ತಿರುವನಂತಪುರ: ಕಲ್ಲಿಕೋಟೆಯಲ್ಲಿ ನಡೆಯುತ್ತಿರುವ ಕೇರಳ ಯುವಜನೋತ್ಸವದಲ್ಲಿ ಮಾಂಸಾಹಾರ ಭಕ್ಷ್ಯಗಳನ್ನು ಸೇರಿಸಬೇಕೆ ಅಥವಾ ಬೇಡವೇ? ಎಂಬ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ.
ಕಳೆದ ಹಲವು ದಶಕಗಳಿಂದ ಈ ಉತ್ಸವದಲ್ಲಿ ಭಾಗವಹಿಸುವವರಿಗೆ ತರಹೇವಾರಿ ಸಸ್ಯಾಹಾರಿ ಭಕ್ಷ್ಯಗಳನ್ನು ಉಣಬಡಿಸಲಾಗುತ್ತಿದೆ. ಈಗ ಮಾಂಸಾಹಾರ ಭಕ್ಷ್ಯಗಳನ್ನು ಕೂಡ ಮೆನುವಿನಲ್ಲಿ ಸೇರಿಸಬೇಕು ಎಂಬ ಕೂಗು ಎದ್ದಿದೆ. ಈ ಕುರಿತು ಪರ-ವಿರೋಧದ ಚರ್ಚೆ ನಡೆಯುತ್ತಿದೆ.
“ಕೇವಲ ಸಸ್ಯಹಾರದ ಆಹಾರ ವಿತರಿಸುವ ಮೂಲಕ ಅಡುಗೆಯಲ್ಲಿ ಬ್ರಾಹ್ಮಣ್ಯ ಪ್ರಾಬಲ್ಯ ಮೆರೆಯಲಾಗುತ್ತಿದೆ’ ಎಂದು ಕೆಲವರು ಟೀಕಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಮತ್ತೊಬ್ಬರು, “ಉತ್ಸವಗಳ ಅಡಿಗೆ ಮನೆಗಳಲ್ಲಿ ಬ್ರಾಹ್ಮಣರ ಉಪಸ್ಥಿತಿಯು ಬ್ರಾಹ್ಮಣ್ಯದ ಪಾದದಲ್ಲಿ ನವೋದಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಶರಣಾಗತಿಯ ಸ್ಮರಣಾರ್ಥವಾಗಿದೆ,’ ಎಂದು ದೂರಿದ್ದಾರೆ.
ಮತ್ತೊಂದೆಡೆ, “ಆಹಾರದಲ್ಲಿ ಜಾತಿಯನ್ನು ತರುವ ಮೂಲಕ ಸಮಾಜವನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ. ಇದರ ಹಿಂದೆ ಪಟ್ಟಭದ್ರರ ಕೈವಾಡವಿದೆ,’ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. “ಸರ್ಕಾರದಿಂದ ಮಾಡುವ ಉತ್ಸವಗಳಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ಎರಡೂ ಭಕ್ಷ್ಯಗಳನ್ನು ಬಡಿಸಬೇಕು,’ ಎಂದು ಕೆಲವರು ಒತ್ತಾಯಿಸಿದ್ದಾರೆ.
“ನೂರಾರು ಜನರು ಸೇರುವ ಸ್ಥಳದಲ್ಲಿ ಸಸ್ಯಹಾರಿ ಪದಾರ್ಥಗಳನ್ನು ಬಡಿಸುವುದೇ ಸೂಕ್ತ,’ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.ಈ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಕೇರಳ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ, “ಇದೊಂದು ಅನಗತ್ಯ ಚರ್ಚೆಯಾಗಿದೆ,’ ಎಂದು ಹೇಳಿದ್ದಾರೆ.