ಬೆಂಗಳೂರು: ಪರೀಕ್ಷಾ ಅಕ್ರಮಗಳಿಂದ ಭಾರೀ ವಿವಾದಕ್ಕೆ ಕಾರಣವಾಗಿ 2011ನೇ ಸಾಲಿನಲ್ಲಿ ಕೆಎಎಸ್ ಅಧಿಕಾರಿಗಳಾಗಿ ಆಯ್ಕೆಯಾಗಿದ್ದ 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಅಂತಿಮ ಪಟ್ಟಿ ಕಾನೂನು ಬಾಹಿರ ಎಂದು ಹೈಕೋರ್ಟ್ ಹೇಳಿದೆ.
ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಿಸಿದ್ದ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನೇ ರದ್ದು ಪಡಿಸಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಕೆಎಟಿ ಆದೇಶದಂತೆ ಅಕ್ರಮ ಆರೋಪಗಳ ನಡುವೆಯೂ ನೇಮಕಾತಿಗೆ ಮುಂದಾಗಿದ್ದ ರಾಜ್ಯ ಸರಕಾರಕ್ಕೆ ಹೈಕೋರ್ಟ್ ತೀರ್ಪಿನಿಂದ ತೀವ್ರ ಹಿನ್ನೆಡೆಯಾದಂತಾಗಿದೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಸಿಐಡಿ ತನಿಖಾ ವರದಿಯಲ್ಲಿನ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಸಂವಿಧಾನಾತ್ಮಕ ಸಂಸ್ಥೆ ಕೆಪಿಎಸ್‌ಸಿ ಯಲ್ಲಿ ನಡೆದ ಅಕ್ರಮಗಳ ಬಗ್ಗೆ ಸಿಐಡಿ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖ ವಿದ್ದರೂ ಕೆಎಟಿ ಆದೇಶ ಪಾಲನೆಗೆ ಮುಂದಾದ ರಾಜ್ಯ ಸರಕಾರದ ಕ್ರಮ ಸರಿಯಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.
2011ನೇ ಸಾಲಿನ ಕೆಪಿಎಸ್‌ಸಿ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿ ಗಳಿಗೆ ನೇಮಕಾತಿ ಪತ್ರ ನೀಡುವಂತೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) 2016ರ ಅಕ್ಟೋಬರ್ 19ರಂದು ನೀಡಿದ್ದ ಆದೇಶ ರದ್ದು ಕೋರಿ ರೇಣುಕಾಂಬಿಕೆ ಆರ್. ಮತ್ತಿತ ರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ಪ್ರಕಟಿಸಿತು. ಸಿಐಡಿ ಮಧ್ಯಾಂತರ ವರದಿ ಬಳಿಕ ಒಂದು ಬಾರಿ ನೇಮಕಾತಿ ಅಧಿಸೂಚನೆ ರದ್ದುಪಡಿಸಿದ್ದ ರಾಜ್ಯ ಸರಕಾರ, ಕೆಎಟಿ ಆದೇಶದ ಬಳಿಕ ಮತ್ತೂಂದು ಬಾರಿ ನೇಮಕಾತಿ ಆದೇಶ ನೀಡಲು ಮುಂದಾಗಿರುವ ಕ್ರಮ ಅಸಮಂಜಸವಾಗಿದೆ ಎಂದು ಹೇಳಿದೆ.
ಕೆಎಟಿ ಆದೇಶದ ಬಳಿಕ ಸರಕಾರ ಪೌರಾಡಳಿತ ಇಲಾಖೆ ಸಹಿತ ಮತ್ತಿತರ ಇಲಾಖೆಗಳಲ್ಲಿ ಆಯ್ಕೆಯಾದ 72ಕ್ಕೂ ಅಧಿಕ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ಆದೇಶ ನೀಡಿದ್ದ ರಾಜ್ಯ ಸರಕಾರದ ಆದೇಶಗಳನ್ನೂ ಹೈಕೋರ್ಟ್ ರದ್ದುಗೊಳಿಸಿದೆ. ಈ ಅಂಶಗಳನ್ನೂ ಆಧರಿಸಿಯೂ ನೇಮಕಾತಿ ಪ್ರಕ್ರಿಯೆ ಮುಂದುವರಿಸುವುದು ಕಾನೂನು ಬಾಹಿರ ಎಂದು ತೀರ್ಪಿನಲ್ಲಿ ಒತ್ತಿ ಹೇಳಲಾಗಿದೆ.