Advertisement

“ಕಲ್ಯಾಣ’ಗಳಿಗೆ ಮತ್ತೆ ಕಂಟಕವಾದ ಕೋವಿಡ್

06:35 PM Apr 20, 2021 | Team Udayavani |

ರಾಯಚೂರು: ಕೋವಿಡ್ ಸೋಂಕು ಮೊದಲ ಬಾರಿಯೂ ಮದುವೆ ಸೀಜನ್‌ ವೇಳೆಯೇ ಒಕ್ಕರಿಸಿ ಬಹುತೇಕ ಮದುವೆಗಳನ್ನು ರದ್ದುಗೊಳಿಸಿತ್ತು. ಈಗ ಎರಡನೇ ಅಲೆಯೂ ಹೇಳಿ ಕಳುಹಿಸಿದಂತೆ ಮದುವೆ ಸೀಜನ್‌ನಲ್ಲೇ ವ್ಯಾಪಕವಾಗಿ ಉಲ್ಬಣಿಸುವ ಮೂಲಕ ಜನರನ್ನು ಕಂಗೆಡುವಂತೆ ಮಾಡಿದೆ.

Advertisement

ಸೋಂಕಿನ ಪ್ರಮಾಣ ಎಲ್ಲೆಡೆ ಕಡಿಮೆ ಆಗಿದ್ದು, ಸಭೆ, ಸಮಾರಂಭಗಳು, ಸಮಾವೇಶಗಳು, ಜಾತ್ರೆಗಳು ಜೋರಾಗಿಯೇ ನಡೆದವು. ಹೀಗಾಗಿ ಸಾಕಷ್ಟು ಜನ ಮಕ್ಕಳ ಮದುವೆಯನ್ನು ಅದ್ಧೂರಿಯಾಗಿ ಮಾಡಲು ದೊಡ್ಡದೊಡ್ಡ ಕಲ್ಯಾಣ ಮಂಟಪಗಳನ್ನು ಬುಕ್‌ ಮಾಡಿಟ್ಟಿದ್ದಾರೆ. ಇನ್ನೇನು ಮದುವೆ ದಿನಗಳು ಶುರುವಾಗಲಿದೆ. ಆದರೆ, ಸರ್ಕಾರ ಮತ್ತೆ ಮದುವೆಗಳಿಗೆ ನಿರ್ಬಂಧ ಹೇರುವ ಮೂಲಕ ಜನರ ನಿರೀಕ್ಷೆಗಳಿಗೆ ತಣ್ಣೀರೆರೆಚಿದೆ.

ಕಳೆದ ವರ್ಷ ಕೂಡ ಲಾಕ್‌ಡೌನ್‌ ಕಾರಣಕ್ಕೆ ಸಾಕಷ್ಟು ಮದುವೆಗಳು ರದ್ದಾಗಿದ್ದವು. ಕಲ್ಯಾಣ ಮಂಟಪಗಳಿಗೆ ಮುಂಗಡ ಹಣ ನೀಡಿದ್ದರು. ಆದರೆ ಕಲ್ಯಾಣ ಮಂಟಪಗಳು ಸೀಮಿತ ಜನರಿಗೆ ಮಾತ್ರ ಅವಕಾಶ ನೀಡಿದ್ದವು. ಯಾವುದೇ ಕಾರಣಕ್ಕೂ ಹಣ ಹಿಂದಿರುಗಿಸಲ್ಲ ಎಂದು ತಿಳಿಸಿದ್ದವು. ಹೀಗಾಗಿ ಜನ ಸಾಕಷ್ಟು ಹಣ ಖರ್ಚು ಮಾಡಿದರೂ ಸರಳವಾಗಿ ಮದುವೆ ಮಾಡಿಕೊಳ್ಳುವಂತಾಗಿತ್ತು. ಈ ಬಾರಿಯೂ ಮತ್ತದೇ ಸನ್ನಿವೇಶ ಏರ್ಪಟ್ಟಿದೆ.

ಇನ್ನೇನು ಮದುವೆ ಕಾಲ ಶುರುವಾಗಿದೆ. ಈ ಕಾರಣಕ್ಕೆ ಬಹುತೇಕ ಎಲ್ಲ ಕಲ್ಯಾಣ ಮಂಟಪಗಳು ಮುಂಗಡ ಕಾಯ್ದಿರಿಸಲಾಗಿದೆ. ಅದರ ಜತೆಗೆ ಬಂಧು ಬಳಗದವರಿಗೆ ಆಮಂತ್ರಣ ಕೂಡ ಹಂಚಲಾಗಿದೆ. ಆದರೆ ಇಂಥ ವೇಳೆ ಸರ್ಕಾರ ಕೇವಲ 200 ಜನರಿಗೆ ಮಾತ್ರ ಅವಕಾಶ ನಿಗದಿ ಮಾಡಿದೆ. ಅಲ್ಲದೇ ಎಲ್ಲರಿಗೂ ಪಾಸ್‌ ಕಡ್ಡಾಯಗೊಳಿಸಿದ್ದರಿಂದ ಗೊಂದಲ ಏರ್ಪಟ್ಟಿದೆ. ಇದರಿಂದ ಜನ ಕಲ್ಯಾಣ ಮಂಟಪಗಳಿಗೆ ನೀಡಿದ ಮುಂಗಡ ಹಣ ವಾಪಸ್‌ ಕೇಳುತ್ತಿದ್ದಾರೆ.

ಸರಳ ವಿವಾಹಗಳಿಗೆ ಅನುಕೂಲ: ಕೋವಿಡ್ ನಿರ್ಬಂಧಗಳು ಮಧ್ಯಮ, ಬಡ ವರ್ಗದ ಜನರಿಗೆ ಅನುಕೂಲ ಎಂದರೆ ತಪ್ಪಾಗಲಿಕ್ಕಿಲ್ಲ. ತಮ್ಮ ಮನೆಗಳ ಮುಂದೆ, ಗ್ರಾಮದ ದೇವಸ್ಥಾನಗಳ ಆವರಣದಲ್ಲಿಯೋ ಸರಳವಾಗಿ ಮದುವೆ ಮಾಡಿಕೊಳ್ಳಲು ಒಳ್ಳೆಯ ಅವಕಾಶ. ಸಾಕಷ್ಟು ಜನ ಇದೇ ಒಳ್ಳೆಯದು. ದುಬಾರಿ ವೆಚ್ಚ ಮಾಡುವುದಕ್ಕಿಂತ ಸರಳವಾಗಿ ಮದುವೆಯಾಗುವುದರಿಂದ ಆರ್ಥಿಕ ಹೊರೆ ಕೂಡ ತಪ್ಪಲಿದೆ ಎನ್ನುತ್ತಿದ್ದು, ಅದೇ ರೀತಿ ಮದುವೆಗಳನ್ನು ಮಾಡಿ ಮುಗಿಸಿದ್ದರು. ಈ ಬಾರಿ ಕೂಡ ಅನೇಕರು ಅದೇ ದಾರಿ ಕಂಡುಕೊಳ್ಳುವ ಸಾಧ್ಯತೆಗಳಿವೆ. ಆದರೆ, ಮಕ್ಕಳ ಮದುವೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸುವವರಿಗೆ ಮಾತ್ರ ಇದು ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಇನ್ನು ಕಲ್ಯಾಣ ಮಂಟಪಗಳಿಗೂ ಇದು ಕಷ್ಟಕಾಲ ಎಂದೇ ಹೇಳಬೇಕು. ಆಗೊಮ್ಮೆ ಈಗೊಮ್ಮೆ ಸಣ್ಣ ಪುಣ್ಣ ಕಾರ್ಯಕ್ರಮ ಬಿಟ್ಟರೆ ಕಲ್ಯಾಣ ಮಂಟಪಗಳಿಗೆ ಮದುವೆಗಳಿಂದಲೇ ಪ್ರಮುಖ ಆದಾಯ. ಈಗ ಮದುವೆಗಳೇ ರದ್ದಾದರೆ ನಿರ್ವಹಣೆಗೂ ಕಷ್ಟಪಡಬೇಕಾಗುತ್ತದೆ ಎನ್ನುವುದು ಮಾಲೀಕರ ಅಳಲು.

Advertisement

ಆಮಂತ್ರಣ ಮುದ್ರಣಕ್ಕೆ ಬ್ರೇಕ್‌
ಇನ್ನು ಅನೇಕರು ಮದುವೆ ಆಮಂತ್ರಣ ಪತ್ರಿಕೆಗಳನ್ನು ಮುದ್ರಣಕ್ಕೆ ನೀಡಿದ್ದಾರೆ. ಆದರೆ, ಸರ್ಕಾರ ನಿರ್ಬಂಧ ಹೇರುತ್ತಿದ್ದಂತೆ ಪ್ರಿಂಟರ್ಗಳಿಗೆ ಕರೆ ಮಾಡಿ ಕಡಿಮೆ ಕಾರ್ಡ್‌ ಮುದ್ರಿಸುವಂತೆ ಹೇಳುತ್ತಿದ್ದಾರೆ. ಬೇಕಾದರೆ ನಿಮ್ಮ ಸೇವಾ ಶುಲ್ಕ ನೀಡುತ್ತೇವೆ. ಹೆಚ್ಚು ಕಾರ್ಡ್‌ ಮುದ್ರಣ ಮಾಡಬೇಡಿ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಕಾರ್ಡ್‌ಗಳ ಮುದ್ರಣವನ್ನೇ ರದ್ದುಗೊಳಿಸುತ್ತಿದ್ದಾರೆ. ಮನೆಯವರೇ ನೂರಾರು ಜನರಿದ್ದೇವೆ. ಬೇರೆಯವರಿಗೆ ಕಾರ್ಡ್‌ ಕೊಡುವುದೇ ಬೇಡ ಎನ್ನುವ ನಿರ್ಧಾರಕ್ಕೆ ಬರುತ್ತಿದ್ದಾರೆ.

ಕಳೆದ ಬಾರಿಗಿಂತ ಈ ಬಾರಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದೆ. ಕೇವಲ 200 ಜನರಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಪಾಸ್‌ ಇದ್ದವರಿಗೆ ಮಾತ್ರ ಪ್ರವೇಶ ಎಂದು ಹೇಳಲಾಗಿದೆ. ಅಲ್ಲದೇ ಕೋವಿಡ್‌ ನಿಯಮ ಉಲ್ಲಂಘನೆ ಮೀರಿದಲ್ಲಿ ಆಯೋಜಕರ ವಿರುದ್ಧ ಎಫ್‌ಐಆರ್‌ ದಾಖಲಿಸುವುದಾಗಿ ತಿಳಿಸಿದ್ದಾರೆ. ಈ ತಿಂಗಳು 3, ಮುಂದಿನ ತಿಂಗಳು 8 ಮದುವೆಗಳು ಬುಕ್‌ ಆಗಿದ್ದು, ಎಲ್ಲರಿಗೂ ಕರೆ ಮಾಡಿ ನಿಯಮಗಳನ್ನು ತಿಳಿಸುತ್ತಿದ್ದೇವೆ. ನಿಯಮ ಪಾಲಿಸಲು ಒಪ್ಪದಿದ್ದಲ್ಲಿ ಮದುವೆ ರದ್ದು ಮಾಡಿಕೊಳ್ಳುವಂತೆ ಹೇಳಿದ್ದೇವೆ.
*ನಾಗರಾಜ್‌, ಕಾರ್ಯದರ್ಶಿ,
ನಿಮಿಷಾಂಬಾ ಕಲ್ಯಾಣ ಮಂಟಪ, ರಾಯಚೂರು.

ಕಳೆದ ವರ್ಷದಂತೆ ಈ ವರ್ಷವೂ ನಮ್ಮ ವ್ಯಾಪಾರಕ್ಕೆ ಕೊಕ್ಕೆ ಬಿದ್ದಾಯ್ತು. ಸೀಜನ್‌ ಶುರುವಾಗಿದ್ದು, ಸಾಕಷ್ಟು ಜನ ಆಮಂತ್ರಣ ಮುದ್ರಣಕ್ಕೆ ನೀಡಿದ್ದು, ಈಗ ಕರೆ ಮಾಡಿ ಬೇಡ ಎನ್ನುತ್ತಿದ್ದಾರೆ. ಇಲ್ಲವಾದರೆ 200, 300, 500 ಕಾರ್ಡ್‌ ಮಾಡಿ ಸಾಕು ಎನ್ನುತ್ತಿದ್ದಾರೆ. ಹೀಗಾಗಿ ನಾವೇ ಕರೆ ಮಾಡಿ ಮುದ್ರಣ ಮಾಡಬೇಕೋ?, ಬೇಡವೋ? ಎಂದು ಕೇಳುತ್ತಿದ್ದು, ಬಹುತೇಕರು ಬೇಡ ಎಂದೇ ಹೇಳುತ್ತಿದ್ದಾರೆ. ಇದರಿಂದ ವ್ಯಾಪಾರ ಮತ್ತೆ ನಷ್ಟದಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದೆ.
*ಸೂಗೂರೆಡ್ಡಿ ಪಾಟೀಲ್‌,
ಜಯಶ್ರೀ ಪ್ರಿಂಟರ್, ರಾಯಚೂರು

*ಸಿದ್ದಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next