Advertisement

ಕ್ವಾರಂಟೈನ್‌ ವಿಚಾರದಲ್ಲಿ ತಾರತಮ್ಯ: ಗ್ರಾಮಸ್ಥರ ಆರೋಪ

06:04 PM May 22, 2020 | Naveen |

ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರೊಬ್ಬರಿಗೆ ಕೋವಿಡ್ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಪ್ರಥಮ ಹಂತದಲ್ಲಿ ಸಂಪರ್ಕದಲ್ಲಿದವರ ಪಟ್ಟಿ ತಯಾರಿಸಿ ಕ್ವಾರಂಟೈನ್‌ನಲ್ಲಿ ಪ್ರಕ್ರಿಯೆ ನಡೆಯುತ್ತಿದ್ದು ಕ್ವಾರಂಟೈನ್‌ ಮಾಡುವ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ನಂದಿಪುರದ ಕೆಲ ಗ್ರಾಮಸ್ಥರು ಆರೋಪಿಸಿದ್ದಾರೆ.

Advertisement

ನಂದಿಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಹಾಗೂ ವೈದ್ಯರೊಂದಿಗೆ ಪ್ರಥಮ ಹಂತದಲ್ಲಿ ಸಂಪರ್ಕದಲ್ಲಿರುವ ಕೆಲ ಶ್ರೀಮಂತ ವರ್ಗದವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ. ಬಡ ವರ್ಗದವರನ್ನು ಮಾತ್ರ ದೂರ ಕ್ವಾರಂಟೈನ್‌ ಕೇಂದ್ರಗಳಿಗೆ ಕಳಿಸಲಾಗಿದೆ. ಇವರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿದ್ದು ಇವರು ಕ್ವಾರಂಟೈನ್‌ನಲ್ಲಿ ಇರಬೇಕಾಗಿದೆ. ನಂದಿಪುರ ಆಸ್ಪತ್ರೆಗೆ ಸಿಸಿಟಿವಿ ಪರಿಶೀಲಿಸಿದರೆ ಸೋಂಕಿತ ವೈದ್ಯರನ್ನು ಚಿಕಿತ್ಸೆಗೆ ಬಂದ ರೋಗಿಗಳ ಜೊತೆಗೆ ಬೇರೆಯವರು ಯಾರು ಭೇಟಿಯಾಗಿದ್ದಾರೆ ಎಂಬ ಮಾಹಿತಿ ಸಿಗುತ್ತದೆ. ಸಿಸಿಟಿವಿ ಪರಿಶೀಲಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕ್ವಾರಂಟೈನ್‌ ವಿಚಾರದಲ್ಲಿ ತಾರತಮ್ಯ ಮಾಡ್ತಿಲ್ಲ: ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಡಾ| ಮಧುಸೂಧನ್‌, ಕ್ವಾರಂಟೈನ್‌ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬುದು ಕೇವಲ ವದಂತಿ ಅಷ್ಟೆ. ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು, ಬಾಣಂತಿಯರನ್ನು ಸೇರಿದಂತೆ 39 ಮಂದಿಯನ್ನು ಮಾತ್ರ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದ್ದು ಉಳಿದವರನ್ನು ಕ್ವಾರಂಟೈನ್‌ಗೆ ಕಳಿಸಲಾಗಿದೆ. ಸೋಂಕಿತ ವೈದ್ಯರಲ್ಲಿ 870 ಮಂದಿ ಚಿಕಿತ್ಸೆ ಪಡೆದಿದ್ದು ಇವರಲ್ಲಿ ಕೆಲವರು ಚಿಕ್ಕಮಗಳೂರು ಜಿಲ್ಲೆಯಲ್ಲಿಲ್ಲ. ಮತ್ತೆ ಕೆಲವರ ಹೆಸರು ಆಸ್ಪತ್ರೆಯ ಭೇಟಿಯಾದವರ ಪಟ್ಟಿಯಲ್ಲಿ ಪುನರಾವರ್ತನೆಗೊಂಡಿದೆ. ಅಂತಿಮ ಸಂಖ್ಯೆ ಶುಕ್ರವಾರ ಸಿಗಲಿದೆ. ಈಗಾಗಲೇ 432 ಮಂದಿ ಕ್ವಾರಂಟೈನ್‌ ಪಟ್ಟಿಯಲ್ಲಿದ್ದು ವೈದ್ಯರು ಮತ್ತು ಆರೋಗ್ಯ ಕಾಯಕರ್ತರಿರುವ 8 ತಂಡಗಳು ಸೋಂಕಿತ ವೈದ್ಯರ ಸಂಪರ್ಕದಲ್ಲಿದ್ದವರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಬಸ್ಕಲ್‌ 1, ಗೋಣಿಬೀಡು 1, ನಂದಿಪುರ 2, ಚಿನ್ನಿಗ 1, ಮಾಕೋನಹಳ್ಳಿಯಲ್ಲಿ 2 ತಂಡಗಳು ಸೋಂಕಿತ ವೈದ್ಯರ ಸಂಪರ್ಕದಲ್ಲಿದವರರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next