ಕೊಟ್ಟಿಗೆಹಾರ: ಒಂದೇ ವಾರದಲ್ಲಿ 30ಕ್ಕೂ ಹೆಚ್ಚು ರಾಸುಗಳು ಅಪಘಾತಕ್ಕೀಡಾಗಿ ಸಾವನ್ನಪ್ಪಿರುವ ದುರ್ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮೂಡಿಗೆರೆ-ಕೊಟ್ಟಿಗೆಹಾರ ಮಾರ್ಗದಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿ ಬಳಿ ಇಂದು ಕೂಡ ಅಪಘಾತದಿಂದ ಎರಡು ಜಾನುವಾರುಗಳು ಸಾವನ್ನಪ್ಪಿವೆ. ಮೂಡಿಗೆರೆಯಲ್ಲಿ ಹಾದುಹೋಗುವ ವಿಲ್ಲುಪುರಂ-ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅಪಘಾತದಿಂದ ಒಂದು-ಎರಡು ಜಾನುವಾರುಗಳು ಸಾವನ್ನಪ್ಪುತ್ತಿವೆ.
ಕೈಮರದಿಂದ ಕೊಟ್ಟಿಗೆಹಾರದವರೆಗೆ ಹಾದುಹೋಗುವ ಹತ್ತಾರು ಹಳ್ಳಿಗಳಲ್ಲಿ ರಸ್ತೆ ಮಧ್ಯೆ ನಿಲ್ಲುವ ಅಥವ ರಸ್ತೆ ಬದಿ ಮೇಯುತ್ತಿದ್ದ ರಾಸುಗಳು ಅಪಘಾತಕ್ಕೀಡಾಗಿ ಸಾವನ್ನಪ್ಪುತ್ತಿವೆ. ಅವುಗಳಲ್ಲಿ ರಾತ್ರಿ ವೇಳೆಯೇ ಹೆಚ್ಚು. ರಾಸುಗಳು ರಸ್ತೆ ಮಧ್ಯೆ ಮಲಗುವುದರಿಂದ ರಾತ್ರಿ ವೇಳೆ ವಾಹನ ಸಾವರರು ವೇಗವಾಗಿ ಹೋಗುವುದರಿಂದ ಒಂದೆಡೆ ರಾಸುಗಳು ಸಾವನ್ನಪ್ಪುತ್ತಿವೆ.
ಮತ್ತೊಂದೆಡೆ ಅಪಘಾತಗಳನ್ನ ತಪ್ಪಿಸಲು ಹೋಗಿ ಕಾರು-ಬೈಕ್‍ಗಳು ಅಪಘಾತಗಳಾಗಿ ವಾಹನ ಸವಾರರು ಗಾಯಾಳುಗಳಾಗುತ್ತಿದ್ದಾರೆ. ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಿಂದ ಕೊಟ್ಟಿಗೆಹಾರದವರೆಗೂ ಸುಮಾರು 300ಕ್ಕೂ ಅಧಿಕ ಬಿಡಾಡಿ ದನಗಳಿವೆ. ಜೊತೆಗೆ ರೈತರು ಸಾಕಿರುವ ರಾಸುಗಳು ಇವೆ. ರೈತರು ಕೂಡ ರಾಸುಗಳನ್ನ ಬೀದಿಯಲ್ಲಿ ಬಿಟ್ಟಿದ್ದಾರೆ. ಹಾಗಾಗಿ, ರಸ್ತೆಯಲ್ಲಿ ನಿತ್ಯ ರಾಸುಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಈ ಬಗ್ಗೆ ಜಿಲ್ಲಾಡಳಿತವಾಗಲಿ ಅಥವ ಗ್ರಾಮ ಪಂಚಾಯಿತಿಯೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಸರ್ಕಾರ ಬಿಡಾಡಿ ದನಗಳನ್ನ ಗೋಶಾಲೆಗೆ ಸೇರಿಸಬೇಕೆಂದು ಸ್ಥಳಿಯರು ಕೂಡ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಜಾನುವಾರುಗಳ ಮೇವಿಗೆ ಇದ್ದ ಗೋಮಾಳಗಳು ಒತ್ತುವರಿಯಾದ ಹಿನ್ನೆಲೆ ರಾಸುಗಳು ಎಲ್ಲೆಂದರಲ್ಲಿ ಮೇಯಲು ಹೋಗಿ ಪ್ರಾಣ ಕಳೆದುಳ್ಳುತ್ತಿವೆ ಎಂದು ಸ್ಥಳಿಯರು ಗೋಮಾಳ ಒತ್ತುದಾರರ ವಿರುದ್ಧವೂ ಕಿಡಿಕಾರಿದ್ದಾರೆ.
ಇದನ್ನೂ ಓದಿ : ಕರಾವಳಿಯ ಹೈನುಗಾರರ ಕೈ ಹಿಡಿದ ನರೇಗಾ ಹಟ್ಟಿ : 8,627ಕ್ಕೂ ಅಧಿಕ ಹಟ್ಟಿಗಳ ನಿರ್ಮಾಣ