ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ‘ಶುದ್ಧೀಕರಣ’ಕ್ಕಾಗಿ ತಾನೇ ರಚಿಸಿದ ಪಿ.ಸಿ. ಹೋಟಾ ಸಮಿತಿಯ ಒಂದೊಂದೇ ಶಿಫಾರಸುಗಳಿಗೆ ತಿಲಾಂಜಲಿ ಇಡುತ್ತಿರುವ ಸರ್ಕಾರ, ಕೆಪಿಎಸ್‌ಸಿಯಲ್ಲಿ ಸದ್ಯ ಕರ್ತವ್ಯ ನಿರ್ವಹಿಸುತ್ತಿರುವ 288 ಸಿಬ್ಬಂದಿ ಪೈಕಿ ಶೇ.50ರಷ್ಟು ಸಿಬ್ಬಂದಿಯನ್ನು ಬೇರೆ ಕಡೆ ನಿಯೋಜಿಸಬೇಕೆಂಬ ಸಮಿತಿಯ ಶಿಫಾರಸಿಗೆ ಕಳೆದ ನಾಲ್ಕು ವರ್ಷಗಳಿಂದ ಜಾಣ ಮೌನ ವಹಿಸಿದೆ. ಸರ್ಕಾರದ ಈ ಜಾಣ ಮೌನದ ಪರಿಣಾಮವಾಗಿ 288 ಸಿಬ್ಬಂದಿ ಹಲವು ದಶಕಗಳಿಂದ ಕೆಪಿಎಸ್‌ಸಿಯಲ್ಲೇ ಠಿಕಾಣಿ ಹೂಡಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆದ ಅಕ್ರಮಗಳಿಗೆ ಈ ಠಿಕಾಣಿ ವೀರರೇ ಬಹುಪಾಲು ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ.
ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತ ಕಾರ್ಯವೈಖರಿಯ ದೃಷ್ಟಿಯಿಂದ ಅಲ್ಲಿನ ಕಾರ್ಯದರ್ಶಿಯನ್ನು ಹೊರತುಪಡಿಸಿ ಇತರ ಒಟ್ಟು 288 ನೌಕರರ ಪೈಕಿ ಶೇ.50ರಷ್ಟು ನೌಕರರನ್ನು ಪ್ರತಿ 2 ವರ್ಷಗಳಿಗೊಮ್ಮೆ ಸರ್ಕಾರದ ಬೇರೆ ಇಲಾಖೆಗಳು ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ನಿಯೋಜನೆ ಮೇಲೆ ಕಳಿಸಬೇಕು. ಆಗಾಗ ಅವರನ್ನು ಬದಲಾಯಿಸುತ್ತಿರಬೇಕು. ಅದರಲ್ಲೂ ಮುಖ್ಯವಾಗಿ ಗೌಪ್ಯ ಮಾಹಿತಿ ನಿರ್ವಹಿಸುವ ಗಣಕ ಶಾಖೆಯ ವಿಭಾಗದ ಸಿಬ್ಬಂದಿಯನ್ನು ತ್ವರಿತವಾಗಿ ಬದಲಿಸಬೇಕು ಎಂದು ಹೋಟಾ ಸಮಿತಿ ಶಿಫಾರಸು ಮಾಡಿತು. ಆದರೆ, ನಾಲ್ಕು ವರ್ಷ ಆಗುತ್ತಾ ಬಂದರೂ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೆಪಿಎಸ್‌ಸಿ ಸಮಗ್ರ ಸುಧಾರಣೆಯ ದೃಷ್ಠಿಯಿಂದ ಪಿ.ಸಿ. ಹೋಟಾ ಸಮಿತಿಯು 2013ರಲ್ಲಿ 15ಕ್ಕೂ ಹೆಚ್ಚು ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಅದರಲ್ಲಿ ಮುಖ್ಯವಾಗಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮೌಖೀಕ ಸಂದರ್ಶನಕ್ಕೆ 1:3 ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಹೇಳಲಾಗಿತ್ತು. ಆದರೆ, ಈಗಾಗಲೇ ಅದನ್ನು ಕೈಬಿಟ್ಟಿರುವ ಸರ್ಕಾರ 1:5 ಅನುಪಾತ ನಿಗದಿಪಡಿಸಿದೆ.
ಪ್ರತಿಕ್ರಿಯೆಗೆ ನಿರಾಕರಣೆ: ಹೋಟಾ ಸಮಿತಿಯ ಶಿಫಾರಸಿನಂತೆ ಕೆಪಿಎಸ್‌ಸಿಯಲ್ಲಿರುವ 288 ನೌಕರರನ್ನು ಬೇರೆ ಕಡೆ ನಿಯೋಜನೆ ಮಾಡಬೇಕಾದರೆ, ಅದಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಎಆರ್) ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಬೇಕು. ಆದರೆ, ಇಲ್ಲಿವರೆಗೆ ಡಿಪಿಎಆರ್‌ನಲ್ಲಿ ಈ ಸಂಬಂಧ ಯಾವುದೇ ಕ್ರಮ ನಡೆದಿಲ್ಲ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಪ್ರತಿಕ್ತಿಯೆ ನೀಡಲು ಡಿಪಿಎಆರ್ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ.
2015ರ ಹುದ್ದೆಗಳಿಗೂ ಅಧಿಸೂಚನೆ ಹೊರಡಿಸಿಲ್ಲ: ಖಾಲಿಯಾಗುವ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳನ್ನು ಪ್ರತಿ ವರ್ಷ ಸರ್ಕಾರ ಭರ್ತಿ ಮಾಡಬೇಕು. ಅದಕ್ಕಾಗಿ ಪ್ರತಿ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ಇಲಾಖಾವಾರು ಖಾಲಿ ಹುದ್ದೆಗಳ ವಿವರಗಳನ್ನು ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆ ಕೆಪಿಎಸ್‌ಸಿಗೆ ಕಳಿಸಬೇಕು. ಒಂದು ತಿಂಗಳಲ್ಲಿ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಬೇಕೆಂದು ಹೋಟಾ ಸಮಿತಿ ಶಿಫಾರಸು ಮಾಡಿದೆ. 2015ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ದರ್ಜೆಯ 401 ಖಾಲಿ ಹುದ್ದೆಗಳ ಪಟ್ಟಿ ಸಿದ್ಧಗೊಂಡಿದ್ದರೂ, ಡಿಪಿಎಆರ್‌ನವರು ಕೆಪಿಎಸ್‌ಸಿಗೆ ಕಳಿಸಿಕೊಟ್ಟಿಲ್ಲ. ಹಾಗಾಗಿ 2015ನೇ ಸಾಲಿನ ಹುದ್ದೆಗಳಿಗೆ ಎರಡು ವರ್ಷ ಆಗುತ್ತಾ ಬಂದರೂ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿಲ್ಲ. ಗೆಜೆಟೆಡ್ ಪ್ರೊಬೇಷನರಿಯ 1,443 ಹುದ್ದೆ ಖಾಲಿ ಸಿಬ್ಬಂದಿ, ಆಡಳಿತ ಸುಧಾರಣಾ ಇಲಾಖೆಯ ಮಾಹಿತಿ ಪ್ರಕಾರ 636 ಎ ಮತ್ತು 807 ಬಿ ಗ್ರೂಪ್ ಸೇರಿ ಒಟ್ಟು 1,443 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳು ಖಾಲಿ ಇವೆ. ಈ ಪೈಕಿ 289 ಕೆಎಎಸ್ (ಹಿರಿಯ ಶ್ರೇಣಿ), 208 ವಾಣಿಜ್ಯ ತೆರಿಗೆ ಅಧಿಕಾರಿ, 157 ಸಹಾಯಕ ಆಯುಕ್ತರು, 153 ತಹಶಿಲ್ದಾರ್ ಗ್ರೇಡ್-2, 138 ಮುಖ್ಯಾಧಿಕಾರಿಗಳು ಪ್ರಮುಖವಾಗಿವೆ.
– ರಫೀಕ್ ಅಹ್ಮದ್