Advertisement

750 ಅಭ್ಯರ್ಥಿಗಳಿಗೆ ಶಿಷ್ಯವೇತನದ ಜತೆಗೆ ಕೆಪಿಎಸ್‌ಸಿ- ಯುಪಿಎಸ್‌ಸಿ ತರಬೇತಿ

06:56 PM Mar 02, 2022 | Team Udayavani |

ಬೆಂಗಳೂರು: ರಾಜ್ಯದ ಶ್ರಮಿಕ ವರ್ಗದ ಶ್ರೇಯೋಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಸಮರ್ಥವಾಗಿ ಜಾರಿ ಮಾಡಿರುವ ಕಾರ್ಮಿಕ ಇಲಾಖೆ ಇದೀಗ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ಮುಂದಡಿ ಇರಿಸಿದೆ.

Advertisement

ದಿನ ನಿತ್ಯದ ದುಡಿಮೆ ಮತ್ತು ಬವಣೆಗಳಿಂದ ಬಳಲಿರುವ ಕಾರ್ಮಿಕ ವರ್ಗ ಮಕ್ಕಳಿಗೆ ಶಿಕ್ಷಣ ಕೊಡಿಸುವುದೇ ದುಸ್ಥರ ಇನ್ನು ಉನ್ನತ ಶಿಕ್ಷಣ ಕನಸಿನ ಮಾತು, ಇಂತಹ ಪರಿಸ್ಥಿತಿಯನ್ನು ಅರಿತ ರಾಜ್ಯದ ಕಾರ್ಮಿಕ ಇಲಾಖೆ ಕಾರ್ಮಿಕ ಮಕ್ಕಳ ಉನ್ನತ ಶಿಕ್ಷಣ ಸುಸೂತ್ರವಾಗಿ ಸಾಗುವಂತೆ ಯೋಜನೆಯೊಂದನ್ನು ರೂಪಿಸಿ ಜಾರಿ ಮಾಡುತ್ತಿದೆ.

ಕಾರ್ಮಿಕ ಮಕ್ಕಳಿಗೆ ನೀಡುತ್ತಿದ್ದ ಸಹಾಯಧನದಲ್ಲಿ ಏರಿಕೆ, ವಿವಿಧ ಸವಲತ್ತುಗಳ ಸೇರ್ಪಡೆ, ಬಸ್‌ಪಾಸ್, “ಶ್ರಮಿಕ್ ಸಂಜೀವಿನಿ’ ಹೆಸರಿನ ಸಂಚಾರಿ ಕ್ಲಿನಿಕ್ ಸೇವೆಗಳನ್ನು ಜಾರಿ ಮಾಡಿರುವ ಕಾರ್ಮಿಕ ಇಲಾಖೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಇದೀಗ ನೋಂದಾಯಿತ ಕಾರ್ಮಿಕ ಮಕ್ಕಳ ಉನ್ನತ ವ್ಯಾಸಂಗಗಳಾದ ಯುಪಿಎಸ್‌ಸಿ ಮತ್ತು ಕೆಪಿಎಸ್‌ಸ್ಸಿ ಉಚಿತ ತರಬೇತಿ ಯೋಜನೆಗೆ ಚಾಲನೆ ನೀಡುತ್ತಿದೆ.

ಏನಿದು ಯೋಜನೆ?

ಕಳೆದ 2020ರ ಸೆಪ್ಟೆಂಬರ್ 2ರಂದು ಕಾರ್ಮಿಕ ಸಚಿವ ಮತ್ತು ಮಂಡಳಿ ಅಧ್ಯಕ್ಷ ಶಿವರಾಂ ಹೆಬ್ಬಾರ್ ನೇತೃತ್ವದಲ್ಲಿ ನಡೆದ ಕಲ್ಯಾಣ ಮಂಡಳಿ ಸಭೆಯಲ್ಲಿ ಶ್ರಮಿಕ ವರ್ಗದ ಕುಟುಂಬದ 750 ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಗಳಾದ ಕೆಪಿಎಸ್‌ಸಿ ಮತ್ತು ಯುಪಿಎಸ್‌ಸಿಗೆ ತರಬೇತಿ ಕೊಡಿಸಲು ನಿರ್ಧರಿಸಲಾಯಿತು. ಈ ನಿರ್ಧಾರಕ್ಕೆ ಪ್ರತಿಯಾಗಿ ಕಡತ ವಿಲೇವಾರಿಯಾಗಿ ಈಗಾಗಲೇ ತ್ವರಿತತೆ ಪ್ರದರ್ಶಿಸಿರುವ ಇಲಾಖೆ ಅಧಿಕಾರಿಗಳು ಕೂಡಲೇ ಕಾರ್ಯಯೋಜನೆ ಸಿದ್ಧಪಡಿಸಿದರು. ಆಯ್ಕೆ ಪ್ರಕ್ರಿಯೆ, ತರಬೇತಿ ಸಂಸ್ಥೆಗಳ ಆಯ್ಕೆ, ಶಿಷ್ಯ ವೇತನ ನೀಡಿಕೆ ಬಗ್ಗೆ ಪ್ರಸ್ತಾವನೆ ಮಂಡಿಸಿ ಅನುಮೋದನೆ ಪಡೆದುಕೊಂಡರು.

Advertisement

ತರಬೇತಿ ನೀಡುವ ಸಂಸ್ಥೆಗಳ ಆಯ್ಕೆ ಜತೆ ಜತೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನೂ ಪ್ರಾರಂಭಿಸಲಾಯಿತು. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕದ ವೇಳೆಗೆ ಒಟ್ಟಾರೆ, 3978 ಅರ್ಜಿಗಳು ಸಲ್ಲಿಕೆಯಾಗಿದ್ದವು.

ಆಯ್ಕೆ ಹೇಗೆ?

ಭಾರೀ ಪ್ರಮಾಣದ ಅರ್ಜಿ ಸಲ್ಲಿಕೆಯಿಂದ ಈ ಯೋಜನೆಯ ಅನಿವಾರ್ಯತೆಯಿಂದ ಇಲಾಖೆ ದಿಟ್ಟ ಹೆಜ್ಜೆ ಇರಿಸಿದೆ ಎಂಬುದು ಸಾಬೀತಾದರೂ, ಈ ಅಭ್ಯರ್ಥಿಗಳ ಪೈಕಿ 750ನ್ನು ಮಾತ್ರ ಆಯ್ಕೆ ಮಾಡುವುದು ಸವಾಲಿನ ಕೆಲಸ ಮಾಡಿ ಮಾರ್ಪಟ್ಟಿತು. ಈ ಸಂಧಿಗ್ಧತೆಯನ್ನು ಸೂಕ್ಷö್ಮವಾಗಿ ಯಾವುದೇ ವಾದ- ವಿವಾದಕ್ಕೆ ಆಸ್ಪದ ನೀಡದಂತೆ ಪ್ರಕ್ರಿಯೆ ಪೂರ್ಣಗೊಳಿಸಲು ಮುಂದಾದ ಕಾರ್ಮಿಕ ಸಚಿವಾಲಯ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಮಾಡಲು ನಿರ್ಧರಿಸಿತು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಗಳಿಗೆ ಹಾಜರಾದ ಅಭ್ಯರ್ಥಿಗಳ ಪೈಕಿ ಯುಪಿಎಸ್‌ಸಿ ಬಯಸಿದ 748 ಮತ್ತು ಕೆಪಿಎಸ್‌ಸಿ ತರಬೇತಿ ಬಯಸಿ 1189 ಅಭ್ಯರ್ಥಿಗಳು ಆಯ್ಕೆ ಆದರು. ಈ ಪೈಕಿ ಮೆರಿಟ್ ಅಂಕಗಳ ಆಧಾರದ ಮೇರೆಗೆ ಇಲಾಖೆ 750 ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಿದ್ದು, ಈ ಪೈಕಿ ಯುಪಿಎಸ್‌ಸಿ ತರಬೇತಿ ಬಯಸಿದ 250 ಅಭ್ಯರ್ಥಿಗಳ ಪೈಕಿ 150 ಮಂದಿ ಬೆಂಗಳೂರಿನಲ್ಲಿ ಇನ್ನುಳಿದ 100 ಅಭ್ಯರ್ಥಿಗಳು ಧಾರವಾಡದಲ್ಲಿ ತರಬೇತಿ ಪಡೆಯುವ ಆಯ್ಕೆಯನ್ನು ತಮ್ನದಾಗಿಸಿಕೊಂಡಿದ್ದಾರೆ.

ಕೆಪಿಎಸ್‌ಸಿ ತರಬೇತಿಗೆ 500 ಮಂದಿ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗಿದ್ದು, ಈ ಪೈಕಿ 275 ಬೆಂಗಳೂರಿನಲ್ಲಿ ಮತ್ತು 225 ಮಂದಿ ಧಾರವಾಡದಲ್ಲಿ ತರಬೇತಿ ಪಡೆಯುವ ಆಯ್ಕೆಯನ್ನು ಮಾಡಿಕೊಂಡಿದ್ದಾರೆ.

ಕಾಲಾವಧಿ ಮತ್ತು ಶಿಷ್ಯ ವೇತನ

ಯುಪಿಎಸ್‌ಸಿಗೆ ಒಟ್ಟು 9 ತಿಂಗಳ ಕಾಲಾವಧಿ ತರಬೇತಿ ಇದ್ದು, ಬೆಂಗಳೂರಿನಲ್ಲಿ ತರಬೇತಿ ಪಡೆಯುವ ಅಭ್ಯರ್ಥಿಗಳು ಮಾಸಿಕ 6000 ರೂ. ಶಿಷ್ಯ ವೇತನ ಮತ್ತು 1000 ರೂ. ಪ್ರಯಾಣ ಭತ್ಯೆ ನೀಡಲಾಗುವುದು. ಧಾರವಾಡದಲ್ಲಿ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಮಾಸಿಕ 5000 ರೂ. ಶಿಷ್ಯ ವೇತನ ನೀಡಲು ಇಲಾಖೆ ನಿರ್ಧರಿಸಿದೆ.

ಕೆಪಿಎಸ್‌ಸಿ 7 ತಿಂಗಳ ಕಾಲಾವಧಿಯ ತರಬೇತಿಯಾಗಿದೆ ಮತ್ತು ಹೊರ ಜಿಲ್ಲೆಯ ಅಭ್ಯರ್ಥಿಗಳಿಗೆ ಮಾಸಿಕ 5000 ರೂ. ಮತ್ತು ಸ್ಥಳೀಯ ಅಭ್ಯರ್ಥಿಗಳಿಗೆ 4000 ರೂ. ಶಿಷ್ಯ ವೇತನ ಲಭಿಸಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ರಾಜ್ಯ ಅಥವಾ ದೇಶದ ಅಭಿವೃದ್ಧಿಯಲ್ಲಿ ಶ್ರಮಿಕವರ್ಗದ ಪಾತ್ರ ಮಹತ್ವದ್ದು, ಇಂತಹ ಶ್ರಮಿಕವರ್ಗದ ಉನ್ನತಿಯಿಂದ ದೇಶದ ಉನ್ನತಿ ಸಾಧ್ಯ ಎಂಬುದು ನಮ್ಮ ಸರ್ಕಾರದ ಅಚಲ ನಂಬಿಕೆ. ಹೀಗಾಗಿಯೇ ಶ್ರಮಿಕ ವರ್ಗದ ಮಕ್ಕಳಿಗೂ ಉನ್ನತ ವ್ಯಾಸಂಗ ಕೈಗೆ ಏಟುಕುವಂತಾಗಬೇಕು ಎಂಬ ಆಶಯದಿಂದ ಕೆಪಿಎಸ್‌ಸಿ ಮತ್ತು ಯುಪಿಎಸ್‌ಸಿ ಉಚಿತ ತರಬೇತಿಗಳಿಗೆ ಯೋಜನೆ ರೂಪಿಸಲಾಯಿತು. ಯೋಜನೆ ಜಾರಿಗೆ ಮುಂದಾದಾಗ ತರಬೇತಿಗಾಗಿ ಬಂದಿರುವ ಸಹಸ್ರಾರು ಅರ್ಜಿಗಳೇ ಯೋಜನೆ ಅನಿವಾರ್ಯತೆಯನ್ನು ಸಾರಿ ಹೇಳುತ್ತಿವೆ. ಹೀಗಾಗಿ ಇಲಾಖೆಯಲ್ಲಿ ಯೋಜನೆ ಜಾರಿಗೆ ಉತ್ಸಾಹವೂ ಹೆಚ್ಚಿದೆ.

ಶಿವರಾಂ ಹೆಬ್ಬಾರ್, ಕಾರ್ಮಿಕ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next