Advertisement

Attendance ಹಾಕಿದ ಕೆಪಿಸಿಸಿ ಕಾರ್ಯಾಧ್ಯಕ್ಷ; ನಿರಾಸಕ್ತರ ಬದಲಾವಣೆಗೆ ಸೂಚನೆ!

08:32 PM Apr 08, 2024 | Team Udayavani |

ಶಿರಸಿ: ಕೆಪಿಸಿಸಿ ಕಾರ‍್ಯಾಧ್ಯಕ್ಷ ಮಂಜುನಾಥ ಭಂಡಾರಿ ಅವರು ನಡೆಸಿದ ಜಿಲ್ಲಾ ಮಟ್ಟದ ಕಾಂಗ್ರೆಸ್ ವಿವಿಧ ಸೆಲ್‌ಗಳ ಸಭೆಯಲ್ಲಿ, ಜಿಲ್ಲಾ ಕಾರ್ಯಕಾರಿಣಿಯಲ್ಲಿ ಸ್ವತಃ ಮೇಷ್ಟ್ರಂತೆ ಮಕ್ಕಳ ಹಾಜರಾತಿ ಹಾಕಿದಂತೆ ಹಾಜರಾತಿ ಕೂಡ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಉತ್ತರ ಕನ್ನಡಕ್ಕೆ ಪ್ರಥಮ ಬಾರಿಗೆ ಆಗಮಿಸಿದ್ದ ಮಂಜುನಾಥ ಭಂಡಾರಿ ಅವರು ರವಿವಾರ ವಿವಿಧ ಸೆಲ್‌ಗಳ, ಜಿಲ್ಲಾ ಕಾರ್ಯಕಾರಣಿಯ ಸಭೆ ನಡೆಸಿದ್ದರು. ಆದರೆ, ಸಭೆಯಲ್ಲಿ ಅನುಪಸ್ಥಿತಿ ಇದ್ದವರ ಪತ್ತೆಗೆ ಇದೇ ಪ್ರಥಮ ಬಾರಿಗೆ ಈ ವಿಧಾನ ನಡೆಸಿದ್ದು, ಕೆಲವು ಪ್ರಮುಖರಿಗೆ ಮುಜುಗರವನ್ನೂ ತಂದಿಟ್ಟಿತು. ಆದರೆ, ಸಭೆಗೆ ಬಾರದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಭಂಡಾರಿ ಅವರು, ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸಿದ್ದಾರೆ ಎನ್ನಲಾಗಿದೆ.

ಮಂಜುನಾಥ ಅವರು ಸಿಟ್ಟಾಗಲು, ಜಿಲ್ಲೆಯ 14 ಬ್ಲಾಕ್ ಅಧ್ಯಕ್ಷರಲ್ಲಿ ಮೂವರು ಗೈರಾಗಿದ್ದುದು.
134 ಜಿಲ್ಲಾ ಕಾರ್ಯಕಾರಿ ಸದಸ್ಯರಲ್ಲಿ 54 ಜನರು ಮಾತ್ರ ಹಾಜರಾಗಿದ್ದುದು. ಇನ್ನು ಒಂದು ತಿಂಗಳು ಲೋಕಸಭಾ ಚುನಾವಣೆಗೆ ಸಮಯ ಇದೆ. ಇಷ್ಟು ಕಡಿಮೆ ಸಮಯದಲ್ಲೂ ಪ್ರಮುಖರೇ ನಿರ್ಲಕ್ಷ್ಯ ಮಾಡಿದರೆ ಸಹಿಸಲು ಸಾಧ್ಯ ಇಲ್ಲ. ಕೆಲಸ ಮಾಡಲು ಆಗದೇ ಇದ್ದರೆ ಇನ್ನೊಬ್ಬರಿಗೆ ಅವಕಾಶ ಕೊಡುತ್ತೇವೆ ಎಂದೂ ಸಭೆಯಲ್ಲಿ ಭಂಡಾರಿ ಹೇಳಿದ್ದಾರೆ ಎಂದು ಪಕ್ಷದ ಪ್ರಮುಖರೊಬ್ಬರು ತಿಳಿಸಿದ್ದಾರೆ.

ಡಾ. ಅಂಜಲಿ ನಿಂಬಾಳ್ಕರ್ ಅವರನ್ನು ಉತ್ತರ ಕನ್ನಡಕ್ಕೆ ಸ್ವತಃ ಸಿಎಂ ಕದಂಬೋತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ಕರೆತಂದಾಗಲೇ ಅವರಿಗೇ ಟಿಕೆಟ್ ಎಂಬ ಗುಸುಗುಸು ಕೇಳೀ ಬಂದಿತ್ತು. ನಂತರ ಅರಣ್ಯ ಅತಿಕ್ರಮಣದಾರರ ಪರ ಹೋರಾಟ ಮಾಡುತ್ತಿರುವ ರವೀಂದ್ರ ನಾಯ್ಕ, ಅಶ್ವಿನ್ ಭೀಮಣ್ಣ ನಾಯ್ಕ ಹೆಸರೂ ಮುಂಚೂಣಿಗೆ ಬಂದಿತ್ತು. ಆದರೆ, ಕೊನೇ ಘಳಿಗೆಯಲ್ಲಿ ಅಂಜಲಿ ಹೆಸರು ಪ್ರಕಟಗೊಂಡು ಕ್ಷೇತ್ರದ ಓಡಾಟ ಹೆಚ್ಚಿಸಿಕೊಂಡಿದ್ದಾರೆ. ಮೊನ್ನೆ ಬೆಂಗಳೂರಿಂದ ಬಿ ಫಾರಂ ಕೂಡ ತಂದಿದ್ದಾರೆ. ಮಠಾಧೀಶರ, ದೇವಸ್ಥಾನದ ಓಡಾಟ ಮಾಡಿದ್ದಾರೆ.

ಇಡೀ ದಿನ ನಡೆದ ವಿವಿಧ ಸೆಲ್‌ಗಳ ಸಭೆಯಲ್ಲಿ ಅನೇಕರು ಗೈರಾಗಿದ್ದರು. ಹಳಬರೂ ಕೆಲಸ ಮಾಡಲ್ಲ ಎಂದರೆ ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎನ್ನುವ ಅವರ ಮಾತು ಅನೇಕರಿಗೆ ನುಂಗಲಾರದ ತುತ್ತಾಗಿದೆ. ತನ್ಮಧ್ಯೆ ಚುನಾವಣೆ ಅಖಾಡ ಸಮೀಪ ಆಗುತ್ತಿದ್ದಂತೆ, ಅಭ್ಯರ್ಥಿ ಬಿರುಸಿನ ಓಡಾಟ ನಡೆಸುತ್ತಿದ್ದರೂ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪ್ರಮುಖರು ಗೈರಾಗುತ್ತಿರುವದರ ಹೊಗೆಯ ಮೂಲ ಸಭೆಯಲ್ಲಿದ್ದ ಕಾಂಗ್ರೆಸ್ಸಿಗರಿಗೂ ಗೊತ್ತಾಗಿಲ್ಲ ಎನ್ನಲಾಗಿದೆ. ಈ ಮಧ್ಯೆ ಸುದ್ದಿಗೋಷ್ಠಿಯಲ್ಲೂ ಮಾತನಾಡಿದ್ದ ಮಂಜುನಾಥ ಅವರು, ಪಕ್ಷದಲ್ಲಿ ಸಕ್ರೀಯವಾಗಿ ಕಾರ್ಯ ಮಾಡದ ಪ್ರಮುಖರ ಹುದ್ದೆ ಬದಲಾವಣೆಗೂ ಸೂಚಿಸುವದಾಗಿ ಹೇಳಿದ್ದರು.

Advertisement

ಈ ಮಧ್ಯೆ ಕೆಲವು ಪ್ರಭಾವಿಗಳೇ ರವಿವಾರದ ಸಭೆಗೆ ಗೈರಾಗಿದ್ದರು. ಅವರನ್ನು ಆ ಹುದ್ದೆಯಿಂದ ಚುನಾವಣೆಯ ಕಾಲ ಘಟ್ಟದಲ್ಲಿ ಬದಲಾಯಿಸಿದರೆ ಅದು ಚುನಾವಣೆಯ ಮೇಲೂ ಪರಿಣಾಮ ಆಗಬಹುದು ಎಂಬುದು ರಾಜಕೀಯ ವಿಶ್ಲೇಷಣೆ ಮಾಡಲಾಗುತ್ತಿದೆ. ಆದರೆ, ಇದ್ದೂ ಇಲ್ಲದಂತೆ ಇರುವವರನ್ನು ಇಟ್ಟುಕೊಂಡು ಚುನಾವಣೆ ನಡೆಸುವದು ಹೇಗೆ ಎಂಬುದು ಇನ್ನೊಂದು ಪ್ರಶ್ನೆಯಾಗಿದೆ.

ಈ ಮಧ್ಯೆ ಪಕ್ಷದಲ್ಲಿ ಸಕ್ರೀಯವಾಗಿ ಕೆಲಸ ಮಾಡಿದ್ದ ಅನೇಕರನ್ನು ಈ ಚುನಾವಣೆಯ ಸಂಘಟನೆಯಲ್ಲಿ ದೂರ ಇಡಲಾಗುತ್ತಿದೆ ಎಂಬ ಮಾತುಗಳೂ ಕೇಳಿ ಬಂದಿದೆ. ಚುನಾವಣೆ ಘೋಷಣೆಗೂ ಮೊದಲು ಗ್ಯಾರಂಟಿ ಅನುಷ್ಠಾನ ಸಮಿತಿಗೆ ನೇಮಕವಾದ ಅನೇಕರು ಸಭೆಗೆ ಬಾರದಿರುವರಿಗೆ ತೂಗು ಕತ್ತಿಯೇ ಎಂದು ಕಾದುನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next