Advertisement

ಕೆಪಿಎಸ್‌ಸಿ: ಅಭ್ಯರ್ಥಿಗಳ ಮನವಿ ಹೈತಿರಸ್ಕಾರ 

06:35 AM Jul 14, 2018 | |

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2011ನೇ ಸಾಲಿನಲ್ಲಿ ನಡೆಸಿದ್ದ “ಎ’ ಮತ್ತು “ಬಿ’ ವೃಂದದ 362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ರದ್ದುಗೊಳಿಸಿದ್ದ ಹೈಕೋರ್ಟ್‌, ಇದೀಗ ಪ್ರಸಕ್ತ ಸಾಲಿನ ಲಿಖೀತ ಪರೀಕ್ಷೆಯನ್ನು ಉರ್ಜಿತಗೊಳಿಸಿ ಹೊಸದಾಗಿ ಸಂದರ್ಶನ ನಡೆಸಲು ಅನುಮತಿ ಕೋರಿ ಆಯ್ಕೆಗೊಂಡ ಅಭ್ಯರ್ಥಿಗಳು ಸಲ್ಲಿಸಿದ್ದ ಮನವಿಯನ್ನೂ ತಿರಸ್ಕರಿಸಿದೆ.

Advertisement

ಅಲ್ಲದೆ, “ಲಿಖೀತ ಪರೀಕ್ಷೆಯಲ್ಲಿ ಕೆಲ ಹಿತಾಸಕ್ತಿಗಳ ಮಧ್ಯಪ್ರವೇಶದಿಂದ ಅಕ್ರಮ ನಡೆದಿದೆ. ಆದ್ದರಿಂದ
ಹೊಸದಾಗಿ ಸಂದರ್ಶನ ನಡೆಸಲು ಕೆಪಿಎಸ್ಸಿಗೆ ಅನುಮತಿ ನೀಡುವಂತೆ ಆದೇಶಿಸಲು ಸಾಧ್ಯವಿಲ್ಲ.

ಯಾಕೆಂದರೆ, ನೇಮಕಾತಿ ಪ್ರಕ್ರಿಯೆ ಆರಂಭವಾಗಿ ಎಂಟು ವರ್ಷ ಕಳೆದಿವೆ. ಲಿಖೀತ ಪರೀಕ್ಷೆಗಳು ಮುಗಿದು ಐದೂವರೆ ವರ್ಷ ಆಗಿದೆ. ಇಷ್ಟು ವರ್ಷದ ನಂತರ ಉತ್ತರ ಪತ್ರಿಕೆಗಳನ್ನು ಮರುಮೌಲ್ಯಮಾಪನಕ್ಕೆ ಒಳಪಡಿಸಲು ಸಾಧ್ಯವಿಲ್ಲ. ಹಾಗಾಗಿ, ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ಆದೇಶಿಸಲು ಇದು ಅರ್ಹ ಪ್ರಕರಣವೂ ಅಲ್ಲ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಈ ಮೂಲಕ 2011ನೇ ಸಾಲಿನಲ್ಲಿ 362 “ಎ’ ಮತ್ತು “ಬಿ’ ವೃಂದದ ಹುದ್ದೆಗಳಿಗೆ ನೇಮಕಗೊಂಡಿದ್ದ ಅಭ್ಯರ್ಥಿಗಳಿಗಿದ್ದ ಕೊನೆಯ ಅವಕಾಶವೂ ಕೈತಪ್ಪಿದಂತಾಗಿದೆ.

ಲಿಖೀತ ಪರೀಕ್ಷೆಯಲ್ಲಿ ಅಕ್ರಮ ನಡೆಯದ ಕಾರಣ ಹೊಸದಾಗಿ ಸಂದರ್ಶನ ನಡೆಸಲು ಕೆಪಿಎಸ್‌ಸಿಗೆ ಆದೇಶಿಸಬೇಕು ಹಾಗೂ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಸೂಚಿಸಬೇಕೆಂದು ಕೋರಿ 40ಕ್ಕೂ ಹೆಚ್ಚು ಅಭ್ಯರ್ಥಿಗಳು ಸಲ್ಲಿಸಿದ್ದ ಮಧ್ಯಂತರ ಅರ್ಜಿಗಳ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾ.ಎಚ್‌.ಜಿ. ರಮೇಶ್‌ ಹಾಗೂ ನ್ಯಾ.ಪಿ.ಎಸ್‌. ದಿನೇಶ್‌ ಕುಮಾರ್‌ ಅವರಿದ್ದ ಪೀಠ ಶುಕ್ರವಾರ ಮಧ್ಯಂತರ ಅರ್ಜಿ ವಜಾಗೊಳಿಸಿ ತೀರ್ಪು ಪ್ರಕಟಿಸಿತು.

ವಿಶ್ವಾಸರ್ಹತೆಗೆ ಪೆಟ್ಟು: ಲಿಖೀತ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಆಘಾತಕಾರಿ ಹಾಗೂ ತಲೆತಗ್ಗಿಸುವ ವಿಚಾರ. ಇದು ರಾಜ್ಯ ಸರ್ಕಾರದ ಆಡಳಿತವನ್ನು ಪರಿಣಾಮಕಾರಿ ಹಾಗೂ ಸುಗಮವಾಗಿ ನಡೆಯುವಂತೆ ಮಾಡುವ ಅರ್ಹ ಅಭ್ಯರ್ಥಿಗಳನ್ನು ಶಿಫಾರಸು ಮಾಡುವಂತಹ ಸಂವಿಧಾನಿಕ ಸಂಸ್ಥೆಯಾದ ಕೆಪಿಎಸ್‌ಸಿ ಮೇಲಿಟ್ಟಿದ್ದ ವಿಶ್ವಾಸಾರ್ಹತೆಯನ್ನು ಅಲುಗಾಡುವಂತೆ ಮಾಡಿದೆ. ನಿಯಮಗಳ ಉಲ್ಲಂಘನೆ ಹಾಗೂ ನಿರ್ಲಕ್ಷ್ಯದ ಸಂಬಂಧ ಯಾವುದೇ ರಾಜಿ ಮಾಡಿಕೊಳ್ಳಲಾಗುವುದಿಲ್ಲ ಎಂದು ಹೈಕೋರ್ಟ್‌ ಹೇಳಿತು.

Advertisement

ಅಲ್ಲದೆ, ಸಿಐಡಿ ವರದಿಯಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದು ಮೆಲ್ನೋಟಕ್ಕೆ ತಿಳಿದುಬಂದಿತ್ತು. ರಾಜ್ಯ ತನಿಖಾಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ ಮೂರು ತಿಂಗಳ ನಂತರ ಸರ್ಕಾರವು ಇಡೀ ನೇಮಕಾತಿ ಪ್ರಕ್ರಿಯೆಯನ್ನೇ ಹಿಂಪಡೆದಿದೆ.

ಅದಕ್ಕೆ ಅಡ್ವೋಕೇಟ್‌ ಜನರಲ್‌ ಹಾಗೂ ಕಾನೂನು ಇಲಾಖೆ ಅಭಿಪ್ರಾಯ ಪಡೆದಿದೆ. ಹೀಗಾಗಿ, ಪ್ರಜ್ಞಾಪೂರ್ವಕವಾಗಿ ರಾಜ್ಯ ಸರ್ಕಾರ ನೇಮಕಾತಿ ಪ್ರಕ್ರಿಯೆ ಹಿಂಪಡೆಯುವ ತೀರ್ಮಾನ ಕೈಗೊಂಡಿದೆ. ಈ ಕಾರಣದಿಂದ ಸರ್ಕಾರದ
ನಿರ್ಧಾರದಲ್ಲಿ ಯಾವುದೇ ಲೋಪವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂಬ ಕೆಪಿಎಸ್‌ಸಿ ವಾದವನ್ನು ತಿರಸ್ಕರಿಸಿದೆ.

ಪ್ರಕರಣವೇನು? 2011ನೇ ಸಾಲಿನ ಕೆಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವಂತೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) 2016ರ ಅಕ್ಟೋಬರ್‌ 19ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಆರ್‌.ರೇಣುಕಾಂಬಿಕೆ ಹಾಗೂ ಇತರ ಅವಕಾಶ ವಂಚಿತ ಅಭ್ಯರ್ಥಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಕೆಎಟಿ ಆದೇಶ ರದ್ದುಗೊಳಿಸಿ 2018ರ ಮಾರ್ಚ್‌ 9ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಲಿಖೀತ
ಪರೀಕ್ಷೆಯಲ್ಲಿ ಏನಾದರೂ ಅಕ್ರಮಗಳು ನಡೆದಿವೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿ ತೀರ್ಪು ಕೈಗೊಳ್ಳಬೇಕು
ಎಂದು ಸುಪ್ರೀಂಕೋರ್ಟ್‌, ರಾಜ್ಯ ಹೈಕೋರ್ಟ್‌ಗೆ ಸೂಚಿಸಿತ್ತು. ಇದರಿಂದ ನೇಮಕಗೊಂಡಿದ್ದ 40ಕ್ಕೂ ಹೆಚ್ಚು
ಅಭ್ಯರ್ಥಿಗಳು ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next