ಕಾಪು: ರಾಜ್ಯದಲ್ಲಿ ಇತ್ತೀಚೆಗೆ ಬಂದ ಅತೀವ ಮಳೆಯಿಂದ ಉಂಟಾದ ನೆರೆಯಿಂದಾಗಿ ಆದ ಕೃಷಿ ಮತ್ತು ಆಸ್ತಿಪಾಸ್ತಿಗಳಿಗಾದ ನಷ್ಟದ ಸಮೀಕ್ಷೆಗಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ನಿಯೋಜಿಸಲ್ಪಟ್ಟ ಮಾಜಿ ಸಚಿವ ರಮಾನಾಥ್ ರೈ ಅವರ ನೇತೃತ್ವದ ನಿಯೋಗ ಬುಧವಾರ ಕಾಪುವಿಗೆ ಭೇಟಿ ನೀಡಿತು. ಮಾಜೀ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಬಿ. ರಮಾನಾಥ್ ರೈ ಅವರು ಈ ನಿಯೋಗದ ನೇತೃತ್ವ ವಹಿಸಿದ್ದರು.
ಪ್ರವಾಹ ಸಂತ್ರಸ್ತ ಪ್ರದೇಶದ ಜನರು ತಮ್ಮ ಸಂಕಷ್ಟವನ್ನು ಈ ನಿಯೋಗದ ಮುಂದೆ ತೋಡಿಕೊಂಡರು. ನಿಯೋಗವು ಸಂತ್ರಸ್ತರ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಗಮನ ಸೆಳೆಯುವ ಭರವಸೆಯನ್ನು ಕಾಂಗ್ರೆಸ್ ಮುಖಂಡರು ನೀಡಿದರು.
ಮಾಜಿ ಸಚಿವರಾದ ಯು. ಟಿ. ಖಾದರ್, ವಿನಯ್ ಕುಮಾರ್ ಸೊರಕೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಪ್ರವೀಣ್ ಶೆಟ್ಟಿ, ಮಹಮ್ಮದ್ ಸಾಧಿಕ್, ಹರೀಶ್ ಕಿಣಿ, ವಿಶ್ವಾಸ್ ಅಮೀನ್, ಇಸ್ಮಾಯಿಲ್ ಆತ್ರಾಡಿ, ಚಂದ್ರಿಕಾ ಕೇಲ್ಕರ್, ವಿಲ್ಸನ್ ರೋಡ್ರಿಗಸ್, ಅಬ್ದುಲ್ ಹಮೀದ್, ಅಮೀರ್ ಮಹಮ್ಮದ್, ಹರೀಶ್ ನಾಯಕ್ ಮೊದಲಾದವರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಅತಿವೃಷ್ಟಿಯಿಂದ ಉಂಟಾದ ಪ್ರವಾಹ ಪರಿಸ್ಥಿತಿಯಿಂದಾಗಿ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಭಾರೀ ನಷ್ಟ ಉಂಟಾಗಿದೆ. ಹಾಗಾಗಿ ಪರಿಹಾರ ವಿತರಣೆ, ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ಪರಿಹಾರ ಕಾರ್ಯಗಳ ನಿರ್ವಹಣೆಗಾಗಿ ವಿಶೇಷ ಪ್ಯಾಕೇಜ್ ಅನ್ನು ಘೋಷಿಸುವಂತೆ ಮತ್ತು ಈಗಾಗಲೇ ಮುಖ್ಯಮಂತ್ರಿಗಳು ಘೋಷಣೆ ಮಾಡಿರುವ 10 ಸಾವಿರ ರೂಪಾಯಿಗಳನ್ನು ಪರಿಹಾರ ರೂಪವಾಗಿ ತಕ್ಷಣವೇ ವಿತರಿಸುವಂತೆ ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
ನೆರೆ ಹಾನಿ ಸಂತ್ರಸ್ತರ ನೋವಿಗೆ ಸ್ಪಂದಿಸಿ, ಅವಳಿ ಜಿಲ್ಲೆಗಳಲ್ಲಿನ ಹಾನಿ ಪರಿಶೀಲನೆ ಮಾಡಿ, ಅಭಿವೃದ್ಧಿಗೆ ಒತ್ತು ನೀಡಬೇಕು ಮತ್ತು ಆಯಾಯ ಭಾಗದ ಶಾಸಕರು ಈ ಬಗ್ಗೆ ಸರಕಾರದ ಗಮನ ಸೆಳೆಯಲಿ ಎಂದು ಶಾಸಕ ಯು.ಟಿ. ಖಾದರ್ ಅವರು ಕರಾವಳಿ ಜಿಲ್ಲೆಯ ಶಾಸಕರನ್ನು ಒತ್ತಾಯಿಸಿದರು.