Advertisement

ಗುಣಮಟ್ಟದ ಶಿಕ್ಷಣಕ್ಕಾಗಿ ಕೆಪಿಎಸ್‌: ಲಾಲಾಜಿ ಮೆಂಡನ್‌

08:18 PM Jun 10, 2019 | Team Udayavani |

ಪಡುಬಿದ್ರಿ: ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡಲು ಹಾಗೂ ಆಂಗ್ಲ ಭಾಷಾ ಶಿಕ್ಷಣವನ್ನು ಸರಕಾರಿ ಶಾಲೆಗಳಲ್ಲೂ ಆರಂಭಿಸುವ ಉದ್ದೇಶದೊಂದಿಗೆ 276 ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗ‌ಳನ್ನು ರಾಜ್ಯದಲ್ಲಿ ತೆರೆಯಲಾಗಿದೆ ಎಂದು ಕಾಪು ಶಾಸಕ ಲಾಲಾಜಿ ಮೆಂಡನ್‌ ಹೇಳಿದರು.

Advertisement

ಅವರು ಜೂ. 10ರಂದು ಪಡುಬಿದ್ರಿಯ ಕರ್ನಾಟಕ ಪಬ್ಲಿಕ್‌ ಸ್ಕೂಲನ್ನು ಉದ್ಘಾಟಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.

ಶಾಲೆಯ ವಾತಾವರಣವು ಯಾವುದೇ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಬಾರದೆಂಬ ದೃಷ್ಟಿಯಿಂದ ಪಡುಬಿದ್ರಿಯ ಈ ಶಾಲೆಗೆ ಈಗಾಗಲೇ ಸರಕಾರದಿಂದ 1 ಕೋಟಿ ರೂ.ಗಳ ಅನುದಾನವನ್ನು ಪಡೆಯುವುದಕ್ಕಾಗಿ ಪ್ರಸ್ತಾವನೆಯನ್ನು ಈಗಾಗಲೇ ಸಲ್ಲಿಸಲಾಗಿದೆ. ಈ ಶಾಲೆಯಲ್ಲಿನ ಶಿಕ್ಷಕರ ಕೊರತೆಯನ್ನು ನೀಗಿಸಲೂ ಪ್ರಯತ್ನಿಸಲಾಗುವುದು ಎಂದು ಶಾಸಕ ಲಾಲಾಜಿ ಮೆಂಡನ್‌
ತಿಳಿಸಿದರು.

ಸಭೆಯನ್ನು ಉದ್ದೇಶಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಮಾತನಾಡಿ, ತರಬೇತಿ ಹೊಂದಿದ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಮೂಲಕ ಎಲ್‌ಕೆಜಿ ಶಿಕ್ಷಕರನ್ನು ನೇಮಿಸಿಕೊಳ್ಳುವುದರೊಂದಿಗೆ ಉತ್ತಮ ಶಿಕ್ಷಣವನ್ನು ನೀಡಲು ಸರಕಾರಿ ಶಾಲೆಗಳೂ ಬದ್ಧವಾಗಿವೆ ಎಂಬುದಾಗಿ ಹೇಳಿದರು. ಅತಿಥಿಗಳಾಗಿದ್ದ ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷೆ ದಮಯಂತಿ ಅಮೀನ್‌, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ರವೀಂದ್ರನಾಥ ಜಿ. ಹೆಗ್ಡೆ ಮಾತನಾಡಿದರು.

ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಜಿ. ಪಂ. ಸದಸ್ಯ ಶಶಿಕಾಂತ್‌ ಪಡುಬಿದ್ರಿ, ತಾ. ಪಂ. ಸದಸ್ಯೆ ನೀತಾ ಗುರುರಾಜ್‌, ಶಿಕ್ಷಣ ಸಂಯೋಜಕಿ ಉಮಾ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸರೋಜಿನಿ ಉಪಸ್ಥಿತರಿದ್ದರು. ಕೆಪಿಎಸ್‌ ಮೇಲ್ವಿಚಾರಕಿ, ಕಾಲೇಜು ಪ್ರಭಾರ ಪ್ರಾಂಶುಪಾಲೆ ಯಶೋದಾ ಸ್ವಾಗತಿಸಿದರು. ಶಿಕ್ಷಕಿ ಫ್ಲೋರಿನ್‌ ಆಳ್ವ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಧ್ಯಾಪಕ ಪ್ರಸನ್ನ ವಂದಿಸಿದರು.

Advertisement

ಬಡವಾದ ಕನ್ನಡ ಮಾಧ್ಯಮ ಶಾಲೆ
ಕೆಪಿಎಸ್‌ ಪ್ರವೇಶಾತಿಗಾಗಿ ವಿದ್ಯಾರ್ಥಿಗಳನ್ನು ಮನವೊಲಿಸಲಾಗಿದ್ದು ಸದ್ಯ ಕನ್ನಡ ಮಾಧ್ಯಮದ ಒಂದನೇ ತರಗತಿಗೆ ಪಡುಬಿದ್ರಿಯ ಕೆಪಿಎಸ್‌ನಲ್ಲಿ ವಿದ್ಯಾರ್ಥಿಗಳೇ ಇಲ್ಲ. ಸದ್ಯ ಇಲ್ಲಿನ ಕೆಪಿಎಸ್‌ನಲ್ಲಿ ಎಲ್‌ಕೆಜಿಗೆ 6, ಯುಕೆಜಿಗೆ 7ಹಾಗೂ ಆಂಗ್ಲ ಮಾಧ್ಯಮ ಶಿಕ್ಷಣದ 1ನೇ ತರಗತಿಗೆ 7 ವಿದ್ಯಾರ್ಥಿಗಳು ಇದ್ದಾರೆ. ಇನ್ನೂ ಮಕ್ಕಳು ಸೇರ್ಪಡೆಯಾಗಲಿರುವುದಾಗಿಯೂ ಶಿಕ್ಷಕಿಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next