Advertisement

ಕೆಪಿಸಿಸಿ ಗಾದಿಗೆ ದೆಹಲಿಯಲ್ಲಿಂದು ಮಹತ್ವದ ಸಭೆ

11:19 AM May 29, 2017 | Team Udayavani |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಗಾದಿಗೆ ಹೊಸ ಸಾರಥಿಯಾ? ಅಥವಾ ಹಾಲಿ ಅಧ್ಯಕ್ಷರೇ ಮುಂದುವರಿಯುತ್ತಾರಾ ಎಂಬ
ಬಗ್ಗೆ ಸೋಮವಾರ ಬಹುತೇಕ ಸ್ಪಷ್ಟತೆ ದೊರೆಯಲಿದೆ.

Advertisement

ಹೈಕಮಾಂಡ್‌ ಮೂಲಗಳ ಪ್ರಕಾರ, ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕವಾಗಿದ್ದೇ ಆದರೆ ಡಿ.ಕೆ.ಶಿವಕುಮಾರ್‌ ಅಥವಾ ಎಂ.ಬಿ. ಪಾಟೀಲ್‌ಗೆ ಅದೃಷ್ಟ ಖುಲಾಯಿಸುವ ಸಾಧ್ಯತೆ ಹೆಚ್ಚು. ಹಿರಿಯರು ಬೇಕು ಎಂದಾದರೆ ಮಾತ್ರ ಎಸ್‌.ಆರ್‌. ಪಾಟೀಲ್‌ ರೇಸ್‌ಗೆ ಬರಬಹುದು. ಪೈಪೋಟಿ ತೀವ್ರಗೊಂಡರೆ ಹೊಸ ಸಮಸ್ಯೆ ಮೈ ಮೇಲೆ ಎಳೆದುಕೊಳ್ಳುವುದು ಬೇಡವೆಂದು ಡಾ.ಜಿ.ಪರಮೇಶ್ವರ್‌ ಅವರೇ ಮುಂದುವರಿಯಬಹುದು.

ರಾಜ್ಯದಲ್ಲಿ ನಾಲ್ಕು ದಿನ ವಾಸ್ತವ್ಯ ಹೂಡಿ ಎಲ್ಲ ನಾಯಕರ ಅಭಿಪ್ರಾಯ, ಸಲಹೆ- ಸೂಚನೆ ಪಡೆದು ದೆಹಲಿಗೆ ತೆರಳಿರುವ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ನೀಡಿರುವ ವರದಿ ಆಧಾರದ ಮೇಲೆ ಕೆಪಿಸಿಸಿ ವಿಚಾರದಲ್ಲಿ ಹೈಕಮಾಂಡ್‌ ತೀರ್ಮಾನ ಕೈಗೊಳ್ಳಲಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು, ಅವರ ಸಾಮರ್ಥ್ಯ, ಪಕ್ಷದ ನಾಯಕರಿಗೆ ಅವರ   ಬಗ್ಗೆ ಇರುವ ಅಭಿಪ್ರಾಯ, ಹಾಲಿ ಅಧ್ಯಕ್ಷರ ಕಾರ್ಯವೈಖರಿ, ಅವರನ್ನೇ ಮುಂದುವರಿಸಿದರೆ ಆಗುವ ಲಾಭ-ನಷ್ಟಎಲ್ಲದರ ಬಗ್ಗೆ ವೇಣುಗೋಪಾಲ್‌ ಹೈಕಮಾಂಡ್‌ಗೆ ಈಗಾಗಲೇ ವರದಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಜತೆಗೆ ಲೋಕಸಭೆ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಅಭಿಪ್ರಾಯ ಮತ್ತು ಸಲಹೆ ಪ್ರಮುಖವಾಗಿ ಪರಿಗಣನೆಯಾಗಬೇಕು. ಇಬ್ಬರಿಗೂ ಒಪ್ಪುವ ಸರ್ವಸಮ್ಮತ ಅಭ್ಯರ್ಥಿ ಕೆಪಿಸಿಸಿ ಅಧ್ಯಕ್ಷರಾಗಿರಬೇಕೆಂಬುದು ಹೈಕ ಮಾಂಡ್‌ ನಿಲುವು ಎಂದು ತಿಳಿದು ಬಂದಿದೆ.

Advertisement

ಕೆಪಿಸಿಸಿಗೆ ಹೊಸ ಅಧ್ಯಕ್ಷರು ನೇಮಕವಾದರೂ ಹಾಲಿ ಅಧ್ಯಕ್ಷರೇ ಮುಂದುವರಿದರೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕರ್ನಾಟಕ ದಲ್ಲಿ ಪಕ್ಷದ ವಿಚಾರದಲ್ಲಿ ಹೆಚ್ಚಿನ ಹೊಣೆಗಾರಿಕೆ ಎಐಸಿಸಿ ನೀಡಲಿದೆ ಎಂದು ಹೇಳಲಾಗಿದೆ.

ಮುಂದಿನ ವರ್ಷ ವಿಧಾನಸಭೆ ಚುನಾವಣೆ ಇರುವುದರಿಂದ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಲೇಬೇಕೆಂಬ ವಾದ ಸಿದ್ದರಾಮಯ್ಯ ಅವರದು. ಡಾ.ಜಿ.ಪರಮೇಶ್ವರ್‌ ಮುಂದುವರಿಸಬಹುದು, ಬದಲಾವಣೆ ಮಾಡುವುದೇ ಆದರೆ ವರ್ಚಸ್ವಿ ಹಾಗೂ ಎಲ್ಲರನ್ನೂಒಟ್ಟಿಗೆ ಕೊಂಡೊಯ್ಯುವ ಸಾಮರ್ಥ್ಯ ಇರುವವರನ್ನು ನೇಮಿಸಬೇಕೆಂಬ ಅಭಿಪ್ರಾಯ ಮಲ್ಲಿಕಾರ್ಜುನ ಖರ್ಗೆ ಅವರದು ಎಂದು ಹೇಳಲಾಗಿದೆ.

ಕೊನೇ ಕ್ಷಣದ ಲಾಬಿ: ಈ ಮಧ್ಯೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೊನೇ ಕ್ಷಣದ ಕಸರತ್ತು, ಲಾಬಿ ತೀವ್ರಗೊಂಡಿದ್ದು,
ಆಕಾಂಕ್ಷಿಗಳು ಸಿಎಂ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಒತ್ತಡ ಹೇರಿದ್ದಾರೆ. ಅಧ್ಯಕ್ಷ ಆಕಾಂಕ್ಷಿ ಡಿ.ಕೆ. ಶಿವಕುಮಾರ್‌ ಭಾನುವಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಅಲ್ಲಿಂದ ಬಂದು ಸಿಎಂ ಸಿದ್ದರಾಮಯ್ಯ ಜತೆಯೂ ಚರ್ಚಿಸಿದರು. ಮತ್ತೂಬ್ಬ ಆಕಾಂಕ್ಷಿ ಎಂ.ಬಿ.ಪಾಟೀಲ್‌ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಸಮಾಲೋಚನೆ ನಡೆಸಿದರು. ಡಿ.ಕೆ. ಶಿವಕುಮಾರ್‌ ಹಾಗೂ ಎಂ.ಬಿ.ಪಾಟೀಲ್‌ ಮುಖ್ಯಮಂತ್ರಿಯವರ ಜತೆಯೇ ದೆಹಲಿಗೆ ತೆರಳಿದ್ದು ವಿಶೇಷ.

ಸಿಎಂ ದೆಹಲಿಗೆ
ಹೈಕಮಾಂಡ್‌ ಬುಲಾವ್‌ ಮೇರೆಗೆ ಸಿಎಂ ಸಿದ್ದರಾಮಯ್ಯ ಭಾನುವಾರ ಸಂಜೆಯೇ ದೆಹಲಿಗೆ ತೆರಳಿದ್ದು, ಸೋಮವಾರ ಬೆಳಗ್ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಯಲಿದೆ. ರಾಜ್ಯ ಉಸ್ತುವಾರಿ ವೇಣು ಗೋಪಾಲ್‌, ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಪಾಲ್ಗೊಳ್ಳಲಿ ದ್ದಾರೆ. ಆಕಾಂಕ್ಷಿಗಳಾದ ಡಿ.ಕೆ. ಶಿವಕುಮಾರ್‌, ಎಂ.ಬಿ.ಪಾಟೀಲ್‌, ಎಸ್‌.ಆರ್‌. ಪಾಟೀಲ್‌ ಹಾಗೂ ಸಚಿವರಾದ ಕೆ.ಜೆ.ಜಾರ್ಜ್‌, ರೋಷನ್‌ಬೇಗ್‌ ಸೇರಿ ಹಲವು ಸಚಿವರು ದೆಹಲಿ ತಲುಪಿದ್ದಾರೆ.

ಖರ್ಗೆ ಹೆಸರು ಚಾಲ್ತಿ
ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಭೇಟಿ ಸಂದರ್ಭದಲ್ಲಿ ಕೆಪಿಸಿಸಿಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೇಮಿಸುವುದು ಸೂಕ್ತ ಎಂಬ ಅಭಿಪ್ರಾಯವೂ ಕೇಳಿ ಬಂದಿತು. ಖರ್ಗೆ ಅವರನ್ನು ರಾಜ್ಯಕ್ಕೆ ಕಳುಹಿಸಿದರೆ ಪಕ್ಷಕ್ಕೆ ಅನುಕೂಲವಾಗುತ್ತದೆಂದು ಶಾಸಕರು,ಮುಖಂಡರು ತಿಳಿಸಿದ್ದಾರೆ. ಆದರೆ, ಲೋಕಸಭೆ ಸಂಸದೀಯ ಪಕ್ಷದ ನಾಯಕರು ಹಾಗೂ ಪಕ್ಷದಲ್ಲಿ ಅತ್ಯಂತ ಹಿರಿಯರಾಗಿರುವ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದರೆ ಹಿಂಬಡ್ತಿ ನೀಡಿದಂತಾಗುವುದಿಲ್ಲವೇ ಎಂಬ ಪ್ರಶ್ನೆಯೂ ಇದೆ. ಹೀಗಾಗಿ, ಹೈಕಮಾಂಡ್‌ ಎಐಸಿಸಿ ಮಟ್ಟದಲ್ಲಿ ಖರ್ಗೆ ಅವರಿಗೆ ಹುದ್ದೆ ನೀಡಿ ಕರ್ನಾಟಕದ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಹೊಣೆಗಾರಿಕೆ ನೀಡಬಹುದೆಂದು ಹೇಳಲಾಗಿದೆ. ರಾಹುಲ್‌ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಸ್ಪಷ್ಟವಾಗಲಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಂಬಂಧಿಸಿದಂತೆ ಸೋಮವಾರ ಹೈಕಮಾಂಡ್‌ ಸಭೆ ಕರೆದಿದೆ. ಹೈಕಮಾಂಡ್‌ ನಿರ್ಧಾರವೇ
ಅಂತಿಮ, ಎಲ್ಲರೂ ಆ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ.

–  ಮಲ್ಲಿಕಾರ್ಜುನ ಖರ್ಗೆ

Advertisement

Udayavani is now on Telegram. Click here to join our channel and stay updated with the latest news.

Next