರಶ್ನಿಸಿದಕ್ಕೆ ರಾಹುಲ್ ಎಂಬಾತ ಕೈಯಲಿದ್ದ ದೊಣ್ಣೆಯಿಂದ ನನ್ನ ತಲೆಗೆ ಹೊಡೆದು ಗಾಯಗೊಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೇ “ಅಡ್ಡ ಬಂದರೆ ಅವರೆಲ್ಲರನ್ನೂ ಹೊಡೆದು ಸಾಯಿಸುತ್ತೇನೆ’ ಎಂದು ಪ್ರಾಣ ಬೆದರಿಕೆ ಹಾಕಿದ್ದಾನೆ. ಈ ಮೂವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಗದ್ದಿಗೆಪ್ಪ ದೂರು ದಾಖಲಿಸಿದ್ದಾರೆ.
ದೂರಿನ ಆಧಾರದ ಮೇರೆಗೆ ನಾಯಿ ಮೇಲೆ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.