Advertisement

ಕೆಸರು ಗದ್ದೆಯಾಗಿದೆ ಕೆ.ಆರ್‌.ಮಾರ್ಕೆಟ್‌

10:34 AM Nov 01, 2019 | Suhan S |

ಬೆಂಗಳೂರು: ನಿತ್ಯ ನೂರಾರು ವಾಹನಗಳು, ಲಕ್ಷಾಂತರ ಜನರು ಓಡಾಡುವ ಕೆ.ಆರ್‌.ಮಾರುಕಟ್ಟೆ ಬಸ್‌ ನಿಲ್ದಾಣ ಕೆಸರು ಗದ್ದೆಂತಾಗಿದ್ದು, ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು ಬಿಡಾಡಿ ದನಗಳು ಓಡಾಡುವಂತಾಗಿವೆ.

Advertisement

ಸ್ವಚ್ಛತೆ ಮಾತಂತೂ ಇಲ್ಲವೇ ಇಲ್ಲ. ನಗರದ ಹೃದಯ ಭಾಗವಾಗಿರುವ ಕೆ.ಆರ್‌.ಮಾರುಕಟ್ಟೆ ಪ್ರದೇಶ ಪ್ರತಿದಿನವೂ ಜನಜಂಗುಳಿಯಿಂದ ಕೂಡಿದ್ದು, ಲಕ್ಷಾಂತರ ಜನರು ಓಡಾಡುವ ಸ್ಥಳ. 1264 ಬಿಎಂಟಿಸಿ ಬಸ್‌ಗಳು, 135 ಕೆಎಸ್‌ ಆರ್‌ಟಿಸಿ ಬಸ್‌ಗಳು, 500ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಇಲ್ಲಿಂದಲೇ ಸಂಚರಿಸುತ್ತವೆ.

ಬಸ್‌ಗಳು ಕಲಾಸಿಪಾಳ್ಯ ಮೊದಲನೇ ಮುಖ್ಯರಸ್ತೆ, ಕೆ.ಆರ್‌.ಮಾರುಕಟ್ಟೆ, ಅಯ್ಯಪ್ಪ ಸ್ವಾಮಿ, ಮಾರಮ್ಮ ದೇವಸ್ಥಾನದ ಬಳಿಯೇ ನಿಲ್ಲುತ್ತವೆ. ಈ ರಸ್ತೆ ವಾಹನ ಸಂಚಾರಕ್ಕೆ ದುಸ್ತರವಾಗಿದ್ದು, ಸಾರ್ವಜನಿಕರು ಕೆಸರಿನಲ್ಲಿಯೇ ಓಡಾಡುವಂತಾಗಿದೆ. ನಗರದ ಹೊರವಲಯದ ರೈತರು ಹೂವು, ಹಣ್ಣು, ತರಕಾರಿಯನ್ನು ಬಸ್‌ಗಳಲ್ಲಿ ಇದೇ ರಸ್ತೆಯಲ್ಲಿ ತರಬೇಕು. ಚಿಲ್ಲರೆ ಅಂಗಡಿಗಳ ವ್ಯಾಪಾರಿಗಳು, ಹೂವಿನ ವ್ಯಾಪಾರಿಗಳು ಖರೀದಿಗಾಗಿ ಮಾರುಕಟ್ಟೆಗೆ ಬರುತ್ತಾರೆ. ಇದಲ್ಲದೆ, ವಾಣಿವಿಲಾಸ ಆಸ್ಪತ್ರೆ ಮತ್ತು ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾವಿರಾರು ರೋಗಿಗಳು ಬಂದು ಹೋಗುತ್ತಾರೆ. ಆದರೆ, ಇಲ್ಲಿನ ರಸ್ತೆ ಓಡಾಟಕ್ಕೆ ಸಾಧ್ಯವಿಲ್ಲದಂತಾಗಿದೆ.

ಕಲಾಸಿಪಾಳ್ಯ ಒಂದನೇ ಮುಖ್ಯರಸ್ತೆಯಿಂದ ಕೆ.ಆರ್‌. ಮಾರುಕಟ್ಟೆ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಯ ಬದಿ ಇರುವ ಮುನೇಶ್ವರಸ್ವಾಮಿ ದೇವಸ್ಥಾನದ ಮುಂಭಾಗವೇ ಕಸ ರಾಶಿ ಇದ್ದು, ತೆರವುಗೊಳಿಸಲು ಪಾಲಿಕೆ ಅಧಿಕಾರಿಗಳು ಮುಂದಾಗಿಲ್ಲ. ಮಾರಮ್ಮ ದೇವಸ್ಥಾನದ ಮುಂಭಾಗದ ರಸ್ತೆಯೂ ಸಿಮೆಂಟ್‌ ರಸ್ತೆಯಾಗಿದ್ದರೂ, ಗುಂಡಿಗಳು ರಾರಾಜಿಸುತ್ತಿವೆ. ಕೆ.ಆರ್‌.ಮಾರುಕಟ್ಟೆ ಹೊಸ ಬಸ್‌ ನಿಲ್ದಾಣ ಕಾಮಗಾರಿ ಸುತ್ತಲ ಪ್ರದೇಶದಲ್ಲಿ ಕಸದ ರಾಶಿ ಬಿದ್ದಿದ್ದು, ಬಿಡಾಡಿದನಗಳ ಆವಾಸ ಸ್ಥಾನವಾಗಿದೆ. ಈ ಪ್ರದೇಶ ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟಿದ್ದು, ದುವಾರ್ಸನೆಯಿಂದ ಕೂಡಿದೆ.

ರಸ್ತೆಗಳು ಕೆಸರು ಗದ್ದೆಯಂತಾಗಿದ್ದು, ಜನರು ಇದೇ ರಸ್ತೆಯಲ್ಲಿ ಓಡಾಟ ನಡೆಸಬೇಕಾದ ದುಸ್ಥಿತಿ ಎದುರಿಸುತ್ತಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಬಿಎಂಟಿಸಿ ಮುಂದಾಗಿದೆ. ಆದರೆ, ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಪಾಲಿಕೆ ವಿಫ‌ಲವಾಗಿದೆ. ಪ್ರಯಾಣಿಕರು ಮತ್ತು ಸಾರಿಗೆ ಸಿಬ್ಬಂದಿಗೆ ತಾತ್ಕಾಲಿಕವಾಗಿ ಕನಿಷ್ಠ ಮೂಲಸೌಕರ್ಯ ಕಲ್ಪಿಸಿಲ್ಲ. ಬೀದಿ ದೀಪಗಳಿಲ್ಲ. ಕುಳಿತು ದಣಿವಾರಿಸಿಕೊಳ್ಳಲು ಕುರ್ಚಿಗಳಿಲ್ಲ. ಶೌಚಾಲಯಗಳಿದ್ದರೂ, ಬಳಕೆಗೆ ಯೋಗ್ಯವಾಗಿಲ್ಲ.

Advertisement

ಫುಟ್ ಪಾತ್‌ ಮೇಲೆ ಗೂಡಂಗಡಿ: ಕೆ.ಆರ್‌. ಮಾರುಕಟ್ಟೆ ಬಸ್‌ ನಿಲ್ದಾಣದ ಪ್ರದೇಶದಲ್ಲಿರುವ ಪಾದಚಾರಿ ರಸ್ತೆಗಳನ್ನು ಗೂಡಂಗಡಿಗಳು ಆಕ್ರಮಿಸಿಕೊಂಡಿದ್ದು, ವಾಹನ ಸಂಚರಿಸುವ ರಸ್ತೆ ಮೇಲೆ ಜನರು ಸಂಚರಿಸಬೇಕಾಗಿದೆ. ವೃದ್ಧರು ಕೆಸರು ರಸ್ತೆಯಲ್ಲಿ ಸಂಚರಿಸಲು ತೊಂದರೆ ಅನುಭವಿಸುತ್ತಿದ್ದು, ವಾಹನಗಳು ಎಗ್ಗಿಲ್ಲದೇ ಸಾಗುತ್ತಿವೆ. ಬಸ್‌ಗಳು ಸಂಚರಿಸುವಾಗ ಪಕ್ಕದಲ್ಲೇ ಸಂಚರಿಸುವ ಜನರಿಗೆ ಕೆಸರು ಬೀಳಲಿದ್ದು, ರಸ್ತೆ ಸರಿಪಡಿಸುವ ಗೋಜಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮುಂದಾಗಿಲ್ಲ ಎಂದು ಪಾದಚಾರಿಗಳು ಆರೋಪಿಸಿದ್ದಾರೆ.

ಆಮೆಗತಿಯಲ್ಲಿ ಬಸ್‌ ನಿಲ್ದಾಣ ಕಾಮಗಾರಿ : ಕೆ.ಆರ್‌.ಮಾರುಕಟ್ಟೆ ಬಸ್‌ ನಿಲ್ದಾಣ ನಿರ್ಮಾಣಕ್ಕೆ 2016ರ ಆ.18ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು. 4.13 ಎಕರೆ ವಿಸ್ತೀರ್ಣದಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಬಸ್‌ ನಿಲ್ದಾಣ ನಿರ್ಮಿಸಲು ಕೆಎಂವಿ ಪ್ರಾಜೆಕ್ಟಸ್‌ ಲಿಮಿಟೆಡ್‌ ಸಂಸ್ಥೆ ಗುತ್ತಿಗೆ ಪಡೆದಿತ್ತು. 60 ಕೋಟಿ ರೂ. ಪೈಕಿ ನಗರ ಭೂಸಾರಿಗೆ ನಿರ್ದೇಶನಾಲಯವು 25 ಕೋಟಿ ರೂ., ಉಳಿದ ಹಣವನ್ನು ಬಿಎಂಟಿಸಿ ಭರಿಸಲಿದೆ. ಎರಡು ವರ್ಷದಲ್ಲಿ ಕಾಮಗಾರಿ ಮುಗಿಸುವುದಾಗಿ ತಿಳಿಸಿದ್ದ ಕಂಪನಿ, ನಾಲು ವರ್ಷವಾದರೂ ಮುಗಿಸಿಲ್ಲ.

ಕೆ.ಆರ್‌.ಮಾರುಕಟ್ಟೆ ರಸ್ತೆಗಳ ಡಾಂಬರೀಕರಣಕ್ಕೆ ಶಾಸಕರು ಮತ್ತು ಮೇಯರ್‌ ಜತೆ ಚರ್ಚಿಸಲಾಗಿದೆ. ಶೀಘ್ರವೇ ಡಾಂಬರೀಕರಣ, ಪಾದಚಾರಿ ರಸ್ತೆ ಮೇಲಿನ ಅನಧಿಕೃತ ಗೂಡಂಗಂಡಿಗಳನ್ನು ತೆರವುಗೊಳಿಸಲಾಗುವುದು.ಪ್ರತಿಭಾ ಧನರಾಜ್‌, ಪಾಲಿಕೆ ಸದಸ್ಯ

 ಕಲಾಸಿಪಾಳ್ಯ ಬಸ್‌ ನಿಲ್ದಾಣದಲ್ಲಿ ಸ್ವಚ್ಛತೆ ಇಲ್ಲದಂತಾಗಿದ್ದು ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟಿದೆ. ರಸ್ತೆ ಗಳು ಗುಂಡಿಮಯವಾಗಿವೆ. ಪ್ರಯಾಣಿಕರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ.ಮುತ್ತುರಾಜ್‌, ಬಸ್‌ ಚಾಲಕ

 

ಮಂಜುನಾಥ್ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next