ಕೊಟ್ಟೂರು: ಐತಿಹಾಸಿಕ ವಿಜಯನಗರ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರ ಕೊಟ್ಟೂರಿನಲ್ಲಿ ಪವಾಡಪುರುಷ ಶ್ರೀಗುರು ಕೊಟ್ಟೂರೇಶ್ವರರ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಕೊರೊನಾ ಹಿನ್ನೆಲೆಯಲ್ಲಿ ರಥೋತ್ಸವಕ್ಕೆ ಹೊರಗಿನ ಭಕ್ತರಿಗೆ-ಪಾದಯಾತ್ರಿಗಳಿಗೆ ನಿರ್ಬಂಧ ವಿಧಿಸಲಾಗಿದ್ದರೂ ಭಕ್ತರ ದಂಡು ಹರಿದು ಬಂದಿತ್ತು. ರಥೋತ್ಸವದ ಅಂಗವಾಗಿ ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸ್ವಾಮಿಯ ಮಧ್ಯಾಹ್ನದ ಪೂಜಾ ಕಾರ್ಯ ನೆರವೇರಿದ ನಂತರ ಸಕಲ ಬಿರುದಾವಳಿಗಳೊಂದಿಗೆ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಮೂಲ ಮೂರ್ತಿಯನ್ನು ಹೊರ ತಂದು ಬೆಳ್ಳಿ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿ ಬಳಿಕ ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.
ಮೂಲಾ ನಕ್ಷತ್ರ ಕೂಡುತ್ತಿದ್ದಂತೆ ಪವಾಡವೆಂಬಂತೆ ರಥ ನಿಂತ ಸ್ಥಳದಿಂದ ಯಾರೂ ಎಳೆಯದೆಯೂ 2 ಹೆಜ್ಜೆ ಮುಂದಕ್ಕೆ ಸಾಗಿತು. ಸಂಜೆ 4:45ರ ಸುಮಾರಿಗೆ ರಥೋತ್ಸವ ಆರಂಭಗೊಂಡಿತು. “ಶ್ರೀ ಗುರು ಕೊಟ್ಟೂರು ದೊರೆಯೇ ನಿನಗಾರು ಸರಿಯೇ… ಸರಿ ಸರಿ ಎಂದವರ ಹಲ್ಲು ಮುರಿಯೇ ಬಹುಪರಾಕ್…’ ಎಂಬ ಜಯಘೋಷ ಮೊಳಗಿಸುತ್ತ ಭಕ್ತರು ರಥದ ಮಿಣಿ (ಹಗ್ಗ) ಯನ್ನು ಹಿಡಿದು ಬನ್ನಿಮಂಟಪದ ಪಾದಗಟ್ಟೆಯವರೆಗೆ ರಥ ಎಳೆದರು. ನಂತರ ಅಲ್ಲಿಂದ ತೇರುಗಡ್ಡೆವರೆಗೆ ರಥವನ್ನು ವಾಪಸ್ ಎಳೆದು ತರಲಾಯಿತು. ಸಂಜೆ 5.40ರ ಸುಮಾರಿಗೆ ರಥ ನಿಲುಗಡೆಯಾಗುತ್ತಿದ್ದಂತೆ ಭಕ್ತರು ವಿಜಯೋತ್ಸವ ಆಚರಿಸಿದರು.
ದಲಿತ ಮಹಿಳೆಯರಿಂದ ಆರತಿ: ವ್ರತಾಚರಣೆ ಮಾಡುವ ದಲಿತ ಮಹಿಳೆಯರು ಆರತಿ ಬೆಳಗಿದ ನಂತರವೇ ರಥೋತ್ಸವ ನಡೆಯುವುದು ಇಲ್ಲಿ ನಡೆದು ಬಂದ ಸಂಪ್ರದಾಯ. ಈ ಬಾರಿಯೂ ಸಮಾಳ, ನಂದಿಕೋಲು ಮತ್ತಿತರ ವಾದ್ಯಗಳೊದಿಗೆ ಬೆಳ್ಳಿ ಪಲ್ಲಕ್ಕಿ ಮೆರವಣಿಗೆ ಕರಗಲ್ಲು ಸುತ್ತುವರೆದು ದ್ವಾರಬಾಗಿಲ ಮುಖಾಂತರ ಗಾಂಧಿ ವೃತ್ತದ ಬಳಿ ಬರುತ್ತಿದ್ದಂತೆ 5 ದಿನಗಳ ಕಾಲ ಶ್ರೀಸ್ವಾಮಿಗೆ ಹರಕೆ ಹೊತ್ತು ಉಪವಾಸ ವ್ರತ ನಡೆಸಿದ ದಲಿತ ಮಹಿಳೆಯರಾದ ದುರುಗಮ್ಮ ಹಾಗೂ ಉಡುಸಲಮ್ಮ ಶ್ರೀ ಕೊಟ್ಟೂರೇಶ್ವರ ಸ್ವಾಮಿಗೆ ಕಳಸದಾರತಿ ಬೆಳಗಿದರು. ನಂತರ ಪಲ್ಲಕ್ಕಿ ಉತ್ಸವ ತೇರು ಬಜಾರ್ ಮೂಲಕ ಸಂಚರಿಸಿ ತೇರು ಬಯಲು ತಲುಪುತ್ತಿದ್ದಂತೆ ರಥ ಹಾಗೂ ಸ್ವಾಮಿ ಸುತ್ತಲೂ ಧರ್ಮಕರ್ತರ ಬಳಗ 5 ಸುತ್ತು ನಂದಿಕೋಲು ವಾದ್ಯದೊಂದಿಗೆ ಪ್ರದಕ್ಷಣೆ ಹಾಕಿ ನಂತರ ರಥದ ಒಳಗೆ ಸ್ವಾಮಿಯನ್ನು ಪ್ರತಿಷ್ಠಾಪಿಸಿದರು.
ರಥಕ್ಕೆ ಸ್ಟೇರಿಂಗ್, ಬ್ರೇಕ್ ಸಿಸ್ಟಂ ಅಳವಡಿಸಿದ್ದರಿಂದ ತೇರು ನಿಧಾನವಾಗಿ ಸಾಗಲು ನೆರವಾಯಿತು. ನಂತರ ರಥ ನೆಲೆ ನಿಂತು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯನ್ನು ಮದಾಲ್ಸಿ ಮೂಲಕ ಹಿರೇಮಠಕ್ಕೆ ಕೊಂಡೊÂಯ್ದು, ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಭದ್ರತೆ: ರಥೋತ್ಸವದ ಮಿಣಿ (ಹಗ್ಗ) ಎಳೆಯಲು ನೆರೆದಿದ್ದ ಭಕ್ತರಲ್ಲಿ ನೂಕುನುಗ್ಗಲು ಉಂಟಾಗದಂತೆ ಸಿಪಿಐ ದೊಡ್ಡಣ್ಣ, ಡಿಎಸ್‌ಪಿ ಹಾಲಮೂರ್ತಿ ರಾವ್, ತಹಶೀಲ್ದಾರ್ ಜಿ. ಅನಿಲ್‌ಕುಮಾರ್, ಉಪವಿಭಾಗಾಧಿಕಾರಿ ಚಂದ್ರಶೇಖರ್, ಪಿಎಸ್‌ಐ ನಾಗಪ್ಪ ಮತ್ತು ಇಲಾಖಾ ಸಿಬ್ಬಂದಿಯವರು ಭದ್ರತೆ ಒದಗಿಸಿದ್ದರು. ಕ್ರಿಯಾಮೂರ್ತಿ ಕೊಟ್ಟೂರು ದೇವರು ಶಿವಪ್ರಕಾಶ ಸ್ವಾಮೀಜಿ, ಶಾಸಕ ಎಸ್. ಭೀಮಾನಾಯ್ಕ, ಜಿಪಂ ಸದಸ್ಯ ಎಂಎಂಜೆ. ಹರ್ಷವರ್ಧನ್, ಎಚ್. ಗಂಗಾಧರ, ಸಿ.ಎಚ್.ಎಂ. ಗಂಗಾಧರ ಧರ್ಮಕರ್ತರು, ಜಿಲ್ಲಾ ಎಂಎಂಜೆ ಸತ್ಯಪ್ರಕಾಶ, ಪಪಂ ಮುಖ್ಯಾಧಿಕಾರಿ ಟಿ.ಎಂ.ಗಿರೀಶ ಮುತಾದ ಪ್ರಮುಖರು ಪಾಲ್ಗೊಂಡಿದ್ದರು. 600 ಜನ ಪೊಲೀಸ್ ಪೇದೆಗಳು ಮತ್ತು ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ ಸಿಬ್ಬಂದಿ, ಆಂಬ್ಯುಲೆನ್ಸ್, ಗೃಹರಕ್ಷಕ ದಳ ಸಿಬ್ಬಂದಿ ಇದ್ದರು.