ಬೆಂಗಳೂರು: ಕನ್ನಡದ ಜೊತೆಗೆ ತಮಿಳು, ತೆಲುಗು, ಹಿಂದಿ ಅಂತ ವಿವಿಧ ಭಾಷೆಯ ಚಿತ್ರರಂಗಗಳಲ್ಲಿ ಬ್ಯುಸಿ ಆಗಿರುವ ನಟಿ ಶ್ರದ್ದಾ ಶ್ರೀನಾಥ್. ಇದರಿಂದಾಗಿ ಶ್ರದ್ದಾ ಬೇರೆ ಬೇರೆ ಕಡೆಗಳಿಗೆ ವಿಮಾನ ಪ್ರಯಾಣ ಮಾಡುತ್ತಿರುತ್ತಾರೆ. ಆದರೆ ಇದನ್ನೇ ಗಮನದಲ್ಲಿಟ್ಟುಕೊಂಡು ಶ್ರದ್ಧಾ ಬಗ್ಗೆ ಇಲ್ಲ ಸಲ್ಲದ ವದಂತಿ, ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರಂತೆ.
ಹೌದು, ಕಳೆದ ಕೆಲ ದಿನಗಳಿಂದ, ‘ಕೋವಿಡ್ ಪೀಡಿತರು ಇದ್ದ ವಿಮಾನದಲ್ಲಿ ಶ್ರದ್ಧಾ ಪ್ರಯಾಣ ಮಾಡಿದ್ದರಿಂದ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ, ಅವರನ್ನು 14 ದಿನ ಹೋಮ್ ಕ್ವಾರಂಟೈನ್ ಮಾಡಿದ್ದಾರೆ’ ಎಂದೆಲ್ಲ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಇದೆಲ್ಲದಕ್ಕೂ ಶ್ರದ್ದಾ ಶ್ರೀನಾಥ್ ಖಡಕ್ ಆಗಿ ಉತ್ತರ ನೀಡಿದ್ದಾರೆ.
‘ನಾನು ಸಿನಿಮಾ ಕೆಲಸಗಳಿಗೆ ಮಾ. 12 ಮತ್ತು ಮಾ. 15ರಂದು ಹೈದರಾಬಾದ್ ಮತ್ತು ಚೆನ್ನೈಗೆ ತೆರಳಿದ್ದೆ. ಅಂದ ಹಾಗೆ, ನಾನು ಪ್ರಯಾಣ ಮಾಡಿದ ಯಾವುದೇ ವಿಮಾನದಲ್ಲೂ ಕೋವಿಡ್ ಪೀಡಿತರು ಇರಲಿಲ್ಲ. ಅಲ್ಲದೆ, ಕರ್ನಾಟಕದ ಯಾವುದೇ ಆರೋಗ್ಯ ಅಧಿಕಾರಿಗಳು ನಮ್ಮ ಮನೆಗೆ ಬಂದಿಲ್ಲ. ಜೊತೆಗೆ ನನಗೆ ಸೆಲ್ಪ್ ಐಸೋಲೇಷನ್ ಮಾಡುವಂತೆ ಅಧಿಕಾರಿಗಳು ಸೂಚಿಸಿಲ್ಲ’ ಎಂದಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಶ್ರದ್ದಾ, ತಮಗೆ ತಾವೇ ಐಸೋಲೇಷನ್ ಮಾಡಿಕೊಂಡಿದ್ದಾರೆ.
‘ನನ್ನ ಸಂಬಂಧಿ ವೈದ್ಯರೊಬ್ಬರ ಸಲಹೆ ಮೇರೆಗೆ ನಾನು ಸ್ವಯಂ ಐಸೋಲೇಟ್ ಆಗಿದ್ದೆ. ಮುನ್ನೆಚ್ಚರಿಕಾ ದೃಷ್ಟಿಯಿಂದ ಈ ರೀತಿ ಮಾಡಿದೆ. ದೇಶ ವಿದೇಶ ಪ್ರಯಾಣ ಮಾಡುವ ಯಾರೇ ಆಗಲಿ, ಈ ರೀತಿ ಮಾಡುವುದು ಸೂಕ್ತ. ಇದು ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ. ಮಾ. 29ಕ್ಕೆ ನನ್ನ ಐಸೋಲೇಷನ್ ಅವಧಿ ಮುಕ್ತಾಯಗೊಂಡಿದ್ದು, ಅಡುಗೆ ಮನೆಯಲ್ಲಿ ಅಮ್ಮನಿಗೆ ಸಹಾಯ ಮಾಡುವುದರಲ್ಲಿ ಬ್ಯುಸಿ ಆಗಿದ್ದೇನೆ. ಎಲ್ಲರೂ ಹುಷಾರಾಗಿರಿ. ವೈರಸ್ ಮತ್ತು ತಪ್ಪು ಮಾಹಿತಿಯನ್ನು ಹರಡದಿರಿ. ಎರಡೂ ಕೂಡ ಅಪಾಯಕಾರಿ’ ಎಂದಿದ್ದಾರೆ ಶ್ರದ್ಧಾ ಶ್ರೀನಾಥ್.
ಒಟ್ಟಾರೆ ಕಳೆದ ಕೆಲ ದಿನಗಳಿಂದ ಶ್ರದ್ದಾ ಶ್ರೀನಾಥ್ ಬಗ್ಗೆ ಹರಿದಾಡುತ್ತಿದ್ದ ಎಲ್ಲ ಅಂತೆ ಕಂತೆಗಳಿಗೂ ಇದೀಗ ಸ್ವತಃ ಶ್ರದ್ದಾ ಫುಲ್ ಸ್ಟಾಪ್ ಇಟ್ಟಿದ್ದಾರೆ.