ಡಾರ್ಲಿಂಗ್ ಕೃಷ್ಣ ಹಾಗೂ ನಿರ್ದೇಶಕ ಶಶಾಂಕ್ ಕಾಂಬಿನೇಶನ್‌ನಲ್ಲಿ ತಯಾರಾಗಿರುವ “ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಇಂದು ತೆರೆಕಾಣುತ್ತಿದೆ. ಕನ್ನಡ ಚಿತ್ರರಂಗದ ಈ ವರ್ಷದ ನಿರೀಕ್ಷಿತ ಸಿನಿಮಾ ಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚುವ ವಿಶ್ವಾಸ ಚಿತ್ರತಂಡಕ್ಕಿದೆ. ಈಗಾಗಲೇ ಪ್ರೀಮಿಯರ್ ಶೋ ನೋಡಿದವರಿಂದ ಸಿನಿಮಾಕ್ಕೆ ಬಹುಪರಾಕ್ ಸಿಕ್ಕಿದೆ. ಒಂದು ಹೊಸ ಬಗೆಯ ಕಥೆಯನ್ನು ಶಶಾಂಕ್ ಹೇಳಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ನಾಯಕ ಕೃಷ್ಣ ಕೂಡಾ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ಕಾರಣ ಚಿತ್ರದ ಕಥೆ.
“ನಾನು ಕೇಳಿದ ಒನ್ ಆಫ್ ದಿ ಬೆಸ್ಟ್ ಕಥೆ ಅಂದರೆ ಇದು. ಕೇಳಿದ ಕೂಡಲೇ “ವಾವ್’ ಎನ್ನುವಂತಿತ್ತು. ಅದೇ ಕಾರಣದಿಂದ ಸಿನಿಮಾವನ್ನು ಒಪ್ಪಿಕೊಂಡೆ. ಸಾಮಾನ್ಯವಾಗಿ ನಾವು ಮಾಡಿದ ಒಂದೆರಡು ಸಿನಿಮಾ ಹಿಟ್ ಆದ ಕೂಡಲೇ ಅದೇ ರೀತಿಯ ಕಥೆಗಳನ್ನು ತರುತ್ತಾರೆ. “ಲವ್ ಮಾಕ್ಟೇಲ್’ ನಂತರ ನನಗೆ ಸಾಕಷ್ಟು ಲವರ್‌ಬಾಯ್ ಕಥೆಗಳೇ ಬಂತು. ಇಂತಹ ಸಮಯದಲ್ಲಿ ಬಂದಿದ್ದು “ಕೌಸಲ್ಯ ಸುಪ್ರಜಾ ರಾಮ’. ಇಡೀ ಸಿನಿಮಾದಲ್ಲಿ ನನ್ನ ಮ್ಯಾನರಿಸಂ, ಗೆಟಪ್ ಎಲ್ಲವೂ ಭಿನ್ನವಾಗಿದೆ. ಇಲ್ಲಿ ಬರುವ ಪಾತ್ರಗಳು ಕೂಡಾ ಅಷ್ಟೇ ಸೊಗಸಾಗಿವೆ. ಇಡೀ ಸಿನಿಮಾದಲ್ಲಿ ವಿಲನ್, ಹೀರೋ ಎರಡೂ ನಾನೇ. ತುಂಬಾ ಆಯಾಮಗಳನ್ನು ಪಡೆದುಕೊಳ್ಳುವ ಪಾತ್ರವದು.ಇಂತಹ ಕಥೆಗಳು ಸಿಗೋದು ತುಂಬಾ ಅಪರೂಪ. ಈ ಪಾತ್ರವನ್ನು ನಿಭಾಯಿಸೋದು ಕೂಡಾ ಚಾಲೆಂಜಿಂಗ್ ಆಗಿತ್ತು. ಈಗಾಗಲೇ ಟ್ರೇಲರ್ ನೋಡಿದವರಿಗೆ ಸಿನಿಮಾದ ಬಗೆಗಿನ ಕುತೂಹಲ ಹೆಚ್ಚಾಗಿದೆ’ ಎನ್ನುತ್ತಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಶಶಾಂಕ್, ಇದೊಂದು ಕಂಪ್ಲೀಟ್ ಫ್ಯಾಮಿಲಿ ಕಥಾಹಂದರ ಹೊಂದಿರುವ ಸಿನಿಮಾ. ಬಹುತೇಕ ಎಲ್ಲ ಫ್ಯಾಮಿಲಿಗಳಲ್ಲೂ ಎದುರಿಸುವಂಥ ವಿಷಯವೊಂದನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಇಂಥದ್ದೊಂದು ವಿಷಯದ ಮೇಲೆ ಇಲ್ಲಿಯವರೆಗೆ ಯಾವ ಭಾಷೆಗಳಲ್ಲೂ ಸಿನಿಮಾ ಬಂದಿಲ್ಲ. ಆ ವಿಷಯವನ್ನು ನಾವು ಈ ಸಿನಿಮಾದಲ್ಲಿ ಹೇಳಿದ್ದೇವೆ. ಒಂದಷ್ಟು ಎಮೋಶನ್ಸ್ ಮತ್ತು ಎಂಟರ್‌ಟೈನ್ಮೆಂಟ್ ಎರಡೂ ಈ ಸಿನಿಮಾದಲ್ಲಿದೆ. ಫ್ಯಾಮಿಲಿ ಆಡಿಯನ್ಸ್‌ಗೆ ಖಂಡಿತಾ ಇಷ್ಟವಾಗುವಂಥ ಸಿನಿಮಾ ಇದಾಗಲಿದೆ. ಈ ಕಥೆಗೆ ಯಾವುದೋ ಒಂದು ಆಯಾಮವಿಲ್ಲ, ಹಲವು ಆಯಾಮಗಳಿವೆ. ಈ ತರಹದ ಕಥೆ ಸಿಗೋದು ಕಷ್ಟ. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಬಹುದು ಎಂಬ ನಿರೀಕ್ಷೆ ಇದೆ. ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ಕಥೆ ಕನೆಕ್ಟ್ ಆಗುತ್ತದೆ. ಪ್ರತಿಯೊಬ್ಬರೂ ಚಿತ್ರದಲ್ಲಿನ ಯಾವುದಾದರೊಂದು ಪಾತ್ರದ ಜೊತೆಗೆ ರಿಲೇಟ್ ಮಾಡಿಕೊಳ್ಳಬಹುದು. ಕೃಷ್ಣ ಅವರನ್ನು ಬೇರೆ ತರಹ ತೋರಿಸುವ ಪ್ರಯತ್ನ ಮಾಡಿದ್ದೇನೆ’ ಎನ್ನುತ್ತಾರೆ.
“ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲಿ ಮಿಲನಾ ಕೂಡಾ ನಟಿಸಿದ್ದಾರೆ ಎಂಬ ವಿಚಾರವನ್ನು ಸಸ್ಪೆನ್ಸ್ ಆಗಿಯೇ ಇಟ್ಟಿದ್ದ ಚಿತ್ರತಂಡ ಇತ್ತೀಚೆಗೆ ಟ್ರೇಲರ್ ಮೂಲಕ ಬಿಟ್ಟುಕೊಟ್ಟಿದೆ. ಈಗಾಗಲೇ ಬೃಂದಾ ಈ ಚಿತ್ರದ ನಾಯಕಿಯಾಗಿದ್ದಾರೆ. ಹಾಗಾದರೆ ಈ ಚಿತ್ರಕ್ಕೆ ಇಬ್ಬರು ನಾಯಕಿಯರಾ ಅಥವಾ ಮಿಲನಾ ಈ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರಾ ಎಂಬ ಕುತೂಹಲ ಅನೇಕರಿಗಿದೆ. ಈ ಕುತೂಹಲಕ್ಕೆ ಇಂದು ಉತ್ತರ ಸಿಗಲಿದೆ.
ಮಿಲನಾ ಅವರ ಆಯ್ಕೆ ಬಗ್ಗೆ ಮಾತನಾಡುವ ನಿರ್ದೇಶಕ ಶಶಾಂಕ್, “ಮಿಲನಾ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಿದ್ದು ಬೇರೆ ಕಾರಣಕ್ಕಲ್ಲ, ಅವರ ಪ್ರತಿಭೆಗಾಗಿ. ಆ ಪಾತ್ರ ನಿಭಾಯಿಸುವುದು ಬಹಳ ಕಷ್ಟ. ಬಹಳ ನೈಜವಾಗಿ ಮತ್ತು ಸೆನ್ಸಿಬಲ್ ಆಗಿ ನಟಿಸಬೇಕಿತ್ತು. ಬಹಳ ಕಾಂಪ್ಲೆಕ್ಸ್ ಆದ ಪಾತ್ರ ಅದು. ಮಿಲನಾ ನನ್ನ ನಿರೀಕ್ಷೆಗೂ ಮೀರಿ ಬಹಳ ಚೆನ್ನಾಗಿ ನಟಿಸಿದ್ದಾರೆ’ ಎನ್ನುತ್ತಾರೆ.
“ಕೌಸಲ್ಯ ಸುಪ್ರಜಾ ರಾಮ’ ಚಿತ್ರವನ್ನು ಶಶಾಂಕ್ ಸಿನಿಮಾಸ್ ಮತ್ತು ಕೌರವ ಪಿಕ್ಚರ್ ಹೌಸ್ ಮೂಲಕ ಶಶಾಂಕ್ ಹಾಗೂ ಬಿ.ಸಿ. ಪಾಟೀಲ್ ಜಂಟಿಯಾಗಿ ನಿರ್ಮಿಸಿದ್ದಾರೆ.
ರವಿಪ್ರಕಾಶ್ ರೈ