ಧಾರವಾಡ: ಕೆಪಿಸಿಸಿ ಅಧ್ಯಕ್ಷ ಸ್ಥಾನ ಉತ್ತರ ಕರ್ನಾಟಕಕ್ಕೆ ನೀಡಬೇಕೆಂಬ ಆಗ್ರಹ ನಮ್ಮದಾಗಿತ್ತು. ಆದರೆ ಮುಂದಿನ ಚುನಾವಣೆ ಪರಿಗಣಿಸಿ ಕೆಪಿಸಿಸಿ ಅಧ್ಯಕ್ಷರನ್ನಾಗಿ ಜಿ.ಪರಮೇಶ್ವರ ಅವರನ್ನೇ ಮುಂದುವರಿಸಿದ್ದನ್ನು ಸ್ವಾಗತಿಸುತ್ತೇನೆ ಎಂದು ವಿಧಾನ ಪರಿಷತ್‌ನ ಮಾಜಿ ಅಧ್ಯಕ್ಷ ವೀರಣ್ಣ ಮತ್ತಿಕಟ್ಟಿ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೂಮ್ಮೆ ಕಾಂಗ್ರೆಸ್ ಪಕ್ಷ ಚುಕ್ಕಾಣಿ ಹಿಡಿಯಲು ಪಕ್ಷದ ಅಧ್ಯಕ್ಷರಾಗಿ ಜಿ. ಪರಮೇಶ್ವರ ಮತ್ತೂಮ್ಮೆ ಅಧ್ಯಕ್ಷರಾಗಿದ್ದಾರೆ. ಅವರು ಸರ್ವೋತ್ತಮ ನಾಯಕರೂ ಹೌದು.
ಕೆಪಿಸಿಸಿ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪರಮೇಶ್ವರ ಅವರ ಪಕ್ಷ ಸಂಘಟನೆ ಪರಿಗಣಿಸಿ ಆಯ್ಕೆ ಮಾಡಿದ್ದು ಸಂತೋಷ ತಂದಿದೆ ಎಂದರು. ಉ.ಕ ಭಾಗದ ಎಸ್.ಆರ್. ಪಾಟೀಲ ಅವರಿಗೆ ಕಾರ್ಯಾಧ್ಯಕ್ಷ ಹಾಗೂ ಸತೀಶ ಜಾರಕಿಹೊಳಿ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾಡಿದ್ದು ಸಮಾಧಾನ ತಂದಿದೆ.
ಪಕ್ಷದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಅನಿವಾರ್ಯ. ಮುಂದೆ ಕೆಪಿಸಿಸಿ ಪದಾಧಿಕಾರಿಗಳ ನೇಮಕದಲ್ಲೂ ಈಗ ಅನುಸರಿಸಿದಂತೆಯೇ ಹಿರಿಯರನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು. ರಾಜ್ಯಾದ್ಯಂತ ಪ್ರವಾಸ ಮಾಡುವ ಮೂಲಕ ದಲಿತರ ಮನೆಗೆ ಭೇಟಿ ನೀಡುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ಮುಖಂಡರು ದಲಿತರ ಒಗ್ಗಟ್ಟು ಒಡೆಯುವ ಕುತಂತ್ರ ನಡೆಸಿದ್ದಾರೆ.
ದೇಶವನ್ನು ಒಡೆದು ಆಳುವ ರಾಜಕೀಯ ನಡೆಸಿ ಇದೀಗ ರಾಜ್ಯದ ದಲಿತರ ಮನೆಗಳಿಗೆ ಭೇಟಿ ನೀಡುವ ಮೂಲಕ ಅವರಲ್ಲಿ ಬಿರುಕು ತಂದಿಡುವ ಕೆಲಸ ಮಾಡುತ್ತಿದ್ದಾರೆ. ಇದೊಂದು ನಾಟಕೀಯ ತಂತ್ರ. ಆದರೆ, ದಲಿತರ ಸಮುದಾಯದಲ್ಲಿ ಪ್ರಜ್ಞಾವಂತ ಜನರಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ದಲಿತರ ಮತಗಳನ್ನು ಪಡೆಯುವ ಹುನ್ನಾರ ನಡೆಸಿದ ಬಿಜೆಪಿ ಮುಖಂಡರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ದಲಿತ ವಿರೋಧಿ ಬಿಜೆಪಿ: ಚುನಾವಣೆ ಸಂದರ್ಭದಲ್ಲಿ ಮಾತ್ರ ದಲಿತರನ್ನು ನೆನೆಯುವ ಬಿಜೆಪಿ ನಾಯಕರು ದಲಿತರ ಮನೆಯಲ್ಲಿ ಊಟ-ಉಪಾಹಾರ ಮಾಡುವ ಮೂಲಕ ಗಿಮಿಕ್ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರು ಎಷ್ಟೆ ಗಿಮಿಕ್ ಮಾಡಿದರೂ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ತಿಳಿಸಿದರು.
ದೇಶದಲ್ಲಿ ಜನರು ಒಂದಾಗಿ ಬದುಕಲು ಬಿಜೆಪಿ ಯಾವತ್ತೂ ಬಿಟ್ಟಿಲ್ಲ. ಮೊದಲಿನಿಂದಲೂ ಎಲ್ಲ ಮೀಸಲಾತಿಗಳನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಎಂದಿಗೂ ಬಿಜೆಪಿಗೆ ಸಾಮಾಜಿಕ ಬದ್ಧತೆಯಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಎಲ್ಲ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೇಶವನ್ನು ಅಭಿವೃದ್ಧಿಯತ್ತ ತಂದಿದೆ ಎಂದರು.