Advertisement

ಕೆಪಿಎಲ್‌: ಇಂದು ಬೆಳಗಾವಿ, ಹುಬ್ಬಳ್ಳಿ ಸೆಮೀಸ್‌

11:30 AM Sep 20, 2017 | |

ಹುಬ್ಬಳ್ಳಿ: ಮಾರಕ ಬೌಲಿಂಗ್‌ ದಾಳಿ ಹಾಗೂ ಉತ್ತಮ ಬ್ಯಾಟಿಂಗ್‌ ಜೊತೆಯಾಟದ ನೆರವಿನಿಂದ ಮೈಸೂರು ವಾರಿಯರ್ ತಂಡವನ್ನು 57 ರನ್‌ಗಳಿಂದ ಮಣಿಸಿದ “ನಮ್ಮ ಶಿವಮೊಗ್ಗ’ ತಂಡ ಕೆಪಿಎಲ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಹಾಕಿದೆ. ಇಲ್ಲಿನ ರಾಜನಗರ ಕೆಎಸ್‌ಸಿಎ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಶಿವಮೊಗ್ಗ ತಂಡ 20 ಓವರ್‌ಗೆ 6 ವಿಕೆಟ್‌ ಕಳೆದುಕೊಂಡು 142 ರನ್‌ ಕಲೆ ಹಾಕಿತು. ಈ ಸಂದರ್ಭದಲ್ಲಿ ಮಳೆ ಬಂದು ಕೆಲವು ಹೊತ್ತು ಪಂದ್ಯಕ್ಕೆ ಅಡ್ಡಿಯಾಗಿತ್ತು. ಹೀಗಾಗಿ ಮೈಸೂರು ತಂಡಕ್ಕೆ ವಿಜೆಡಿ ನಿಯಮದಂತೆ 14 ಓವರ್‌ಗೆ 110 ರನ್‌
ಗುರಿ ನೀಡಲಾಗಿತ್ತು. ಗುರಿ ಬೆನ್ನುಹತ್ತಿದ ಮೈಸೂರು ತಂಡ 11.1 ಓವರ್‌ಗೆ ಕೇವಲ 52 ರನ್‌ ಬಾರಿಸಿ ಎಲ್ಲಾ ವಿಕೆಟ್‌ ಕಳೆದುಕೊಂಡು ಸೋಲುಂಡಿತು.

Advertisement

ಗುರಿ ಬೆನ್ನಟ್ಟಿದ ಮೈಸೂರು ಬ್ಯಾಟ್ಸ್‌ಮನ್‌ಗಳು ಶಿವಮೊಗ್ಗ ಬೌಲರ್‌ಗಳ ದಾಳಿಗೆ ಸಿಲುಕಿ ಪೆವಿಲಿಯನ್‌ ಅತ್ತ ಪರೇಡ್‌ ನಡೆಸಿದರು. ಸುನೀಲ್‌ ರಾಜು (15) ಮತ್ತು ಶ್ರೇಯಸ್‌ ಗೋಪಾಲ್‌(14) ಬಿಟ್ಟರೆ ಮತ್ಯಾವ ಆಟಗಾರರೂ ಎರಡಂಕಿಯ ಮೊತ್ತವನ್ನು ದಾಟಲಿಲ್ಲ.  

ಶಿವಮೊಗ್ಗಕ್ಕೆ ಜೋನಾಥನ್‌, ಮ್ಯಾನೇಜರ್‌ ಆಸರೆ: ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಶಿವಮೊಗ್ಗ ತಂಡಕ್ಕೆ ಆರ್‌.ಜೋನಾಥನ್‌ ಮತ್ತು ಶೋಯಿಬ್‌ ಮ್ಯಾನೇಜರ್‌ ಆಸರೆಯಾದರು. ಮ್ಯಾನೇಜರ್‌ 38 ರನ್‌ಗಳಿಸಿ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಅಕ್ಷಯ್‌ ಬೌಲಿಂಗ್‌ನಲ್ಲಿ ಔಟ್‌ ಆದರು. ಆರ್‌.ಜೋನಾಥನ್‌ 38 ರನ್‌ ಬಾರಿಸಿದರು. ಹುಬ್ಬಳ್ಳಿ ತಂಡಕ್ಕೆ ಜಯ ಸಂಘಟಿತ ಪ್ರದರ್ಶನ ನೀಡಿದ ಹುಬ್ಬಳ್ಳಿ ಟೈಗರ್ ಕೆಪಿಎಲ್‌ನಲ್ಲಿ ಬಳ್ಳಾರಿ ಟಸ್ಕರ್ ವಿರುದ್ಧ 8 ರನ್‌ಗಳಿಂದ ಜಯ ಸಾಧಿಸಿದೆ. ಈ ಮೂಲಕ ಹುಬ್ಬಳ್ಳಿ ತಂಡ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಹುಬ್ಬಳ್ಳಿ ತಂಡ 20 ಓವರ್‌ಗೆ 7 ವಿಕೆಟ್‌ ಕಳೆದುಕೊಂಡು 154 ರನ್‌ ಬಾರಿಸಿತ್ತು. ಮಳೆಯ ಕಾರಣ ಬಳ್ಳಾರಿ ಗೆಲುವಿಗೆ 15 ಓವರ್‌ಗೆ 124 ರನ್‌ ಗುರಿ ನೀಡಲಾಗಿತ್ತು. ಗುರಿ ಬೆನ್ನುಹತ್ತಿದ ಬಳ್ಳಾರಿ ತಂಡ 15 ಓವರ್‌ಗೆ 6 ವಿಕೆಟ್‌ ಕಳೆದುಕೊಂಡು 115 ರನ್‌ ಬಾರಿಸಿ ಅಲ್ಪ ಅಂತರದ ಸೋಲುಂಡಿತು.

ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next