ಮಂಗಳೂರು: ಕೋವಿಡ್ 19 ವಿರುದ್ಧದ ಕಾರ್ಯಾಚರಣೆಗಾಗಿ ರೈಲು ಬೋಗಿಗಳಲ್ಲಿ ಐಸೊಲೇಶನ್ ವಾರ್ಡ್ ತೆರೆಯಲು ರೈಲ್ವೇ ಇಲಾಖೆ ನಿರ್ಧರಿಸಿರುವ ಬೆನ್ನಲ್ಲೇ ರಾಜ್ಯದ ಕೆಎಸ್ಸಾರ್ಟಿಸಿಯು ಒಂದಷ್ಟು ಬಸ್‌ಗಳನ್ನು “ಕೋವಿಡ್ 19 ಮೊಬೈಲ್ ಟೆಸ್ಟಿಂಗ್ ಲ್ಯಾಬ್’ ಆಗಿ ಪರಿವರ್ತಿಸಬಹುದು ಎಂಬ ಪ್ರಸ್ತಾವನೆಯನ್ನು ರಾಜ್ಯ ಸರಕಾರದ ಮುಂದಿಟ್ಟಿದೆ.
ಕೋವಿಡ್ 19 ಸೋಂಕು ವ್ಯಾಪಕವಾದರೆ ಸೋಂಕು ಶಂಕೆಯುಳ್ಳವರನ್ನು ಪರೀಕ್ಷಿಸಿ ದೃಢಪಡಿಸುವುದೇ ಬಹುದೊಡ್ಡ ಸವಾಲು. ಅಂತಹ ಸನ್ನಿವೇಶದಲ್ಲಿ ಬಸ್‌ಗಳನ್ನೇ ಕೋವಿಡ್ 19 ಸೋಂಕು ಪೀಡಿತ ಪ್ರದೇಶಗಳಿಗೆ ಕೊಂಡೊಯ್ದು ಸ್ಥಳದಲ್ಲೇ ತಪಾಸಣೆ ಮಾಡಿ ದೃಢಪಡಿಸುವುದು ಇದರ ಹಿಂದಿನ ಉದ್ದೇಶ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯ ಒಪ್ಪಿಗೆ ಲಭಿಸಿದರೆ ಬಸ್ ಆಧಾರಿತ ಕೋವಿಡ್ 19 ಸೋಂಕು ತಪಾಸಣಾ ಪ್ರಯೋಗಾಲಯ ಸ್ಥಾಪನೆ ಸಾಧ್ಯವಾಗಲಿದೆ.
ರಾಜ್ಯದ 30 ಜಿಲ್ಲೆಗಳ ಪೈಕಿ ಮೈಸೂರು, ಹಾಸನ, ವಿಜಯನಗರ, ಶಿವಮೊಗ್ಗ, ಗುಬ್ಬರ್ಗ, ಬೆಂಗಳೂರಿನಲ್ಲಿ 4, ಹುಬ್ಬಳ್ಳಿ, ಮಂಗಳೂರಿನಲ್ಲಿ ಮಾತ್ರ ಕೋವಿಡ್ 19 ಪರೀಕ್ಷಾ ಕೇಂದ್ರಗಳಿವೆ. ಉಳಿದ ಜಿಲ್ಲೆಗಳ ಕೋವಿಡ್ 19 ಶಂಕಿತರನ್ನು ನೆರೆಯ ಜಿಲ್ಲೆಗಳ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಬೇಕಾಗಿದೆ. ಬಸ್‌ಗಳಲ್ಲಿ ಪರೀಕ್ಷಾ ಕೇಂದ್ರ ತೆರೆದರೆ ಈಗಿರುವ ಕೇಂದ್ರಗಳ ಒತ್ತಡ ಕಡಿಮೆಯಾಗಲಿದೆ.
ಕೋವಿಡ್ 19 ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಅದರಲ್ಲೂ ಹಾಟ್‌ಸ್ಪಾಟ್‌ಗಳಲ್ಲಿ ಕೆಎಸ್ಸಾರ್ಟಿಸಿಯ 100 ಬಸ್‌ಗಳಲ್ಲಿ ಮೊಬೈಲ್ ಟೆಸ್ಟಿಂಗ್ ಸೆಂಟರ್ ಲ್ಯಾಬ್ ತೆರೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 8ರಿಂದ 9 ಲಕ್ಷ ಕಿ.ಮೀ. ಕ್ರಮಿಸಿ ಸುಸ್ಥಿತಿಯಲ್ಲಿರುವ ಬಸ್‌ಗಳನ್ನು ಇದಕ್ಕೆ ಬಳಸಲಾಗುವುದು. ಐಸಿಎಂಆರ್‌ನಿಂದ ಒಪ್ಪಿಗೆ ಬಂದರೆ ಕೂಡಲೇ ಯೋಜನೆಯನ್ನು ಕೈಗೆತ್ತಿಕೊಳ್ಳಲಿದ್ದೇವೆ.
– ಶಿವಯೋಗಿ ಕಳಸದ, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ