Advertisement

ರಾಜಕೀಯ ಲಾಭಕ್ಕಾಗಿ ದೇಶದ ಇತಿಹಾಸ ತಿರುಚಲು ಬಿಜೆಪಿಯಿಂದ ಪ್ರಯತ್ನ: ಡಿಕೆ ಶಿವಕುಮಾರ್

04:39 PM Jul 28, 2020 | keerthan |

ಬೆಂಗಳೂರು: ಟಿಪ್ಪು ಸುಲ್ತಾನ್ ವಿಚಾರ ಯಾವುದೇ ಒಂದು ಜಾತಿ, ವರ್ಗಕ್ಕೆ ಸೇರಿದಲ್ಲ. ಈ ದೇಶದ ಇತಿಹಾಸದ ಭಾಗ. ಬಿಜೆಪಿ ಸರ್ಕಾರ ತಮ್ಮ ರಾಜಕೀಯ ಲಾಭಕ್ಕಾಗಿ ಇತಿಹಾಸವನ್ನೇ ತಿರುಚಲು ಪ್ರಯತ್ನಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟೀಕಿಸಿದ್ದಾರೆ.

Advertisement

ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಪಠ್ಯದಿಂದ ಟಿಪ್ಪು ಸುಲ್ತಾನ್ ಪಾಠಗಳನ್ನು ಕೈಬಿಡುವ ಬಗ್ಗೆ ರಾಜ್ಯ ಸರ್ಕಾರದ ಪ್ರಸ್ತಾವನೆ ವಿಚಾರವಾಗಿ ಮಾಧ್ಯಮ ಸಿಬ್ಬಂದಿಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡುವುದು ಬಿಡುವುದು ಆ ಸರ್ಕಾರಕ್ಕೆ ಬಿಟ್ಟ ವಿಚಾರ. ಟಿಪ್ಪು, ಹೈದರಾಲಿ ಅವರು ನಮ್ಮ ಇತಿಹಾಸದ ಭಾಗ. ಈ ದೇಶದ ರಾಷ್ಟ್ರಪತಿ ಕೋವಿಂದ್ ಅವರು ವಿಧಾನಸೌಧಕ್ಕೆ ಬಂದು ಜಂಟಿ ಅಧಿವೇಶನದಲ್ಲಿ ಟಿಪ್ಪು ಇತಿಹಾಸ, ಚರಿತ್ರೆ, ದೇಶಭಕ್ತಿ ಬಗ್ಗೆ ಹಾಡಿ ಹೊಗಳಿ ಹೋಗಿದ್ದಾರೆ. ಇವತ್ತು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಅಂತಾ ಇತಿಹಾಸ ಬದಲಿಸಲು ಹೊರಟಿರುವುದು ಹಾಗೂ ಸಂವಿಧಾನವನ್ನು ತಿರುಚಿ ಬರೆಯಲು ಪ್ರಯತ್ನ ನಡೆಯುತ್ತಿರುವುದು ಖಂಡನೀಯ ಎಂದರು.

ಜನರನ್ನು ದಾರಿ ತಪ್ಪಿಸಲು ಸರ್ಕಾರಕ್ಕೆ ನಾವು ಬಿಡುವುದಿಲ್ಲ. ಇದು ಕಾಂಗ್ರೆಸ್ ಪಕ್ಷದ ನಿಲುವು. ಇದರ ಸಾಧಕ ಬಾಧಕ ಬಗ್ಗೆ ತಜ್ಞರಿಂದ ಅಧ್ಯಯನ ನಡೆಸುತ್ತೇವೆ. ಇದು ಒಂದು ವರ್ಗ, ಜಾತಿಗೆ ಸೀಮಿತವಾದುದಲ್ಲ. ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾದುದಲ್ಲ. ಇದು ದೇಶದ ಚರಿತ್ರೆ ವಿಚಾರ. ಜಗತ್ತಿನ ಹಲವು ರಾಷ್ಟ್ರಗಳು ಭಾರತದ ಸಂವಿಧಾನವನ್ನು ಪ್ರಶಂಸೆ ಮಾಡಿ ತಾವು ಅಳವಡಿಸಿಕೊಳ್ಳಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದವು. ಆದರೆ ಬಿಜೆಪಿ ಇದನ್ನು ಮೊಟಕು ಮಾಡಲು ಪ್ರಯತ್ನಿಸುತ್ತಿದೆ ಎಂದು ಡಿಕೆಶಿ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next