Advertisement

ನೆಟ್‌ವರ್ಕ್‌ ಸಮಸ್ಯೆ: ಗ್ರಾಹಕರ ಪರದಾಟ

06:11 PM Mar 18, 2020 | Naveen |

ಕೊಟ್ಟಿಗೆಹಾರ: ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್‌ ನೀಡಲು ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಸಾಧ್ಯವಾಗದ ಕಾರಣ, ಬಾಳೂರು ದರ್ಬಾರ್‌ ಪೇಟೆಯ ನ್ಯಾಯಬೆಲೆ ಅಂಗಡಿ ಬಸ್‌ ತಂಗುದಾಣದಲ್ಲಿ ನಡೆಯುತ್ತಿದೆ.

Advertisement

ಬಾಳೂರು ದರ್ಬಾರ್‌ ಪೇಟೆಯಲ್ಲಿ ನ್ಯಾಯಬೆಲೆ ಅಂಗಡಿ ಇದ್ದು, ಅಲ್ಲಿ ಪಡಿತರದಾರರು ಬಯೋಮೆಟ್ರಿಕ್‌ನಲ್ಲಿ ಬೆರಳಚ್ಚು ನೀಡಿ ಪಡಿತರ ಪಡೆಯಬೇಕು. ಆದರೆ, ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಬಯೋಮೆಟ್ರಿಕ್‌ನಲ್ಲೂ ಬೆರಳಚ್ಚು ನೀಡಲು ಸಾಧ್ಯವಾಗದೇ ಇರುವುದರಿಂದ ಸುಮಾರು 1 ಕಿ.ಮೀ. ದೂರದಲ್ಲಿರುವ ಬಸ್‌ ತಂಗುದಾಣದಲ್ಲಿ ಬಯೋಮೆಟ್ರಿಕ್‌ನಲ್ಲಿ ಬೆರಳಚ್ಚು ಪಡೆದು ಪಡಿತರ ನೀಡಲಾಗುತ್ತಿದೆ.

ಬಸ್‌ ತಂಗುದಾಣದಲ್ಲಿ ವಿದ್ಯುತ್‌ ವ್ಯವಸ್ಥೆ ಇಲ್ಲದಿರುವುದರಿಂದ ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಆಗಾಗ ಲ್ಯಾಪ್‌ಟಾಪ್‌ ಅನ್ನು ಬೇರೆಡೆ ಚಾರ್ಜ್‌ ಮಾಡಿಕೊಂಡು ಬರಬೇಕಾಗಿದೆ. ಬಾಳೂರು ಗ್ರಾಪಂ ಪ್ರದೇಶದಲ್ಲಿ ನೆಟ್‌ವರ್ಕ್‌ ಸಮರ್ಪಕವಾಗಿ ಸಿಗುತ್ತಿದ್ದು, ಆ ಭಾಗದಲ್ಲಿ ನ್ಯಾಯಬೆಲೆ ಅಂಗಡಿ ತೆರೆದರೆ ಈ ಎಲ್ಲಾ ಸಮಸ್ಯೆಗಳಿಗೆ ತೆರೆ ಎಳೆಯಬಹುದಾಗಿದೆ.

ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಬಸ್‌ ತಂಗುದಾಣದಲ್ಲಿ ನ್ಯಾಯಬೆಲೆ ಅಂಗಡಿ ನಡೆಯುತ್ತಿದೆ. ಇನ್ನೆನ್ನೂ ಕೆಲ ತಿಂಗಳುಗಳಲ್ಲೇ ಮಳೆಗಾಲ ಪ್ರಾರಂಭವಾಗುವುದರಿಂದ ಈ ಸಮಸ್ಯೆಗೆ ಆಹಾರ ಇಲಾಖೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಬಾಳೂರಿನ ಸುಪ್ರೀಮ್‌ ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಮೂಡಿಗೆರೆ ಆಹಾರ ಶಿರಸ್ತೇದಾರ್‌ ಇಂದ್ರೇಶ್‌, ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ತೊಂದರೆ ಉಂಟಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next