Advertisement

ಇದು ವರ್ಣರಂಜಿತ ಬಣ್ಣದ ದಪ್ಪ ನೀರಿನ ಉಪ್ಪಿನ  ಸರೋವರ!

05:01 PM Nov 09, 2018 | Sharanya Alva |

ಉಪ್ಪು ಬೆರೆತ  ಸರೋವರದ ಈ ನೀರಿನ ಸ್ನಾನದಿಂದ ಹಲವು ರೋಗಗಳು ಗುಣವಾಗುತ್ತವೆಯಾದರೂ ಸರಿಯಾದ ಸಾರಿಗೆ ಸಂಪರ್ಕವಿಲ್ಲದ ಕಾರಣ ಪೆನಿನ್ಸುಲಾದ ಕಪ್ಪು ಕಡಲಿನ ಸಮೀಪವಿರುವ ಸರೋವರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.

Advertisement

ಅದೊಂದು ಬೃಹದಾಕಾರದ ಸರೋವರ. ಹಾಗೆಂದು ನೀರು ಕುಡಿದು ದಣಿವಾರಿಸಿಕೊಳ್ಳಲು ಹೋದರೆ ದಪ್ಪವಾದ ಉಪ್ಪು ನೀರು ಬಾಯಿಗೆ ಹೋಗಿ ನಾಲಗೆ ದಪ್ಪವಾಗುತ್ತದೆ. ಇದರ ನೀರು ಕಡು ಬೇಸಿಗೆಯಲ್ಲಿ ರಕ್ತದಂತೆ ಕೆಂಪಗಾದರೆ, ವಸಂತಕಾಲದಲ್ಲಿ ಗುಲಾಬಿ ಬಣ್ಣದಿಂದ ಆಕರ್ಷಿಸುತ್ತದೆ. ನಿಸರ್ಗ ಕುಂಚ ಹಿಡಿದು ಬಣ್ಣ ಬಳಿದಂತೆ ಕಾಣಿಸುವ ವಿಲಕ್ಷಣ ಸರೋವರ ಕ್ರೈಮಿಯಾದ ಕರ್ಚ್ ಪೆನಿನ್ಸುಲಾದ ಕಪ್ಪು ಕಡಲಿನ ಕರಾವಳಿಯಲ್ಲಿ ಕಂಡು ಬರುತ್ತವೆ. ನಾಲ್ಕು ಕಿಲೋಮೀಟರ್ ಉದ್ದವಾಗಿ ಐನೂರು ಹೆಕ್ಟೇರ್ ಪ್ರದೇಶವನ್ನು ಆವರಿಸಿರುವ ಈ ಕೊಯಾಶ್ಸ್ಕೊಯ್ ಸರೋವರದ ಅಗಲ ಎರಡು ಕಿಲೋಮೀಟರ್. ಆದರೆ ಗರಿಷ್ಟ ಆಳವಿರುವುದು ಕೇವಲ ಒಂದು ಮೀಟರ್ ಮಾತ್ರ!

ವರ್ಣರಂಜಿತ ಸರೋವರ

ಸರೋವರ ತಲುಪುವ ದಾರಿ ಅಷ್ಟೊಂದು ಸಲೀಸಲ್ಲ. ಕರ್ಚ್ ನಿಂದ 35 ಕಿಲೋಮೀಟರ್ ದೂರದಲ್ಲಿರುವ ಮಾರೆವ್ಹಾ ಎಂಬಲ್ಲಿಗೆ ಹೋಗಿ ಕಾಲ್ನಡಿಗೆಯಲ್ಲಿ ಯಕೊವೆನ್ಕೋವೊ  ಗ್ರಾಮವನ್ನು ಸೇರಬೇಕು. ಮತ್ತೆ ಕರಾವಳಿಯುದ್ದಕ್ಕೂ ಐದು ಕಿಲೋಮೀಟರ್ ನಡಿಗೆಯಲ್ಲಿ ಕ್ರಮಿಸಿದಾಗ ಬಹು ದೂರದಿಂದಲೇ ವರ್ಣರಂಜಿತವಾಗಿ ಗಮನ ಸೆಳೆಯುವ ಕೊಯಾಶ್ಸ್ಕೊಯ್ ಸರೋವರವನ್ನು ತಲುಪಬಹುದು.

Advertisement

ಒಂದು ಕಾಲದಲ್ಲಿ ಸರೋವರವಿರುವ ಭಾಗ ಕಪ್ಪು ಸಮುದ್ರದ ಭಾಗವಾಗಿತ್ತು. ಲಕ್ಷಾಂತರ ವರ್ಷಗಳ ಪೂರ್ವದಲ್ಲಿ ಸಮುದ್ರವು ಹಿಂದೆ ಸರಿಯುವ ಪ್ರಕ್ರಿಯೆ ಆರಂಭವಾಗಿ ಅದು ಮೂರು ಕಿಲೋಮೀಟರ್ ದೂರ ಹೋಯಿತು. ಹೀಗಾಗಿ ಇಲ್ಲಿ ನಿಂತ ನೀರಿನಲ್ಲಿ ಉಪ್ಪಿನ ಅಗಣಿತ ಕಣಜವೇ ಉಳಿದುಕೊಂಡಿತು. ಒಂದು ಲೀಟರ್ ನೀರಿನಲ್ಲಿ ಉಪ್ಪಿನ ರುಚಿಯಿರುವ ಸೋಡಿಯಮ್ ಕ್ಲೋರೈಡ್ ಅರ್ಧ ಕಿಲೋ ಪ್ರಮಾಣದಲ್ಲಿದೆ ಎಂದು ಪ್ರಯೋಗಗಳು ಹೇಳುತ್ತವೆ. ನೀರಿನಲ್ಲಿ ಬೀಟಾ ಕೊರೊಟಿನ್ ಅಂಶವಿರುವ ಕಾರಣ ಅದು ಅಚ್ಚ ಗುಲಾಬಿ ಮತ್ತು ರಕ್ತ ವರ್ಣದಿಂದ ಹೊಳೆಯುತ್ತದೆ ಎಂಬುದು ತಜ್ಞರ ಅಭಿಮತ.

 ಈ ಸರೋವರದ ದಡದಲ್ಲಿ ಸ್ವಲ್ಪ ಹೊತ್ತು ನಿಂತರೆ ಸಾಕು, ಕಡಲಿನೆಡೆಯಿಂದ ಬೀಸುವ ಗಾಳಿಯ ಮೂಲಕ ಉಪ್ಪಿನ ದಪ್ಪ ಕಣಗಳು ನಮ್ಮ ಮೈಯನ್ನು ಆವರಿಸುತ್ತವೆ. ಧರಿಸಿದ ಉಡುಪು ಉಪ್ಪಿನ ಪೊರೆಯಿಂದ ಮುಚ್ಚಿಕೊಳ್ಳುತ್ತದೆ. ಮೈಯ ತೆರೆದ ಭಾಗದ ತ್ವಚೆಯಲ್ಲಿ ಹೆಪ್ಪುಗಟ್ಟಿದ ಉಪ್ಪನ್ನು ಕಾಣಬಹುದು. ಬೀಸಿ ಬರುವ ಗಾಳಿ ಉಪ್ಪಿನ  ತೇವಾಂಶದಿಂದ ಕೂಡಿರುತ್ತದೆ. ನೀರು ಎಷ್ಟೇ ಉಪ್ಪಾಗಿದ್ದರೂ ಅದರಲ್ಲಿ ಹೇರಳವಾಗಿ ಸಿಗಡಿ ಮತ್ತು ಹಲವು ಜಾತಿಯ ಜಲಚರಗಳು ಬದುಕಿಗೊಂಡಿವೆ.ಇಂಥ   ನೀರಿನಲ್ಲಿ ಬೆಳೆಯಬಲ್ಲ ಪಾಚಿಯೂ ನೀರನ್ನು ಆವರಿಸಿಕೊಂಡು ಸೃಷ್ಟಿಗೆ ಪೂರಕವಾಗಿ ಬೆಳೆಯುತ್ತಿದೆ.

 ಬಿಸಿಲಿಗೆ ಪ್ರತಿ ಕ್ಷಣವೂ ಸರೋವರದ ನೀರು ಆವಿಯಾಗುತ್ತಲೇ ಇರುತ್ತದೆ. ಅಲ್ಲಲ್ಲಿ ಉಪ್ಪು ಗಟ್ಟಿಯಾಗಿ ಸ್ಫಟಿಕ ಶಿಲೆಯ ಬಂಡೆಗಳಂತೆ ಕಾಣಿಸಿಕೊಳ್ಳುತ್ತದೆ. ಉಪ್ಪಿಗೆ ನಾಸಿಕಾಗ್ರ ಕೆರಳಿಸುವ ಪರಿಮಳವೂ ಇದೆ. ಕನ್ನಡಿಯ ಹಾಗೆ ಪರಿಶದ್ಧವಾದ ಈ ಉಪ್ಪನ್ನು ಯಾವುದೇ ಬಳಕೆಗೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಕಾರಣ ಇಲ್ಲಿಗೆ ವಾಹನಗಳು ಬರಲು ಸುಗಮವಾದ ರಸ್ತೆಯಿಲ್ಲ. ಹೀಗಾಗಿ ಸರೋವರದ ನೀರಿನಲ್ಲಷ್ಟೇ ಅಲ್ಲ, ದಡದಲ್ಲಿಯೂ ಬಲು ದೂರದ ತನಕ ಉಪ್ಪಿನ ಎತ್ತೆತ್ತರವಾದ ಬಂಡೆಗಳನ್ನು ನೋಡಬಹುದು. ವಾಹನ ಸೌಲಭ್ಯ ಇಲ್ಲದ ಕಾರಣ ಸರೋವರ ವೀಕ್ಷಣೆಗೆ ಬರುವ ಪ್ರವಾಸಿಗಳ ಸಂಖ್ಯೆಯೂ ಬೆರಳೆಣಿಕೆಯಷ್ಟಿದೆ.

ಬೆರಗುಗೊಳಿಸುವ ವರ್ಣ ಚಿತ್ತಾರದ ಸರೋವರವನ್ನು 1988 ರಲ್ಲಿ ಸರಕಾರ ಸಂರಕ್ಷಿಸಬೇಕಾದ ನೈಸರ್ಗಿಕ ಚೋದ್ಯಗಳ ಪಟ್ಟಿಗೆ ಸೇರಿಸಿ ಅದರ ರಕ್ಷಣೆಯ ಬಗೆಗೆ ಕಾಳಜಿ ವಹಿಸಿದೆ. ಉಪ್ಪು ಬೆರೆತ ಇದರ ನೀರಿನ ಸ್ನಾನ ಹಲವು ವಿಧದ ರೋಗಗಳನ್ನು ಗುಣಪಡಿಸುತ್ತದೆಯೆಂಬ ನಂಬಿಕೆಯಿದೆ.

• ಶ್ಯಾಮ್ (ತರಂಗ ಸೆಪ್ಟಂಬರ್13ರ ಸಂಚಿಕೆಯಲ್ಲಿ ಪ್ರಕಟಿತವಾದದ್ದು)

Advertisement

Udayavani is now on Telegram. Click here to join our channel and stay updated with the latest news.

Next