ಶಿವಮೊಗ್ಗ: ಪಿಎಸ್‌ಐ ನೇಮಕದಲ್ಲಿ ನಡೆದಿರುವ ಭಾರೀ ಭ್ರಷ್ಟಾಚಾರವನ್ನು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಒ. ಶಿವಕುಮಾರ್ ಒತ್ತಾಯಿಸಿದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ಬಂದ ಮೇಲೆ ಭ್ರಷ್ಟಾಚಾರ ಎಲ್ಲ ರಂಗಗಳಲ್ಲಿಯೂ ಹಬ್ಬಿದೆ. ಅದರಲ್ಲೂ ಸರ್ಕಾರಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವಾಗ ಅಕ್ರಮ ಮತ್ತಷ್ಟು ಹೆಚ್ಚಾಗಿದೆ. ಎಲ್ಲ ನೇಮಕಾತಿಗಳಲ್ಲೂ ಭ್ರಷ್ಟಾಚಾರ ಮಿತಿಮೀರಿದೆ. ಪಿಎಸ್‌ಐ ನೇಮಕಾತಿಗೆ ಸಂಬಂಧಿಸಿದಂತೆ ಈ ಅಕ್ರಮ ಹೊರಬಿದ್ದಿದ್ದು, ಸರ್ಕಾರ ತನಿಖೆಯ ದಿಕ್ಕುತಪ್ಪಿಸುವ ಹಂತದಲ್ಲಿದೆ. ಸಿಒಡಿಯ ಬಗ್ಗೆ ನಮಗೆ ವಿಶ್ವಾಸವಿದೆ. ಆದರೆ, ರಾಜಕಾರಣಿಗಳ ಕಪಿಮುಷ್ಠಿಗೆ ಸಿಕ್ಕು ತನಿಖೆ ಕೂಡ ಹಾದಿತಪ್ಪಲಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಪ್ರಶ್ನೆಪತ್ರಿಕೆ, ಓಎಂಆರ್ ಶೀಟ್‌ಗಳ ಮೌಲ್ಯಮಾಪನ, ಪರೀಕ್ಷಾ ಕೇಂದ್ರಗಳು, ಪರೀಕ್ಷಾ ಕೇಂದ್ರದಲ್ಲಿದ್ದ ಮೇಲ್ವಿಚಾರಕರು, ಪ್ರಶ್ನೆ ಪತ್ರಿಕೆಗಳ ಸಾಗಣೆ ಮಾಡಿದವರು, ಹೀಗೆ ಎಲ್ಲ ಕೋನಗಳಲ್ಲಿಯೂ ತನಿಖೆ ಆಗಬೇಕಾಗಿದೆ. ಈಗಾಗಲೇ ಹಲವರು ನೇಮಕಾತಿಗಾಗಿ ಹಣ ಕೊಟ್ಟಿರುವ ಬಗ್ಗೆ ಒಪ್ಪಿಕೊಂಡಿದ್ದರೂ ಕೂಡ ಅವರನ್ನು ಠಾಣೆಗೆ ಕರೆಸಿ ವಾಪಸ್ ಬಿಟ್ಟಿದ್ದಾರೆ. ಸುಮಾರು 40 ಕೋಟಿಗೂ ಹೆಚ್ಚು ಮೊತ್ತದ ಹಗರಣ ಪಿಎಸ್‌ಐ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎಂದು ದೂರಿದರು.
ಕಾಟಾಚಾರದ ತನಿಖೆ ಕೈಬಿಡಬೇಕು. ಇದರಿಂದ ಪ್ರತಿಭಾವಂತರಿಗೆ ತೊಂದರೆಯಾಗುತ್ತದೆ. ಕೆಲವರು ಮಾಡುವ ತಪ್ಪಿಗೆ ಹಲವರು ಶಿಕ್ಷೆ ಪಡುವಂತಾಗುತ್ತದೆ. ನೇಮಕಾತಿಗಳು ಈ ರೀತಿಯ ಭ್ರಷ್ಟಾಚಾರಕ್ಕೆ ತುತ್ತಾದರೆ ಜನರು ಹೇಗೆ ನಂಬುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಡಿವೈಎಸ್‌ಪಿ ಮಂಜಪ್ಪ, ನಿವೃತ್ತ ವೃತ್ತ ನಿರೀಕ್ಷಕ ಗಣೇಶ್, ನಿವೃತ್ತ ಡಿಡಿಪಿಐ ಎನ್. ಎಸ್. ಕುಮಾರ್ ಇದ್ದರು.