ಬದಿಯಡ್ಕ: ತೃಕ್ಕಲಶಾಟದೊಂದಿಗೆ ಕೊಟ್ಟಿಯೂರು ಶ್ರೀ ಮಹಾದೇವ ಕ್ಷೇತ್ರದ ವೈಶಾಖ ಮಹೋತ್ಸವವು ರವಿವಾರ ಕೊನೆಗೊಂಡಿತು.
ರವಿವಾರ ಉಷಃಕಾಲದಲ್ಲಿ ವೈದಿಕ ಕಾರ್ಯಕ್ರಮಗಳು ಪ್ರಾರಂಭವಾಗಿ ಕೆಲ ಸಮಯದ ಅನಂತರ ತೆಂಗಿನಕಾಯಿಯ ಗಡಿ(ಭಾಗ)ಗಳಲ್ಲಿ ಎಣ್ಣೆತುಂಬಿ ಬತ್ತಿ ಉರಿಸಿ ದೇವಸ್ಥಾನದ ಉಳಿದೆಲ್ಲಾ ದೀಪಗಳನ್ನು ಆರಿಸಿ ಮುಂದಿನ ಕಾರ್ಯಗಳನ್ನು ನಡೆಸಲಾಯಿತು.
ಸ್ಥಾನಿಕರ ಹಾಗೂ ವಾರ್ಯರ್‌ರವರ ನೇತೃತ್ವದಲ್ಲಿ ದೇವಸ್ಥಾನದ ನಾಲ್ಕು ಮೂಲೆಗಳಲ್ಲಿ ನೆಡಲಾದ ಕಂಬಗಳನ್ನು ಕಿತ್ತು ದೂರಕ್ಕೆ ತಳ್ಳುವುದರೊಂದಿಗೆ ತೃಕ್ಕಲಶಾಟಕ್ಕೆ ನಾಂದಿ ಹಾಡಲಾಯಿತು. ಕಲಶ ಮಂಟಪದಲ್ಲಿ ಪೂಜಿಸಲ್ಪಟ್ಟ ಕಲಶಗಳನ್ನು ವಾದ್ಯಘೋಷಗಳೊಂದಿಗೆ ಮುಖ ಮಂಟಪಕ್ಕೆ ತರಲಾಯಿತು. ಆನಂತರ ಪ್ರಧಾನ ತಂತ್ರಿಯವರ ನೇತೃತ್ವ ದಲ್ಲಿ ಸ್ವಯಂಭೂವಿಗೆ ಕಲಶಾಭಿಷೇಕ ಮಾಡಲಾಯಿತು.
ಎಲ್ಲ ಬ್ರಾಹ್ಮಣರು ಜತೆಯಾಗಿ ಸಮೂಹ ಪುಷ್ಪಾಂಜಲಿ ಅರ್ಪಿಸಿ ಕೊನೆಯಲ್ಲಿ ಪ್ರಧಾನ ತಂತ್ರಿಗಳು ಪೂರ್ಣ ಪುಷ್ಪಾಂಜಲಿಯನ್ನು ಅರ್ಪಿಸಿದ ಬಳಿಕ ನೆರೆದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ನಂತರ ವರ್ಷಂಪ್ರತಿ ನಡೆಯುವ ಹಲವಾರು ವೈದಿಕ ಕಾರ್ಯಗಳ ಬಳಿಕ ಭಂಡಾರ ಹಿಂತಿರುಗಿಸುವುದು ಮುಂತಾದ ಪ್ರಕ್ರಿಯೆಗಳೊಂದಿಗೆ ವೈಶಾಖ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು. ಇನ್ನು ಮುಂದಿನ 11 ತಿಂಗಳು ಕ್ಷೇತ್ರದಲ್ಲಿ ಆವರಿಸುವ ನಿಶ್ಯಬ್ದ ಮುಂದಿನ ವೈಶಾಖ ಮಾಸದಲ್ಲಿ ಮತ್ತೆ ಪ್ರಾರಂಭವಾಗುವುದು.
ಚಿತ್ರ : ಫೋಕ್ಸ್‌ಸ್ಟಾರ್ ಸ್ಟುಡಿಯೋ ಬದಿಯಡ್ಕ