Advertisement

ಕೆಪಿಎಸ್‌ಸಿ ಪರೀಕ್ಷೆ: ಜಿಲ್ಲಾಡಳಿತ ಮುಂಜಾಗ್ರತೆ

10:27 AM Sep 20, 2018 | |

ಕಲಬುರಗಿ: ಲೋಕಸೇವಾ ಆಯೋಗದಿಂದ ವಿವಿಧ ಇಲಾಖೆಯ ಗ್ರೂಪ್‌ ಸಿ ತಾಂತ್ರಿಕ-ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯು ಸೆ.22 ಮತ್ತು 24 ರಂದು ನಗರದ ಎರಡು ಕೇಂದ್ರ ಹಾಗೂ 23 ರಂದು 52 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಮುಂಜಾಗೃತೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರೀಕ್ಷೆಗೆ ಸಂಬಂಧಿಸಿದ ರೂಟ್‌ ಅಧಿಕಾರಿಗಳು, ವೀಕ್ಷಕರು, ಪರೀಕ್ಷಾ ಕೇಂದ್ರದ ಉಪ ಮುಖ್ಯ ಅಧೀಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 
ಪರೀಕ್ಷೆ ವೇಳೆ ಕರ್ತವ್ಯದಲ್ಲಿ ಯಾವುದೇ ಅವ್ಯವಹಾರ ಕಂಡುಬಂದಲ್ಲಿ ಸಂಬಂಧಿಸಿದ ಕೇಂದ್ರದ ಮುಖ್ಯಸ್ಥರು ಹಾಗೂ ಸಂಸ್ಥೆ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಾಂತ್ರಿಕೇತರ ಹುದ್ದೆಗಳಿಗೆ ಸೆ. 22 ರಂದು ನಡೆಯುವ ಪದವಿಗಿಂತ ಕೆಳಮಟ್ಟದ ವಿದ್ಯಾರ್ಹತೆಯ ಪರೀಕ್ಷೆಗೆ 710
ಅಭ್ಯರ್ಥಿಗಳು, ಸೆ.23 ರಂದು ನಡೆಯುವ ಪದವಿ ಮಟ್ಟದ ವಿದ್ಯಾರ್ಹತೆಗೆ 18065 ಅಭ್ಯರ್ಥಿಗಳು ಸಾಮಾನ್ಯ ಜ್ಞಾನ,
ಸಂವಹನ ಪತ್ರಿಕೆ ಪರೀಕ್ಷೆ ಬರೆಯಲಿದ್ದಾರೆ. ತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳಿಗೆ ಸೆ. 24 ರಂದು ನಡೆಯುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಗೆ 656 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದರು.

ಪರೀಕ್ಷೆಯಲ್ಲಿ ಯಾವುದೇ ಲೋಪವಾಗದಂತೆ ಸುಸೂತ್ರವಾಗಿ ನಡೆಯಲು ಜಿಲ್ಲಾಡಳಿತದಿಂದ 15 ಮಾರ್ಗಾಧಿಕಾರಿಗಳು
ಮತ್ತು 13 ವೀಕ್ಷಕರನ್ನು ನೇಮಿಸಲಾಗಿದೆ. ಪರೀಕ್ಷಾ ದಿನದಂದು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸುವುದನ್ನು, ಪತ್ರಿಕೆ ಬಂಡಲ್‌ ತೆರೆಯುವಾಗ ಮತ್ತು ಪರೀಕ್ಷೆ ನಂತರ ಪತ್ರಿಕೆಗಳ ಬಂಡಲ್‌ ಪ್ಯಾಕ್‌ ಮಾಡುವಾಗ ಕಡ್ಡಾಯವಾಗಿ ವಿಡೀಯೋಗ್ರಾಫಿ ಮಾಡಬೇಕು. ಇದರ ಸಿ.ಡಿ.ಗಳನ್ನು ಆಯೋಗಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದರು.

ಪರೀಕ್ಷೆ ಆರಂಭವಾದ 15 ನಿಮಿಷಗಳ ನಂತರವೂ ಗೈರು ಹಾಜರಾದಂತಹ ಅಭ್ಯರ್ಥಿಗಳಿಗೆ ಮೀಸಲಿರಿಸಿದ ಪ್ರಶ್ನೆ ಪತ್ರಿಕೆಗಳನ್ನು ಪುನಃ ಪ್ಯಾಕ್‌ ಮಾಡಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಮೇಜು, ಕುಡಿಯುವ ನೀರು, ಬೆಳಕು ವಿದ್ಯುತ್‌ದಂತಹ ಕನಿಷ್ಠ ಮೂಲಸೌಲಭ್ಯಗಳಿರುವ ಬಗ್ಗೆ ಪರೀಕ್ಷೆಗೆ ಮುನ್ನವೇ ವೀಕ್ಷಕರು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಖಚಿತಪಡಿಸಿಕೊಳ್ಳಬೇಕು. ಅಲ್ಲದೆ ಪರೀಕ್ಷಾ ದಿನದಂದು ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದರು.

Advertisement

ಅಭ್ಯರ್ಥಿಗಳ ತಪಾಸಣೆ ನಡೆಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಬೇಕು. ಪರೀಕ್ಷಾ ದಿನದಂದು ಪೊಲೀಸ್‌ ಸಿಬ್ಬಂದಿ
ಬಾರದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಲಿಖೀತವಾಗಿ ದೂರು ಸಲ್ಲಿಸಿದರೆ ಸಂಬಂಧಿ ಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾಧಿಕಾರಿಗಳ ಕಚೇರಿಯ ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಪಾಟೀಲ, ಕಲಬುರಗಿ ತಹಶೀಲ್ದಾರ ಅಶೋಕ ಹಿರೊಳ್ಳೆ, ಕೆ.ಪಿ.ಎಸ್‌.ಸಿ. ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಾರ್ಗಾಧಿಕಾರಿಗಳು, ವೀಕ್ಷಕರು, ಉಪ ಮುಖ್ಯ ಮೇಲ್ವಿಚಾರಕರು ಮತ್ತಿತರರು ಹಾಜರಿದ್ದರು.

ಅಂಚೆ ಸೇವೆ ಲಭ್ಯ
ಸೆ.23 ರವಿವಾರ ದಿನದಂದು ಪರೀಕ್ಷೆ ನಡೆಯಲಿರುವುದರಿಂದ ಅಂದಿನ ಪರೀಕ್ಷಾ ಪತ್ರಿಕೆ ಸಾಮಗ್ರಿಗಳನ್ನು ಆಯೋಗಕ್ಕೆ ರವಾನಿಸಲು ಅನುಕೂಲವಾಗುವಂತೆ ವಿಶೇಷವಾಗಿ ನಗರದ ಮುಖ್ಯ ಅಂಚೆ ಕಚೇರಿ, ರೈಲ್ವೆ ನಿಲ್ದಾಣದ ಅಂಚೆ ಕಚೇರಿ, ಬ್ರಹ್ಮಪುರ, ನೆಹರು ಗಂಜ್‌, ಜಿ.ಜಿ.ಎಚ್‌. ಅಂಚೆ ಕಚೇರಿಗಳು ಅಂದು ಕಾರ್ಯನಿರ್ವಹಿಸಲಿವೆ. ಇಲ್ಲಿಂದ ಪರೀಕ್ಷಾ ಸಾಮಗ್ರಿಗಳನ್ನು ರವಾನಿಸಬಹುದು.

ಮೊಬೈಲ್‌ ನಿಷೇಧ
ಪರೀಕ್ಷಾ ಕೇಂದ್ರದಲ್ಲಿ ಕೊಠಡಿ ಮೇಲ್ವಿಚಾರಕರು ಸೇರಿದಂತೆ ಅಭ್ಯರ್ಥಿಗಳು ಮೊಬೈಲ್‌, ಪೇಜರ್‌, ಬ್ಲೂಟೂತ್‌, ವೈರಲೆಸ್‌ ಸೆಟ್‌, ಸ್ಲೆ„ಡರೂಲ್‌ ಕ್ಯಾಲ್ಕುಲೇಟರ್‌, ವಾಚ್‌ ಕ್ಯಾಲ್ಕುಲೇಟರ್‌, ಪಠ್ಯ ಪುಸ್ತಕ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ಸ್‌ ಉಪಕರಣಗಳನ್ನು ತರುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಗುರುತಿನ ಚೀಟಿ ಕಡ್ಡಾಯ
ಸ್ಪರ್ಧಾತ್ಮಕ ಪರೀಕ್ಷೆಗೆ ಬರುವ ಅಭ್ಯರ್ಥಿಗಳು ಪ್ರವೇಶ ಪತ್ರದೊಂದಿಗೆ ಕಡ್ಡಾಯವಾಗಿ ಭಾವಚಿತ್ರವಿರುವ ಚುನಾವಣಾ
ಐ.ಡಿ., ಆಧಾರ್‌ ಕಾರ್ಡ್‌, ಚಾಲನಾ ಪರವಾನಗಿ, ಪಾನ್‌ ಕಾರ್ಡ್‌, ಪಾಸಪೋರ್ಟ್‌, ಸರ್ಕಾರಿ ನೌಕರರ ಐ.ಡಿ. ಮೂಲ
ಗುರುತಿನ ಚೀಟಿ ಅಥವಾ ಅದರ ಛಾಯಾಪ್ರತಿ ತರುವುದು ಕಡ್ಡಾಯವಾಗಿದೆ. ಗುರುತಿನ ಚೀಟಿ ತರದಿದ್ದಲ್ಲಿ ಪರೀಕ್ಷೆ
ಬರೆಯಲು ಅವಕಾಶ ನೀಡಲಾಗುವುದಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next