Advertisement

ಕೆಪಿಎಲ್‌ ಫಿಕ್ಸಿಂಗ್‌ ಪ್ರಕರಣ:ಶಿಂಧೆಗೆ ನ್ಯಾಯಾಂಗ ಬಂಧನ

08:52 AM Dec 08, 2019 | Sriram |

ಬೆಂಗಳೂರು: ಕೆಪಿಎಲ್‌ ಮ್ಯಾಚ್‌ ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬೆಳಗಾವಿ ಪ್ಯಾಂಥರ್ಸ್‌ ತಂಡ ತರಬೇತುದಾರ ಹಾಗೂ ಕೆಎಸ್‌ಸಿಎ ಆಡಳಿತ ಸಮಿತಿ ಸದಸ್ಯ ಸುಧೀಂದ್ರ ಶಿಂಧೆಯನ್ನು ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Advertisement

ಪ್ರಕರಣ ಸಂಬಂಧ ಶಿಂಧೆ ಮನೆ ಮೇಲೆ ಡಿ.2ರಂದು ದಾಳಿ ನಡೆಸಿದ್ದ ಸಿಸಿಬಿ ತಂಡ, ಆತನ ಮನೆಯಲ್ಲಿ ಪತ್ತೆಯಾದ ದಾಖಲೆಗಳನ್ನು ಆಧರಿಸಿ ಆರೋಪಿಯನ್ನು ಡಿ.3ರಂದು ಬಂಧಿಸಿ ಹೆಚ್ಚಿನ ವಿಚಾರಣೆಗೆ ಐದು ದಿನಗಳ ಕಾಲ ವಶಕ್ಕೆ ಪಡೆದುಕೊಂಡಿತ್ತು. ಇದೀಗ ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಶನಿವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಕಣ್ಣಿರು ಸುರಿಸಿದ ಶಿಂಧೆ
ವಿಚಾರಣೆ ಸಂದರ್ಭದಲ್ಲಿ ತನಿಖಾಧಿಕಾರಿ ಎದುರು ಹೇಳಿಕೆ ದಾಖಲಿಸುವಾಗ ಆರೋಪಿ ಸುಧೀಂದ್ರ ಶಿಂಧೆ, ಕಣ್ಣಿರು ಸುರಿಸುತ್ತ, ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ತಂಡದ ಮಾಲೀಕ ಅಶ್ಫಾಕ್‌ ಅಲಿ ತಹ್ರಾ ಸೂಚನೆಯಂತೆ ನಡೆದುಕೊಳ್ಳುತ್ತಿದೆ. ಅದರಂತೆ ಆಟಗಾರರಿಗೂ ಸಲಹೆ ನೀಡುತ್ತಿದ್ದೆ ಎಂದು ಹೇಳಿಕೆ ದಾಖಲಿಸಿದ್ದಾನೆ. ಅಲ್ಲದೆ, ಕೋರ್ಟ್‌ಗೆ ಹಾಜರು ಪಡಿಸಿದಾಗಲೂ ಆರೋಪಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ನಟ, ನಟಿಯರ ಬಗ್ಗೆ ಮಾಹಿತಿ ಸಂಗ್ರಹ
ಹನಿಟ್ರ್ಯಾಪ್‌ ಮೂಲಕ ಕೆಲ ಆಟಗಾರರನ್ನು ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ ದಂಧೆಗೆ ದೂಡುತ್ತಿದ್ದರು. ಅದಕ್ಕೆ ಚೇರ್‌ಗರ್ಲ್ಸ್‌ ಹಾಗೂ ಕೆಲ ನಟಿಯರನ್ನು ಬಳಸಿಕೊಳ್ಳುತ್ತಿದ್ದರು ಎಂಬುದು ಗೊತ್ತಾಗಿದೆ. ಹೀಗಾಗಿ ಕೆಪಿಎಲ್‌ನ ಎಲ್ಲ ತಂಡದ ರಾಯಭಾರಿಯಾಗಳಾಗಿರುವ ನಟ, ನಟರಿಯರ ಪಟ್ಟಿ ಸಂಗ್ರಹಿಸಲಾಗಿದೆ. ಮ್ಯಾಚ್‌ ಆರಂಭ ಹಾಗೂ ಮುಗಿದ ಬಳಿಕ ಅವರ ಚಟುವಟಿಕೆಗಳೇನು ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಈ ಪೈಕಿ ಕೆಲ ನಟಿಯರು ಆರೋಪಿಗಳ ಸೂಚನೆ ಮೇರೆಗೆ ಆಟಗಾರರನ್ನು ಹನಿಟ್ರ್ಯಾಪ್‌ಗೆ ಕೆಡವುತ್ತಿದ್ದರು ಎಂದು ಹೇಳಲಾಗಿದೆ. ಅಂತಹ ನಟಿಯರನ್ನು ಪತ್ತೆ ಹಚ್ಚಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಲಾಗುವುದು ಎಂದು ಸಿಸಿಬಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next