Advertisement

ಸದ್ದಿಲ್ಲದೆ ದೇಹದಲ್ಲಿ ಮನೆ ಮಾಡುವ ಕೋವಿಡ್‌

09:35 AM Apr 18, 2020 | sudhir |

ಮಣಿಪಾಲ: ಕೋವಿಡ್‌-19 ವೈರಸ್‌ನ ಹಾವಳಿ ಶುರುವಾಗಿ ಐದು ತಿಂಗಳಾಗುತ್ತಾ ಬಂತು. ಕೋವಿಡ್‌ ವೈರಸ್‌ ಹೊಸದೇನಲ್ಲ. ಈ ಹಿಂದೆಯೂ ಇಂಥ ಹಲವು ವೈರಸ್‌ಗಳು ಮನುಕುಲವನ್ನು ಕಾಡಿವೆ. ಸಿವಿಯರ್‌ ಅಕ್ಯೂಟ್‌ ರೆಸ್ಪಿರೇಟರಿ ಸಿಂಡ್ರೋಮ್‌ ಅಥವಾ ಸಾರ್, ಮಿಡ್ಲ್ ಈಸ್ಟ್‌ ರೆಸ್ಪಿರೇಟರಿ ಸಿಂಡ್ರೋಮ್‌ ಅಥವಾ ಮೆರ್ ಈ ಪೈಕಿ ಕೆಲವು. ಆದರೆ ಕೋವಿಡ್‌-19ಕ್ಕೆ ಹೋಲಿಸಿದರೆ ಈ ವೈರಸ್‌ಗಳ ಕಾಟ ಸೀಮಿತವಾಗಿತ್ತು. ಕೆಲವು ವೈರಸ್‌ಗಳು ಕೆಲವು ಪ್ರದೇಶಗಳಿಗಷ್ಟೇ ಸೀಮಿತವಾಗಿದ್ದವು. ಆದರೆ ಕೋವಿಡ್‌ ಬರೀ ಐದು ತಿಂಗಳಲ್ಲಿ ಇಡೀ ಭೂಮಂಡಲವನ್ನೇ ಆವರಿಸಿ 1.30 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡು ಹಾಹಾಕಾರ ಎಬ್ಬಿಸಿದೆ. ಅನೇಕ ದೇಶಗಳು ಲಾಕ್‌ಡೌನ್‌ ಘೋಷಿಸಿ ಜನರನ್ನು ಮನೆಯೊಳಗೆ ಇರಿಸಿ ಕಾಪಾಡಲು ಪ್ರಯತ್ನಿಸುತ್ತಿವೆ.

Advertisement

ಇಷ್ಟಾಗಿಯೂ ವೈರಸ್‌ ಹರಡುವುದನ್ನು ತಡೆಯಲು ಸಂಪೂರ್ಣ ಸಾಧ್ಯವಾಗಿಲ್ಲ. ಎಲ್ಲವನ್ನೂ ಸಾಧಿಸಿದೆ ಎಂದು ಬೀಗುತ್ತಿದ್ದ ಮನುಷ್ಯ ಒಂದು ರಾಗಿಯ ಕಾಳನ್ನು 5000 ತುಣುಕುಗಳಾಗಿ ಕತ್ತರಿಸಿದಾಗ ಸಿಗುವ ಒಂದು ತುಣುಕಿನ ಗಾತ್ರದ ಜೀವಾಣುವಿನ ಎದುರು ಸೋತು ಕೈಚೆಲ್ಲಿ ಮಂಡಿಯೂರಿದ್ದಾನೆ. ಒಂದರ್ಥದಲ್ಲಿ ಕೋವಿಡ್‌ ವೈರಾಣು ಪ್ರಕೃತಿಯ ಮುಂದೆ ಮನುಷ್ಯನ ಮಿತಿ ಎಷ್ಟು ಎಂಬುದನ್ನೂ ತೋರಿಸಿಕೊಟ್ಟಿದೆ.

ಐದು ತಿಂಗಳ ಹಿಂದಿನ ತನಕ ವಿಜ್ಞಾನಕ್ಕೆ ಕೋವಿಡ್‌-19 ವೈರಸ್‌ ಬಗೆಗೆ ಏನೇನೂ ಗೊತ್ತಿರಲಿಲ್ಲ. ಆದರೆ ಈಗ ಅದರ ಬಗ್ಗೆ ನಡೆಯುತ್ತಿರುವ ಅಧ್ಯಯನಗಳು ಬೆರಗು ಹುಟ್ಟಿಸುವಷ್ಟಿವೆ. ಲಸಿಕೆ ಕಂಡು ಹಿಡಿಯುವ ಸಂಶೋಧನೆಗಳು, ವಿವಿಧ ಔಷಧ ಮತ್ತು ಚಿಕಿತ್ಸೆಗಳ ಪ್ರಯೋಗ ಇತ್ಯಾದಿಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ. ಅಂತೆಯೇ ಕೋವಿಡ್‌ -19ರ ಬಗ್ಗೆ ಮನುಕುಲ ಸಾಕಷ್ಟು ವಿಚಾರಗಳನ್ನೂ ಬರೀ ಐದು ತಿಂಗಳಲ್ಲಿ ತಿಳಿದುಕೊಂಡಿದೆ.

ಹೇಗೆ ಹರಡುತ್ತದೆ?
ಕೋವಿಡ್‌-19 ವೈರಾಣು ಒಂದು ಜೀವಿಯಿಂದ ಹರಡಲು ನೀರಿನ ಸೂಕ್ಷ್ಮ ಕಣಗಳು ಸಾಕು. ಕೆಮ್ಮುವಾಗ ಅಥವಾ ಸೀನುವಾಗ ಸಿಡಿಯುವ ಉಗುಳಿನ ಒಂದು ಕಣದಲ್ಲಿ ಸಾವಿರಾರು ಕೋವಿಡ್‌ ವೈರಾಣುಗಳಿರುವ ಸಾಧ್ಯತೆಯಿರುತ್ತದೆ. ಇಂಥ ಕಣಗಳಿರುವ ಗಾಳಿಯನ್ನು ಉಸಿರಾಡಿದಾಗ ವೈರಸ್‌ ದೇಹದೊಳಗೆ ಪ್ರವೇಶಿಸುತ್ತದೆ.

ನಯವಂಚಕ ವೈರಸ್‌
ಈ ವೈರಸ್‌ಗೆ ನಯವಂಚನೆಯ ಗುಣವಿದೆ. ಇದು ದೇಹದೊಳಗೆ ಪ್ರವೇಶಿಸಿದ ಬಳಿಕ 2-3 ವಾರಗಳ ತನಕ ತನ್ನ ಇರವನ್ನು ತೋರ್ಪಡಿಸುವುದೇ ಇಲ್ಲ. ಹೀಗಾಗಿ ಇದು ಹರಡುವುದನ್ನು ತಡೆಯುವ ಕಾರ್ಯ ಬಹಳ ಕಠಿನ.

Advertisement

ಸಾವು ಹೇಗೆ ಸಂಭವಿಸುತ್ತದೆ ?
ಕೋವಿಡ್‌-19 ಸೋಂಕಿತ ವ್ಯಕ್ತಿಗಳು ಅಷ್ಟು ಸುಲಭವಾಗಿ ಸಾವಿಗೆ ತುತ್ತಾಗುತ್ತಿರುವುದು ಹೇಗೆ? ಈ ಪ್ರಶ್ನೆಗೆ ಇನ್ನೂ ಸಮರ್ಪಕವಾದ ಉತ್ತರ ಸಿಕ್ಕಿಲ್ಲ. ಶ್ವಾಸಕೋಶದೊಳಕ್ಕೆ ಕೋವಿಡ್‌ ಪ್ರವೇಶಿಸಿದರೆ ಸಾವು ಬಹುತೇಕ ಖಚಿತ. ಕೆಲವು ಪ್ರಕರಣಗಳಲ್ಲಿ ರೋಗಿಗಳ ರೋಗ ಪ್ರತಿನಿರೋಧಕ ಜೀವ ಕೋಶಗಳ ಅತ್ಯುತ್ಸಾಹವೇ ಕೋವಿಡ್‌ ವೈರಾಣುವಿಗೆ ಶ್ವಾಸಕೋಶದೊಳಕ್ಕೆ ಆಹ್ವಾನ ನೀಡುವುದು’ ಉಂಟಂತೆ. ರೋಗನಿರೋಧಕ ಜೀವ ಕೋಶಗಳು ವೈರಾಣುವಿನ ವಿರುದ್ಧ ಹೋರಾಡಲೆಂದೇ ಅವುಗಳನ್ನು ಶ್ವಾಸಕೋಶಕ್ಕೆ ಆಹ್ವಾನಿಸುತ್ತವೆ. ಆದರೆ ಅನಂತರ ಹೋರಾಟದಲ್ಲಿ ಸೋತು ಹೋದರೆ ಪರಿಸ್ಥಿತಿ ಕೈಮೀರುತ್ತದೆ. ಹೆಚ್ಚೆಚ್ಚು ಜೀವಕೋಶಗಳು ಶ್ವಾಸಕೋಶದೊಳಕ್ಕೆ ನುಗ್ಗಿ ಬಂದಂತೆ ಅಲ್ಲಿ ಕೋಲಾಹಲ ಶುರುವಾಗುತ್ತದೆ. ಈ ಅವಸ್ಥೆಯನ್ನು ಸೈಟೋಕಿನ್‌ ಬಿರುಗಾಳಿ ಎನ್ನುತ್ತಾರೆ. ಗ್ರೀಕ್‌ ಭಾಷೆಯಲ್ಲಿ ಸೈಟೋ ಎಂದರೆ ಸೆಲ್‌ ಮತ್ತು ಕಿನೊ ಎಂದರೆ ಚಲನೆ. ಕೆಲವೇ ರೋಗಿಗಳಲ್ಲಿ ಮಾತ್ರ ಸೈಟೋಕಿನ್‌ ಪ್ರಕ್ರಿಯೆ ಏಕೆ ಉಂಟಾಗುತ್ತದೆ ಎನ್ನುವುದಕ್ಕೆ ಸಮರ್ಪಕವಾದ ಉತ್ತರ ಇನ್ನೂ ಸಿಕ್ಕಿಲ್ಲ.

78 ಲಸಿಕೆ ಶೋಧ ಸಂಶೋಧನೆ
ವಿವಿಧ ದೇಶಗಳಲ್ಲಿ ಕೋವಿಡ್‌-19 ವಿರುದ್ಧ ಲಸಿಕೆ ಶೋಧಿಸುವ 78 ಸಂಶೋಧನೆಗಳು ಏಕಕಾಲದಲ್ಲಿ ನಡೆಯುತ್ತಿವೆ. ಇದಲ್ಲದೆ ಇನ್ನೂ 37 ಸಂಶೋಧನೆಗಳು ಪ್ರಾಥಮಿಕ ಹಂತದಲ್ಲಿವೆ.

ಇನ್ನು ಕೆಲವೇ ತಿಂಗಳಲ್ಲಿ ಕೋವಿಡ್‌ಗೆ ಲಸಿಕೆಯೊಂದು ಪತ್ತೆಯಾಗುವ ಸಾಧ್ಯತೆ ಗೋಚರಿ ಸಿದೆ. ಆದರೆ ಮನುಷ್ಯರಿಗೆ ಈ ಲಸಿಕೆಯನ್ನು ನೀಡುವ ಮೊದಲು ಸಾಕಷ್ಟು ಪ್ರಯೋಗಗಳನ್ನು ನಡೆಸಬೇಕಿದೆೆ. ಏನಿದ್ದರೂ ವರ್ಷಾಂತ್ಯಕ್ಕಾಗುವಾಗ ಲಸಿಕೆ ಸಿಗಬಹುದು ಎಂಬ ನಿರೀಕ್ಷೆ ಮಾತ್ರ ಈಗ ಇದೆ. ಅಷ್ಟರ ತನಕ ಕೋವಿಡ್‌ ಉಪಟಳವನ್ನು ಸಹಿಸಿಕೊಳ್ಳಲೇ ಬೇಕಿದೆ.

ಎಲ್ಲಿಂದ ಬಂತು ಕೋವಿಡ್‌ ವೈರಾಣು?
ಈ ಒಂದು ಪ್ರಶ್ನೆಗೆ ಇನ್ನೂ ಖಚಿತವಾದ ಉತ್ತರ ಸಿಕ್ಕಿಲ್ಲ. ಆದರೆ ಕೋವಿಡ್‌ನ‌ ಮೂಲ ಬಾವಲಿ ಎನ್ನುವುದು ಬಹುತೇಕ ವಿಜ್ಞಾನಿಗಳು ಒಪ್ಪಿದ್ದಾರೆ. ಬಾವಲಿಗಳಲ್ಲಿ ವೈರಾಣು ಪ್ರತಿರೋಧ ಸಾಮರ್ಥ್ಯ ಹೆಚ್ಚು ಇರುತ್ತದೆ. ಹೀಗಾಗಿ ಅವುಗಳ ಮೇಲೆ ಕೋವಿಡ್‌-19 ದೊಡ್ಡ ಪರಿಣಾಮವನ್ನು ಬೀರಿಲ್ಲ. ಬಾವಲಿಗಳಿಂದ ಮನುಷ್ಯನಿಗೆ ನಿಕಟವಾಗಿರುವ ಇನ್ಯಾವುದೋ ಪ್ರಾಣಿಗೆ ಹರಡಿರುವ ಸಾಧ್ಯತೆಯಿದೆ. ಆದರೆ ಈ ಪ್ರಾಣಿ ಯಾವುದು ಎಂಬುದರ ಬಗ್ಗೆ ಒಮ್ಮತದ ಅಭಿಪ್ರಾಯವಿಲ್ಲ. ಚಿಪ್ಪುಹಂದಿಗಳಿಗೆ ಹರಡಿ ಅಲ್ಲಿಂದ ಮನುಷ್ಯನ ದೇಹ ಪ್ರವೇಶಿಸಿರಬೇಕೆಂಬ ತರ್ಕವೇ ಸದ್ಯಕ್ಕೆ ಹೆಚ್ಚು ಪ್ರಸ್ತುತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next