Advertisement

ಕೆ.ಆರ್‌. ಮಾರುಕಟ್ಟೆ ಅಕ್ರಮ ಮಳಿಗೆ ತೆರವು ವರದಿ ಸಲ್ಲಿಕೆ

12:24 AM Apr 10, 2019 | Lakshmi GovindaRaju |

ಬೆಂಗಳೂರು: ಕೆ.ಆರ್‌. ಮಾರುಕಟ್ಟೆ ಪ್ರದೇಶದಲ್ಲಿ ಬಿಬಿಎಂಪಿ ಕೈಗೊಂಡಿರುವ ಒತ್ತುವರಿ ತೆರವು ಕಾರ್ಯಾಚರಣೆ ಸಂಬಂಧ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಮಂಗಳವಾರ ಹೈಕೋರ್ಟ್‌ಗೆ ಪರಿಶೀಲನಾ ವರದಿ ಸಲ್ಲಿಸಿದೆ.

Advertisement

ಮಾರುಕಟ್ಟೆ ಸಂಕೀರ್ಣದಲ್ಲಿ ನಿರ್ಮಿಸಲಾಗಿರುವ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸುವಂತೆ ಕೋರಿ ಬೆಂಗಳೂರು ಹೂವು ವ್ಯಾಪಾರಿಗಳ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾ. ಎಲ್‌. ನಾರಾಯಣಸ್ವಾಮಿ ಹಾಗೂ ನ್ಯಾ. ಪಿ.ಎಸ್‌. ದಿನೇಶ್‌ ಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಈ ವರದಿ ಸಲ್ಲಿಸಲಾಗಿದೆ.

ಹೈಕೋರ್ಟ್‌ ಆದೇಶದಂತೆ ಒತ್ತುವರಿ ತೆರವು ಕಾರ್ಯಾಚರಣೆಯ ಪರಿಶೀಲನೆ ನಡೆಸಿರುವ ಅಗ್ನಿ ಶಾಮಕ ಅಧಿಕಾರಿಗಳು, ಅಗ್ನಿಶಾಮಕ ವಾಹನಗಳ ಸುಗಮ ಸಂಚಾರಕ್ಕೆ ಮಾರುಕಟ್ಟೆ ರಸ್ತೆಯನ್ನು ಮುಕ್ತಗೊಳಿಸಿದ್ದು, ಕೆಲ ಸಿವಿಲ್‌ ಕಾಮಗಾರಿಗಳು ನಡೆಯುತ್ತಿವೆ.

ಮಾರುಕಟ್ಟೆ ಕಟ್ಟಡದ ಕಾರಿಡಾರ್‌, ಮೆಟ್ಟಿಲುಗಳು, ರಸ್ತೆ ಬದಿ ಸೇರಿ ಇತರ ಪ್ರದೇಶಗಳ ಒತ್ತುವರಿಯನ್ನು ಬಿಬಿಎಂಪಿ ತೆರವುಗೊಳಿಸಿದೆ. ಅಗ್ನಿ ಅವಘಡ ಎಚ್ಚರಿಕೆ ವ್ಯವಸ್ಥೆ, ಅಗ್ನಿ ಅವಘಡ ಪತ್ತೆ ಹಚ್ಚುವ ಹಾಗೂ ಅಗ್ನಿ ಶಮನ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ವರದಿಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಅಗ್ನಿಶಾಮಕ ಇಲಾಖೆಯ ನೀಡಿದ್ದ ಎಲ್ಲ 19 ಅಂಶಗಳ ಮಾರ್ಗಸೂಚಿಗಳನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಿ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಸೂಚಿಸಿ ಅರ್ಜಿ ವಿಚಾರಣೆಯನ್ನು ಜೂ.10ಕ್ಕೆ ಮುಂದೂಡಿತು.

Advertisement

ಇದೇ ವೇಳೆ ಬಿಬಿಎಂಪಿ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಕೆ.ಆರ್‌. ಮಾರುಕಟ್ಟೆಯಲ್ಲಿ ನಿರ್ಮಿಸಿರುವ ಅನಧಿಕೃತ ಮಳಿಗೆಗಳಿಗೆ ನಕ್ಷೆ ಮಂಜೂರು ಮಾಡಿರುವ ಅಧಿಕಾರಿಗಳೇ ಅವುಗಳ ತೆರವು ಕಾರ್ಯಾಚರಣೆಗೆ ತಗುಲುವ ವೆಚ್ಚ ಭರಿಸಬೇಕಾಗುತ್ತದೆ ಎಂದು ಮೌಖೀಕ ಎಚ್ಚರಿಕೆ ನೀಡಿತು.

ಎಷ್ಟು ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಎಷ್ಟು ಅನಧಿಕೃತ ಮಳಿಗೆಗಳಿವೆ ಎಂದು ಬಿಬಿಎಂಪಿ ಪರ ವಕೀಲರನ್ನು ಪ್ರಶ್ನಿಸಿತು. ಇದಕ್ಕುತ್ತರಿಸಿದ ವಕೀಲರು, ಒಟ್ಟು 1,285 ಮಳಿಗೆಗಳಿಗೆ ನಕ್ಷೆ ಮಂಜೂರು ಮಾಡಲಾಗಿದೆ.

ಮಾರುಕಟ್ಟೆಯ ಸಂಕೀರ್ಣದ ಮೊದಲ ಮಹಡಿಯಲ್ಲಿ 24 ಅನಧಿಕೃತ ಮಳಿಗೆಗಳಿವೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಆಗ ಅನಧಿಕೃತ ಮಳಿಗೆಗಳ ತೆರವು ಕಾರ್ಯಾಚರಣೆಗೆ ತಗಲುವ ವೆಚ್ಚ ನಕಾಶೆ ಮಂಜೂರು ಮಾಡಿದ ಅಧಿಕಾರಗಳೇ ಭರಿಸಬೇಕಾದಿತು ಎಂದು ನ್ಯಾಯಪೀಠ ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next