ಬೆಂಗಳೂರು:ಗುತ್ತಿಗೆದಾರ ಸಂತೋಷ ಪಾಟೀಲ ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಬಲಿಪಶು ಆಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ ಸಚಿವ ಕೆ ಎಸ್ ಈಶ್ವರಪ್ಪ ಅವರ ಮೇಲೆ ನೇರ ಆರೋಪ ಮಾಡಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಮಾಡಬೇಕು ಮತ್ತು ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಿಜೆಪಿ ಸರ್ಕಾರ ಪಕ್ಷದ ಕಾರ್ಯಕರ್ತರಿಗೆ ಕೋಟ್ಯಂತರ ರೂಪಾಯಿ ಗುತ್ತಿಗೆಯನ್ನು ವರ್ಕ್ ಆರ್ಡರ್ ಇಲ್ಲದೆ, ಟೆಂಡರ್ ಕರೆಯದೇ ಬಾಯಿ ಮಾತಿನಲ್ಲಿ ಕಾಮಗಾರಿ ಕೊಡುತ್ತಿದ್ದಾರೆ, ನಂತರ ಹಣ ಪಾವತಿ ಮಾಡುತ್ತಿದ್ದಾರೆ ಎಂಬುದೂ ಈ ಪ್ರಕರಣದಿಂದ ಬಹಿರಂಗವಾಗಿದೆ. ಇದು ನಿಯಮ ಬಾಹಿರ ಹಾಗೂ ಪಕ್ಷಪಾತದಿಂದ ಕೂಡಿದೆ, ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ನವರು ಹೇಳಿದ ಕೂಡಲೇ ಹಗರಣ ಆಗಲ್ಲ, ತನಿಖೆಯಾಗಬೇಕು : ಆರಗ ಜ್ಞಾನೇಂದ್ರ ಕಿಡಿ
ದೇಶಭಕ್ತಿ, ರಾಷ್ಟ್ರಪ್ರೇಮ ಎಂದು ಬೊಬ್ಬೆ ಹೊಡೆಯುವ ಬಿಜೆಪಿ ಸರ್ಕಾರದ ನಿಜ ಬಣ್ಣ ಈಗ ಬಯಲಾಗಿದೆ. ಈ ಸರ್ಕಾರದಲ್ಲಿ ಶೇ.40ರಷ್ಟು ಕಮಿಷನ್ ದಂಧೆ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘ ಮಾಡಿದ ಆರೋಪಕ್ಕೆ ಈಗ ಸ್ಪಷ್ಟ ಪುಷ್ಟಿ ಸಿಕ್ಕಿದೆ ಎಂದಿದ್ದಾರೆ.
ಈ ಕೂಡಲೇ ಮುಖ್ಯಮಂತ್ರಿ ಶ್ರೀ ಬಿ ಎಸ್ ಬೊಮ್ಮಾಯಿ ರವರು ಸಚಿವ ಕೆ ಎಸ್ ಈಶ್ವರಪ್ಪ ಅವರನ್ನು ಸಚಿವ ಸಂಪುಟ ದಿಂದ ವಜಾ ಮಾಡಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.