Advertisement

ಕೆಪಿಟಿಸಿಎಲ್‌ ಪರೀಕ್ಷೆ ಅಕ್ರಮ: ಒಂಬತ್ತು ಮಂದಿ ಬಂಧನ

12:20 PM Aug 23, 2022 | Team Udayavani |

ಬೆಳಗಾವಿ: ರಾಜ್ಯದಲ್ಲಿ ಪಿಎಸ್‌ಐ ಹಗರಣದ ಬೆನ್ನಲ್ಲೇ ಕೆಪಿಟಿಸಿಎಲ್‌ ಕಿರಿಯ ದರ್ಜೆ ಸಹಾಯಕರ ನೇಮಕಾತಿ ಪರೀಕ್ಷೆ ಅಕ್ರಮವೂ ಬಯಲಿಗೆ ಬಂದಿದ್ದು, ಮೂವರು ಅಭ್ಯರ್ಥಿಗಳೂ ಸೇರಿ ಒಂಬತ್ತು ಜನರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಬೆಳಗಾವಿ, ಗದಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಈ ಅಕ್ರಮವನ್ನು ಭೇದಿಸಿರುವ ಬೆಳಗಾವಿ ಪೊಲೀಸರು ಪ್ರಕರಣದ ಇಂಚಿಂಚೂ ತನಿಖೆ ನಡೆಸಿದ್ದಾರೆ. ಪರೀಕ್ಷಾ ಅಕ್ರಮಕ್ಕೆ ಬಳಸಿರುವ ಸ್ಮಾರ್ಟ್‌ ವಾಚ್‌, ಬ್ಲೂಟೂತ್‌ ಡಿವೈಸ್‌, ಪ್ರಿಂಟರ್‌, ಕಂಪ್ಯೂಟರ್‌ ಸೇರಿ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ಹಿಂದಿರುವ ಇನ್ನೂ ಅನೇಕರನ್ನು ಬಂ ಧಿಸಲು ಜಾಲ ಬೀಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದ ಎಸ್‌ಪಿ ಸಂಜೀವ್‌ ಪಾಟೀಲ, ಕೆಪಿಟಿಸಿಎಲ್‌ ಕಿರಿಯ ದರ್ಜೆ ಸಹಾಯಕ ಹುದ್ದೆಗೆ ಆ.7ರಂದು ಪರೀಕ್ಷೆ ನಡೆದಿತ್ತು. ಈ ವೇಳೆ ಅಕ್ರಮ ನಡೆದಿರುವ ಬಗ್ಗೆ ಚಿಕ್ಕೋಡಿ ಪದವಿಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ದರ್ಜೆ ಸಹಾಯಕ ಸಚಿನ್‌ ಕಮತರ ಎಂಬುವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ ಎಂದರು.

ಗೋಕಾಕ ತಾಲೂಕಿನ ನಾಗನೂರ ಗ್ರಾಮದ ಸಿದ್ದಪ್ಪ ಕೆಂಪಣ್ಣ ಮದಿಹಳ್ಳಿ, ಮಾಲದಿನ್ನಿ ಗ್ರಾಮದ ಸುನೀಲ ಅಜ್ಜಪ್ಪ ಭಂಗಿ, ಹುಕ್ಕೇರಿ ತಾಲೂಕಿನ ಶಿರಹಟ್ಟಿ ಬಿ.ಕೆ. ಗ್ರಾಮದ ಬಸವಣ್ಣಿ ಶಿವಪ್ಪ ದೊಣವಾಡ, ಗೋಕಾಕ ತಾಲೂಕಿನ ಬೆಣಚಿನಮರಡಿ ಗ್ರಾಮದ ಸಿದ್ದಪ್ಪ ಕೆಂಚಪ್ಪ ಕೊತ್ತಲ, ವೀರನಗಡ್ಡಿ ಗ್ರಾಮದ ಸಂತೋಷ ಪ್ರಕಾಶ ಮಾನಗಾಂವಿ, ಮಾಲದಿನ್ನಿ ಗ್ರಾಮದ ರೇಣುಕಾ ವಿಠuಲ ಜವಾರಿ, ಗದಗ ಬೆಟಗೇರಿಯ ಅಮರೇಶ ಚಂದ್ರಶೇಖರಯ್ಯ ರಾಜೂರ, ಚಿಕ್ಕೋಡಿ ತಾಲೂಕಿನ ಮೀರಾಪುರ ಗ್ರಾಮದ ಹಾಲಿ ಗದಗ ಬೆಟಗೇರಿಯ ಮಾರುತಿ ಶಂಕರ ಸೋನವಣಿ, ಸಮೀತಕುಮಾರ ಮಾರುತಿ ಸೋನವಣಿ ಎಂಬವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.

ಗೋಕಾಕ ಡಿಎಸ್‌ಪಿ ಮನೋಜಕುಮಾರ ನಾಯ್ಕ, ಸಿಪಿಐ ವೀರೇಶ ದೊಡಮನಿ ನೇತೃತ್ವ ದಲ್ಲಿ ತನಿಖೆ ಚುರುಕುಗೊಂಡಿದೆ. ಪ್ರಕರಣದ ಹಿಂದಿರುವ ಆರೋಪಿಗಳನ್ನು ಬಂಧಿ ಸಲು ಜಾಲ ಬೀಸಲಾಗಿದೆ. ಪ್ರತಿ ಅಭ್ಯರ್ಥಿ ಕಡೆಯಿಂದ ಆರು ಲಕ್ಷ ರೂ. ಪಡೆಯುವ ಮಾತುಕತೆ ಆಗಿದ್ದು, ಕೆಲವರು ಮೂರು ಲಕ್ಷ ರೂ. ಮುಂಗಡ ಕೊಟ್ಟಿದ್ದಾರೆ ಎಂದರು.

Advertisement

ಈ ಪರೀಕ್ಷೆ ವೇಳೆ ಗೋಕಾಕ ನಗರದ ಪರೀಕ್ಷಾ ಕೇಂದ್ರದಲ್ಲಿ ಸ್ಮಾರ್ಟ್‌ ವಾಚ್‌ ಮೂಲಕ ಪರೀಕ್ಷೆ ಪತ್ರಿಕೆಯ ಫೋಟೋ ತೆಗೆದು ನಕಲು ಮಾಡುತ್ತಿರುವ ದೂರಿನ ಮೇರೆಗೆ ತನಿಖೆ ಆರಂಭಿಸಲಾಯಿತು. ಬೆಳಗಾವಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಯಿಂದ ಅಕ್ರಮ ಕಾರ್ಯನಿರ್ವಹಣೆ ಆಗಿದೆ ಎಂದರು.

ಗದಗ ಬೆಟಗೇರಿಯ ಅಭ್ಯರ್ಥಿಯ ತಂದೆ ಪ್ರಾಚಾರ್ಯರಾಗಿದ್ದು, ಪರೀಕ್ಷಾ ಕೇಂದ್ರಕ್ಕೆ ಪತ್ರಕರ್ತರ ಸೋಗಿನಲ್ಲಿ ಹೋಗಿ ಪ್ರಶ್ನೆ ಪತ್ರಿಕೆಯ ಫೋಟೋ ಕ್ಲಿಕ್ಕಿಸಿಕೊಂಡು ಹುಕ್ಕೇರಿ ತಾಲೂಕಿನ ಶಿರಹಟ್ಟಿ ಬಿ.ಕೆ.ಗ್ರಾಮದ ಫಾರ್ಮ್ ಹೌಸ್‌ನಲ್ಲಿ ಕುಳಿತು ಕೊಂಡು ಉತ್ತರ ಹೇಳುತ್ತಿದ್ದರು. ವಿವಿಧೆಡೆ ಅಭ್ಯರ್ಥಿಗಳು ಬ್ಲೂ ಟೂತ್‌ ಬಳಸಿ ಉತ್ತರ ಬರೆದಿದ್ದಾರೆ. ಉತ್ತರಗಳನ್ನು ಶಿಕ್ಷಕರೊಬ್ಬರು ಹೇಳಿರುವುದು ಗೊತ್ತಾಗಿದೆ. ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ನಡೆಸುತ್ತಿರುವ ವ್ಯಕ್ತಿಯೊಬ್ಬ ಆರೋಪಿಯಾ ಗಿದ್ದು, ಈತನ ಬಂಧನಕ್ಕೆ ತಂಡ ಸಕ್ರಿಯ ವಾಗಿದೆ. ಸದ್ಯದ ಮಾಹಿತಿ ಪ್ರಕಾರ ಅಥಣಿ ಸೇರಿ ಐದಾರು ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿರುವುದು ಗೊತ್ತಾಗಿದೆ ಎಂದರು.

ಬಾಯಲ್ಲಿ ಡಿವೈಸ್‌! ಕೆಪಿಟಿಸಿಎಲ್‌ ಪರೀಕ್ಷೆ ವೇಳೆ ಕಿರಿದಾದ ಬ್ಲೂಟೂತ್‌ ಕಿವಿಯಲ್ಲಿ ಹಾಕಿಕೊಳ್ಳು ತ್ತಾರೆ. ನಂತರ ಅದಕ್ಕೆ ಕನೆಕ್ಟ್ ಇರುವ ಸಾಧನವನ್ನು ಬಾಯಲ್ಲಿ ಇಟ್ಟುಕೊಂಡಿದ್ದರು. ಇನ್ನೂ ಕೆಲವರು ತೋಳಿನಲ್ಲಿ, ಬಟ್ಟೆಯಲ್ಲಿ ಸುತ್ತಿಕೊಂಡು ಒಳ ಉಡುಪಿನಲ್ಲಿ ಇಟ್ಟುಕೊಂಡಿದ್ದರು. ಕಿವಿಯಲ್ಲಿ ಹಾಕುವ ಬ್ಲೂಟೂತ್‌ ತೆಗೆಯಲು ಸಣ್ಣದಾದ ಕಡ್ಡಿಯೂ ಅಭ್ಯರ್ಥಿಗಳ ಬಳಿ ಪತ್ತೆಯಾಗಿವೆ.

ಕೆಪಿಟಿಸಿಎಲ್‌ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಮೊದಲ ಹಂತದ ವರದಿಯಲ್ಲಿ ಆ ರೀತಿ ಏನೂ ಆಗಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಭಯಪಡುವ ಅಗತ್ಯ ಇಲ್ಲ. –ವಿ.ಸುನೀಲಕುಮಾರ, ಸಚಿವ

ಗೋಕಾಕ ಪೊಲೀಸರು ತನಿಖೆ ನಡೆಸಿ ಪ್ರಕರಣ ಬಯಲಿಗೆಳೆದಿದ್ದಾರೆ. ಈತನಕ 9 ಜನರನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆದಿದ್ದು, ಯಾರೇ ಭಾಗಿಯಾಗಿದ್ದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು. –ಸಂಜೀವ್‌ ಪಾಟೀಲ, ಎಸ್‌ಪಿ, ಬೆಳಗಾವಿ

Advertisement

Udayavani is now on Telegram. Click here to join our channel and stay updated with the latest news.

Next