ಬೆಂಗಳೂರು: 2017ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ 106 ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಿಸಿದೆ.
ತಾತ್ಕಾಲಿಕ ಆಯ್ಕೆ ಪಟ್ಟಿಯಂತೆ 2017-18ನೇ ಸಾಲಿನ ಗ್ರೂಪ್-ಎ ಮತ್ತು ಗ್ರೂಪ್-ಬಿ ನ ಉಳಿಕೆ ಮೂಲ ವೃಂದದ 94 ಹಾಗೂ ಹೈದರಾಬಾದ ಕರ್ನಾಟಕ ವೃಂದದ 12 ಹುದ್ದೆಗಳು ಸೇರಿ ಒಟ್ಟು 106 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.
ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಪಟ್ಟಿ ಪ್ರಕಟಿಸಿದ ಏಳು ದಿನಗಳೊಳಗಾಗಿ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳೂರು-1 ಇವರಿಗೆ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
2017ನೇ ಸಾಲಿನ 106 ಗೆಜೆಟೆಡ್ ಪ್ರೊಬೇಷನರಿ (ಕೆಎಎಸ್) ಹುದ್ದೆಗಳ ಭರ್ತಿಗೆ 2020ರ ಜನವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. 2020ರ ಆಗಸ್ಟ್ 24ರಂದು ಪೂರ್ವಭಾವಿ ಪರೀಕ್ಷೆ ನಡೆದಿತ್ತು. 2020ರ ಅ.23ರಂದು ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿತ್ತು. ಅದಾದ ಮೇಲೆ 2021ರ ಫೆ.13 ಹಾಗೂ 16ರಂದು ಮುಖ್ಯ ಪರೀಕ್ಷೆ ನಡೆದಿತ್ತು. ಪೂರ್ವಭಾವಿ ಪರೀಕ್ಷೆಯಿಂದ ಆಯ್ಕೆಯಾಗಿ 1:20ರ ಅನುಪಾತದಲ್ಲಿ 20,120 ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಬರೆದಿದ್ದರು.
ಇದಾದ ಒಂದೂವರೇ ವರ್ಷದ ಬಳಿಕ ಅಂದರೆ, 2022ರ ಜುಲೈ 28ರಂದು ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿತ್ತು. ಮುಖ್ಯ ಪರೀಕ್ಷೆಯಿಂದ ವ್ಯಕ್ತಿತ್ವ ಪರೀಕ್ಷೆಗೆ 1:3ರ ಅನುಪಾತದಲ್ಲಿ 318 ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿತ್ತು ಜುಲೈ 29ರಂದು ವ್ಯಕ್ತಿತ್ವ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿ ಆಗಸ್ಟ್ 16ರಿಂದ 26ರವರೆಗೆ ವ್ಯಕ್ತಿತ್ವ ಪರೀಕ್ಷೆಗೆ ಸಂದರ್ಶನ ನಡೆಸಲಾಗಿತ್ತು. ಇದೀಗ ತಾತ್ಕಾಲಿಕ ಪಟ್ಟಿ ಬಿಡುಗಡೆಗೊಳಿಸಲಾಗಿದೆ.
ಸೋಮವಾರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಮಂಗಳವಾರ ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದುಕೊಂಡ ಅಂಕಗಳನ್ನು ಪ್ರಕಟಿಸಲಾಗಿದೆ. ಆಕ್ಷೇಪಣೆಗಳಿಗೆ ಒಂದು ವಾರ ಕಾಲಾವಕಾಶ ನೀಡಲಾಗಿದೆ.
– ವಿಕಾಸ್ ಕಿಶೋರ್ ಸುರಳ್ಕರ್, ಕೆಪಿಎಸ್‌ಸಿ ಕಾರ್ಯದರ್ಶಿ.