Advertisement

ಕೋವಿಡ್ 19 ತಲ್ಲಣ: ದೇಶದ 75 ಜಿಲ್ಲೆಗಳು ; ಕರ್ನಾಟಕದ 9 ಜಿಲ್ಲೆಗಳು ಲಾಕ್ ಡೌನ್

10:03 AM Mar 28, 2020 | Hari Prasad |

ನವದೆಹಲಿ: ಕೋವಿಡ್ 19 ವೈರಸ್‌ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದ 75 ಜಿಲ್ಲೆಗಳನ್ನು ಮಾ. 31ರವರೆಗೆ ಸಂಪೂರ್ಣವಾಗಿ ಲಾಕ್‌ಡೌನ್‌ ಮಾಡುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ.

Advertisement

ಸೋಮವಾರದಿಂದಲೇ ಇದು ಜಾರಿಗೆ ಬರಲಿದೆ. ಲಾಕ್‌ಡೌನ್‌ ಪಟ್ಟಿಗೆ ಹೆಚ್ಚಿನ ಜಿಲ್ಲೆಗಳನ್ನು ಸೇರಿಸುವ ಬಗ್ಗೆ ಮುಂದಿನ ಸ್ಥಿತಿಗಳನ್ನು ನೋಡಿಕೊಂಡು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ.

ಕಾರ್ಯದರ್ಶಿಗಳ ಸಭೆಯಲ್ಲಿ ನಿರ್ಧಾರ
ನವದೆಹಲಿಯಲ್ಲಿ ಭಾನುವಾರ ನಡೆದ ಎಲ್ಲಾ ರಾಜ್ಯ ಸರ್ಕಾರಗಳ ಪ್ರಧಾನ ಕಾರ್ಯದರ್ಶಿಗಳ, ಕೇಂದ್ರ ಸಂಪುಟ ಕಾರ್ಯದರ್ಶಿಗಳ ಹಾಗೂ ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿಯವರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ, ರಾಜ್ಯಗಳ ನಡುವಿನ ಎಲ್ಲಾ ರೀತಿಯ ಸಂಚಾರಗಳನ್ನು ಮಾ. 31ರವರೆಗೆ ರದ್ದುಗೊಳಿಸಲು ನಿರ್ಧರಿಸಲಾಗಿದೆ. ಈ ಕುರಿತಂತೆ ರಾಜ್ಯ ಸರ್ಕಾರಗಳು ಸುತ್ತೋಲೆ ಹೊರಡಿಸುವ ಬಗ್ಗೆ ಹಾಗೂ ಲಾಕ್‌ಡೌನ್‌ ಆದ ನಗರಗಳಲ್ಲಿ ಅಗತ್ಯ ಸೇವೆಗಳನ್ನು ಮಾತ್ರವೇ ಮುಂದುವರಿಸುವ ಬಗ್ಗೆಯೂ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಕೇಂದ್ರ ಗೃಹ ಇಲಾಖೆ ಪ್ರಕಟಿಸಿದೆ.

ಕರ್ನಾಟಕದಲ್ಲಿ 9 ಜಿಲ್ಲೆ ಬಂದ್‌
ಲಾಕ್‌ಡೌನ್‌ ಆಗುವ ಜಿಲ್ಲೆಗಳ ಪಟ್ಟಿಯಲ್ಲಿ ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್‌, ತಮಿಳುನಾಡು, ಕೇರಳದ ಆಯ್ದ ಜಿಲ್ಲೆಗಳು ಸೇರಿವೆ. ಕರ್ನಾಟಕದಲ್ಲಿ ಒಟ್ಟು 9 ಜಿಲ್ಲೆಗಳು ಬಂದ್‌ ಆಗಲಿದ್ದು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಮಗಳೂರು, ದ.ಕ, ಕಲಬುರಗಿ, ಬೆಳಗಾವಿ, ಕೊಡಗು ಹಾಗೂ ಧಾರವಾಡ ಈ ಪಟ್ಟಿಯಲ್ಲಿ ಸೇರಿವೆ. ಅತ್ತ, ಗುಜರಾತ್‌ ಸರ್ಕಾರ, ಅಹ್ಮದಾಬಾದ್‌, ಸೂರತ್‌, ರಾಜ್‌ಕೋಟ್‌, ವಡೋದರಾ ನಗರಗಳನ್ನು ಬಂದ್‌ ಮಾಡುವುದಾಗಿ ಪ್ರಕಟಿಸಿದೆ.

ರೈಲು, ಮೆಟ್ರೋ ಸಂಚಾರ ರದ್ದು
ಎಪ್ಪತ್ತೈದು ನಗರಗಳನ್ನು ಲಾಕ್‌ಡೌನ್‌ ಮಾಡುವ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ರೈಲ್ವೆ ಇಲಾಖೆಯು, ಮಾ. 31ರವರೆಗೆ ರೈಲು ಸಂಚಾರ ರದ್ದುಗೊಳಿಸುವುದಾಗಿ ತಿಳಿಸಿದೆ. ರೈಲು ಸಂಚಾರ ಮಾತ್ರವಲ್ಲದೆ, ವಿವಿಧ ನಗರಗಳ ಮೆಟ್ರೋ ರೈಲು, ಇಂಟರ್‌ ಸಿಟಿ ಪ್ಯಾಸೆಂಜರ್‌ ರೈಲು ಸಂಚಾರವನ್ನೂ ಮಾ. 31ರವರೆಗೆ ನಿಲ್ಲಿಸಲಾಗುವುದು. ಆದರೆ, ಗೂಡ್ಸ್‌ ರೈಲು ಸಂಚಾರಕ್ಕೆ ಈ ನಿರ್ಬಂಧ ಇರುವುದಿಲ್ಲ ಎಂದು ಇಲಾಖೆ ಪ್ರಕಟಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next