ಬಿ. ಮಂಜುನಾಥ
ಕೆ.ಆರ್.ಪೇಟೆ: ಬಾಲ ಕಾರ್ಮಿಕ ನಿಷೇಧ ನೀತಿ ದೇಶದಲ್ಲಿ ಇನ್ನೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲದಂತೆ ಕಾಣುತ್ತಿದೆ. ರಾಜಕಾರಣಿಗಳು, ಅಧಿಕಾರಿಗಳು ದೊಡ್ಡ ವೇದಿಕೆಗಳಲ್ಲಿ ಭಾಷಣ ಮಾಡಿ ಸುಮ್ಮನಾಗುತ್ತಾರೆ. ಆದರೆ ದೇಶದಲ್ಲಿ ಕಣ್ಣಿಗೆ ಕಾಣದಂತೆ ಲಕ್ಷಾಂತರ ಮಕ್ಕಳು ತಮ್ಮ ಹಕ್ಕುಗಳಿಂದ ದಮನಿತಗೊಳ್ಳುತ್ತಿವೆ. ಶಿಕ್ಷಣ, ಮೂಲಭೂತ ಹಕ್ಕುಗಳು, ಸ್ವಾತಂತ್ರ್ಯಗಳಿಂದ ವಂಚಿರಾಗುತ್ತಿರುವುದಲ್ಲದೇ, ಭಿಕ್ಷಾಟನೆ, ಕಳ್ಳತನ, ಬಾಲಾಪರಾಧಗಳಿಗಾಗಿ ದುರ್ಬಳಕೆಯಾಗುತ್ತಿದ್ದಾರೆ.ಲಕ್ಷಾಂತರ ಮಕ್ಕಳಿಗೆ ತಮ್ಮ ಹಕ್ಕುಗಳ ಅರಿವೇ ಇಲ್ಲದಿರುವುದು ದುರಂತ.
ಬಿಕ್ಷಾಟನೆಗೆ ಮಕ್ಕಳ ಬಳಕೆ: ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುವ ಅತ್ಯಂತ ಕೆಟ್ಟ ವಿಧಾನಗಳಲ್ಲಿ ಭಿಕ್ಷಾಟನೆ. ಮಹಿಳೆಯರು ತಮ್ಮ ಮಕ್ಕಳಿಗೆ ನಿದ್ದೆ ಬರಿಸುವ ಚುಚ್ಚುಮದ್ದು ನೀಡಿ, ಅವರ ಹೆಸರಿನಲ್ಲಿ ಭಿಕ್ಷಾಟನೆ ನಡೆಸುತ್ತಾರೆ. ಜತೆಗೆ ಮಕ್ಕಳಿ ಶಿಕ್ಷಣ ನೀಡದೇ ಅಥವಾ ನೀಡಲಾಗದೇ ಅವರನ್ನು ಭಿಕ್ಷಾಟನೆ ದೂಡುತ್ತಾರೆ. ಇಂತಹ ಮಕ್ಕಳಿಗಾಗಿ ಸರ್ಕಾರ ಹಲವು ಯೋಜನೆ ಗಳನ್ನು ತಂದರೂ ಸಮರ್ಪಕವಾಗಿ ಅನುಷ್ಠಾನ ಗೊಳ್ಳದೆ, ಯೋಜನೆಗಳು ಹಳ್ಳಹಿಡಿಯುತ್ತಿವೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಿಲ್ಲದ ಬಾಲ ಕಾರ್ಮಿಕ ಪದ್ಧತಿ: ದೇಶದಲ್ಲಿ ಬಾಲ ಕಾರ್ಮಿಕ ನೀತಿ ಅತ್ಯಂತ ಕಠಿಣವಾಗಿದೆ. ಆದರೂ ಕೂಡ ಮಕ್ಕಳು ಗ್ಯಾರೇಜ್, ಸರ್ವೀಸ್ ಸ್ಟೇಷನ್, ಲೇತ್, ವೆಲ್ಡಿಂಗ್, ಅಂಗಡಿ ಸೇರಿದಂತೆ ಹಲವೆಡೆಗಳಲ್ಲಿ ಜೀವನದ ಬಂಡಿ ಸಾಗಿಸಲು ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಅಮೂಲ್ಯ ಬಾಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಇದ್ದರೂ, ಅಧಿಕಾರಿಗಳು ಅಂಗಡಿ ಮಾಲೀಕರಿಂದ ಮಾಮೂಲಿ ಪಡೆದುಕೊಂಡು ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇನ್ನಾದರೂ ಪೊಲೀಸ್ ಅಧಿಕಾರಿಗಳು ಎಚ್ಚೆತ್ತು ಕೊಳ್ಳಬೇಕು ಎಂದು ಜನರ ಆಶಯವಾಗಿದೆ.
ಪ್ರಯೋಜನಕ್ಕೆ ಬಾರದ ಇಲಾಖೆಗಳು: ಮಕ್ಕಳ ರಕ್ಷಣೆ, ಮಕ್ಕಳು ಹಕ್ಕು ಪರಿಪಾಲನೆ, ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸುವುದಕ್ಕಾಗಿ ಹತ್ತಾರು ನಿಯಮಗಳಿವೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿಯೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಕ್ಕಳು ರಕ್ಷಣಾ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಖಾಸಗಿ ಸಂಸ್ಥೆಯೊಂದಕ್ಕೆ ಸರ್ಕಾರ ಹಣ ಹಾಗೂ ಅನುಮತಿ ನೀಡಿ ಮಕ್ಕಳ ಭಿಕ್ಷಾಟಣೆ ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಅಧಿಕಾರಿಗಳ ತಂಡವನ್ನು ನೇಮಕಗೊಳಿಸಿದೆ. ಶಾಲೆಯಿಂದ ಹೊರಗುಳಿದಿರುವ ಮತ್ತು ಅಲೆಮಾರಿಗಳ ಮಕ್ಕಳು ಯಾವ ಸಮಯದಲ್ಲಿ ಬಂದರೂ ಶಾಲೆಗೆ ಸೇರಿಸಿಕೊಳ್ಳಬೇಕು. ಮಕ್ಕಳು ಶಾಲೆಗೆ ಬಾರದಿದ್ದರೆ, ಮಕ್ಕಳಿರುವ ಸ್ಥಳಕ್ಕೆ ತೆರಳಿಯೇ, ಶಿಕ್ಷಕರು ಮಕ್ಕಳಿಗೆ ಪಾಠ ಹೇಳಿಕೊಡಬೇಕು ಎಂದು ಶಿಕ್ಷಣ ಇಲಾಖೆ ನಿಯಮ ರೂಪಿಸಿದೆ. ಆದರೆ ಯೋಜನೆಗಳು ಫಲಾನುಭವಿಗಳಿಗೆ ತಲುಪುತ್ತಿಲ್ಲ. ಮುಂದಿನ ದಿನಗಳಲ್ಲಾದರೂ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿ ಮಕ್ಕಳಿಗೆ ನ್ಯಾಯ ಒದಗಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.