Advertisement

ಮಲೆನಾಡಿಗೆ ಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚಳ

05:24 PM May 06, 2020 | Team Udayavani |

ಕೊಟ್ಟಿಗೆಹಾರ: ರೆಡ್‌ ಜೋನ್‌ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಜಿಲ್ಲೆ ಚಿಕ್ಕಮಗಳೂರು ಹಸಿರು ವಲಯದಲ್ಲಿದ್ದರೂ ಆನ್‌ಲೈನ್‌ ಪಾಸ್‌ ಬಳಸಿ ದಕ್ಷಿಣ ಕನ್ನಡದಿಂದ ಚಿಕ್ಕಮಗಳೂರು ಗಡಿಯೊಳಗೆ ನೂರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರವೇಶಿಸುತ್ತಿರುವುದು ಜಿಲ್ಲೆಯ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

Advertisement

ಮಂಗಳವಾರ ಬೆಳಗ್ಗೆಯಿಂದ ಕೊಟ್ಟಿಗೆಹಾರದ ಚೆಕ್‌ ಪೋಸ್ಟ್‌ನಲ್ಲಿ ಆನ್‌ಲೈನ್‌ ಪಾಸ್‌ ಮೂಲಕ ಜಿಲ್ಲೆಗೆ ಬಂದ 200 ಕ್ಕೂ ಹೆಚ್ಚು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಹೀಗೆ ರೆಡ್‌ಜೋನ್‌ ಏರಿಯಾದ ಪ್ರಯಾಣಿಕರನ್ನು ದೊಡ್ಡ ಸಂಖ್ಯೆಯಲ್ಲಿ ಬಿಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆರೋಗ್ಯ ಸೇವೆ, ಹೆರಿಗೆ, ನಿಧನ ಮುಂತಾದ ತುರ್ತು ಸಂದರ್ಭದಲಿರುವ ಪ್ರಯಾಣಿಕರಿಗೆ ಮಾತ್ರ ಪಾಸ್‌ ಗಳನ್ನು ನೀಡಬೇಕು. ಆನ್‌ಲೈನ್‌ನಲ್ಲಿ ಪಾಸ್‌ ನೀಡದೇ ನೇರವಾಗಿ ಗ್ರಾಪಂ ಮಟ್ಟದ ಅಧಿಕಾರಿಗಳು ಅಥವಾ ಪೊಲೀಸ್‌ ಠಾಣೆಯ ಮೂಲಕ ಪಾರದರ್ಶಕವಾಗಿ ಪರಿಶೀಲಿಸಿ ಪಾಸ್‌ ವಿತರಿಸಬೇಕು ಎಂದು ಕೊಟ್ಟಿಗೆಹಾರದ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕೊಟ್ಟಿಗೆಹಾರದ ಹೃದಯ ಭಾಗದಲ್ಲಿರುವ ಚೆಕ್‌ ಪೋಸ್ಟ್‌ನಲ್ಲಿ ದಕ್ಷಿಣ ಕನ್ನಡ ಭಾಗದಿಂದ ಬರುವ ಪ್ರವಾಸಿಗರು ತಮ್ಮ ವಾಹನದಿಂದ ಇಳಿದು ಚೆಕ್‌ ಪೋಸ್ಟ್‌ ಬಳಿ ಬರುತ್ತಾರೆ. ಪ್ರತಿಯೊಂದು ವಾಹನವನ್ನು ತಪಾಸಣೆ ನಡೆಸಿ ಪ್ರಯಾಣಿಕರ ಮಾಹಿತಿಯನ್ನು ಪಡೆದು ಬಿಡಬೇಕಾಗುವುದರಿಂದ ಸಾಲುಗಟ್ಟಿ ನಿಂತ ವಾಹನಗಳಲ್ಲಿ ಇರುವ ಪ್ರಯಾಣಿಕರು ವಾಹನದಿಂದ ಇಳಿದು ಅಡಾಡುತ್ತಿರುವುದು ಕಂಡು ಬರುತ್ತಿದೆ. ಚೆಕ್‌ಪೋಸ್ಟ್‌ ಸುತ್ತಮುತ್ತ ಸಮೀಪದಲ್ಲೇ ಮನೆ ಹಾಗೂ ಅಂಗಡಿ ಮುಂಗಟ್ಟುಗಳಿದ್ದು ಪ್ರಯಾಣಿಕರಲ್ಲಿ ಯಾರಾದರೂ ಸೋಂಕಿತರಿದ್ದಲ್ಲಿ ಸ್ಥಳೀಯರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಕೊಟ್ಟಿಗೆಹಾರದ ಹೃದಯಭಾಗದಲ್ಲಿರುವ ಚೆಕ್‌ಪೋಸ್ಟ್‌ ಅನ್ನು ಕೊಟ್ಟಿಗೆಹಾರದ ಗಡಿಭಾಗಕ್ಕೆ ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ದಕ್ಷಿಣಕನ್ನಡ ಭಾಗದಿಂದ ಮಲೆನಾಡಿಗೆ ಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ತುರ್ತು ಸಂದರ್ಭದಲ್ಲಿ ಮಾತ್ರ ಪಾಸ್‌ ನೀಡಬೇಕು. ಕರಾವಳಿಗೆ ಮಲೆನಾಡಿನಿಂದ ದಿನವೊಂದಕ್ಕೆ 200 ಕ್ಕೂ ಹೆಚ್ಚು ತರಕಾರಿ ವಾಹನಗಳು ಸಂಚರಿಸುತ್ತವೆ. ಕರಾವಳಿಯ ಅಂಗಡಿಗಳಿಗೆ ತರಕಾರಿ ಕೊಂಡೊಯ್ಯುವ ವಾಹನಗಳ ಬದಲು ನೇರವಾಗಿ ದಕ್ಷಿಣ ಕನ್ನಡದ ಎಪಿಎಂಸಿಗೆ ದೊಡ್ಡ ವಾಹನಗಳಲ್ಲಿ ತರಕಾರಿಗಳನ್ನು ಸಾಗಿಸಬೇಕು. ಇದರಿಂದ ಹೆಚ್ಚಿನ ವಾಹನ ಸಂಚಾರವಾಗುವುದು ಕಡಿಮೆಯಾಗುತ್ತದೆ. ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ ಕೊಟ್ಟಿಗೆಹಾರ ಹೃದಯ ಭಾಗದಲ್ಲಿದ್ದು ಚೆಕ್‌ಪೋಸ್ಟನ್ನು ಗಡಿಭಾಗಕ್ಕೆ ಸ್ಥಳಾಂತರಿಸಬೇಕು. ರೆಡ್‌ ಜೋನ್‌ ಏರಿಯಾವಾದ ದಕ್ಷಿಣ ಕನ್ನಡದಿಂದ ಹೆಚ್ಚು ಪ್ರಯಾಣಿಕರು ಬರುತ್ತಿದ್ದು ತುರ್ತು ಇದ್ದವರಿಗೆ ಮಾತ್ರ ಪಾಸ್‌ ನೀಡಬೇಕು ಎಂದು ಸ್ಥಳೀಯರಾದ ಆದರ್ಶ್‌ ಬಾಳೂರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next