Advertisement

ಯಾರಿಗೂ ಅಭ್ಯರ್ಥಿ ಘೋಷಣೆ ಹಕ್ಕಿಲ್ಲ: ಡಿ.ಕೆ.ಶಿವಕುಮಾರ್‌

09:49 PM Nov 21, 2022 | Team Udayavani |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗಾಗಿ ಅಭ್ಯರ್ಥಿಗಳನ್ನು ಘೋಷಿಸುವ ಹಕ್ಕು ಕೆಪಿಸಿಸಿ ಅಧ್ಯಕ್ಷನಾದ ನನಗೂ ಇಲ್ಲ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಇಲ್ಲ ಎಂದು ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

Advertisement

ಭಾನುವಾರವಷ್ಟೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೊಪ್ಪಳ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದ್ದರು. ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಡಿಕೆಶಿ, ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತ್ರ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಹಕ್ಕಿದೆ. ಇದು ನಮಗಿಲ್ಲ ಎಂದು ಹೇಳಿದರು.

ಯಾವ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಅಲ್ಲಿರುವವರಿಗೆ ಉತ್ತೇಜನ ನೀಡಲು ಹೇಳಿರಬಹುದು. ಆದರೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ, ಹೈಕಮಾಂಡ್‌ಗೆ ಮಾತ್ರ ಅಭ್ಯರ್ಥಿ ತೀರ್ಮಾನಿಸುವ ಅಧಿಕಾರ ಇದೆ ಎಂದು ಪುನರುಚ್ಚರಿಸಿದರು.

ಸಿದ್ದು ಸ್ಪರ್ಧೆ ಇನ್ನೂ ಸಸ್ಪೆನ್ಸ್‌:

ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ಅವಧಿ ಮುಕ್ತಾಯವಾಗಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರ ಆಯ್ಕೆ ಬಗ್ಗೆ ಅರ್ಜಿಯಲ್ಲಿ “ಹೈಕಮಾಂಡ್‌ ವಿವೇಚನೆಗೆ’ ಎಂದು ಬರೆದಿರುವುದು ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯ ಅವರ ಪರವಾಗಿ ಆಪ್ತ ಸಹಾಯಕರು ಕೆಪಿಸಿಸಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿದ್ದಾರೆ.

Advertisement

ಇತ್ತೀಚೆಗಷ್ಟೇ ಕೋಲಾರ, ವರುಣಾ, ಬಾದಾಮಿ ಶಾರ್ಟ್‌ ಲಿಸ್ಟ್‌ನಲ್ಲಿದೆ. ಹೈಕಮಾಂಡ್‌ ಹೇಳಿದ ಕಡೆ ಸ್ಪರ್ಧೆ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಈಗ ಅರ್ಜಿಯಲ್ಲಿ ಕ್ಷೇತ್ರದ ಬಗ್ಗೆ ಉಲ್ಲೇಖೀಸಿಲ್ಲ.

ಪ್ರಮುಖರೆಲ್ಲರಿಂದ ಅರ್ಜಿ :

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌, ಕಾರ್ಯಾಧ್ಯಕ್ಷರಾದ ಸತೀಶ್‌ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಈಶ್ವರ್‌ ಖಂಡ್ರೆ ಸೇರಿ ಪ್ರಮುಖ ನಾಯಕರು ತಮ್ಮ ತಮ್ಮ ಕ್ಷೇತ್ರ ಆಯ್ಕೆ ಬರೆದು ಭರ್ತಿ ಮಾಡಿದ್ದಾರೆ. ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಸಹ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದು ಮೊಳಕಾಳ್ಮೂರು ಕ್ಷೇತ್ರದಿಂದ ಟಿಕೆಟ್‌ ಬಯಸಿದ್ದಾರೆ. ಹೊಸಕೋಟೆ ಕ್ಷೇತ್ರದಿಂದ ಹಾಲಿ ಶಾಸಕ ಶರತ್‌ ಬಚ್ಚೇಗೌಡ ಜತೆಗೆ ಗಿಡ್ಡಪ್ಪನಹಳ್ಳಿಯ ವಿ.ಪ್ರಸಾದ್‌ ಎಂಬವರು ಅರ್ಜಿ ಸಲ್ಲಿಸಿರುವುದು ಕುತೂಹಲ ಮೂಡಿಸಿದೆ.

ಅರ್ಜಿ ಸಲ್ಲಿಕೆ ಅವಧಿ ಮುಕ್ತಾಯ :

ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾದ ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಆಕಾಂಕ್ಷಿಗಳು ತಮ್ಮ ಬೆಂಬಲಿಗರ ಜತೆ ಬಂದು ಭರ್ತಿ ಮಾಡಿದ ಅರ್ಜಿ ಸಲ್ಲಿಸಿ ಫೋಟೋ ತೆಗೆಸಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಹುತೇಕ ಎಲ್ಲ ಹಾಲಿ ಶಾಸಕರು, ಮಾಜಿ ಶಾಸಕರು ಅರ್ಜಿ ಸಲ್ಲಿಸಿದ್ದಾರೆ. ಹಾಲಿ ಶಾಸಕರ ಕ್ಷೇತ್ರಗಳಲ್ಲಿ ಕೆಲವೆಡೆ 4 - 5 ಅರ್ಜಿಗಳು ಸಲ್ಲಿಕೆಯಾಗಿವೆ.

ಒಟ್ಟಾರೆ ಕಾಂಗ್ರೆಸ್‌ ಟಿಕೆಟ್‌ಗಾಗಿ 1,350 ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿ ಶುಲ್ಕ ಹಾಗೂ ಠೇವಣಿಯಿಂದ ಕೆಪಿಸಿಸಿಗೆ 20 ಕೋಟಿ ರೂ.ಗೂ ಹೆಚ್ಚು ಸಂಗ್ರಹವಾಗಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next