Advertisement

Kottigehara:ಒಪ್ಪತ್ತಿನ ಊಟ ಬಿಟ್ಟು ದೇಶ ಸೇವೆಗೆ ಆರ್ಥಿಕ ನೆರವು ನೀಡುವ ಮಹಾನುಭಾವ

03:44 PM Sep 11, 2024 | Team Udayavani |

ಕೊಟ್ಟಿಗೆಹಾರ: ಸೈನ್ಯಕ್ಕೆ ಸೇರಬೇಕೆಂಬ ಮಹಾ ಆಸೆಯಿಂದ ವಂಚಿತರಾಗಿದ್ದ ವ್ಯಕ್ತಿ ಒಬ್ಬರು ಸೈನ್ಯಕ್ಕೆ ಹಣ ಕಳಿಸುವ ಮೂಲಕ ದೇಶಪ್ರೇಮ ಮೆರೆದ ಅಪರೂಪದ ವ್ಯಕ್ತಿಯೊಬ್ಬರ ಕಥೆ ಇದು.

Advertisement

ಸೈನ್ಯಕ್ಕೆ ಸೇರಲಾಗದಿದ್ದರೂ ಒಪ್ಪತ್ತಿನ ಊಟ ಬಿಟ್ಟು ದೇಶ ಸೇವೆಗೆ ಆರು ದಶಕಗಳಿಂದ ದೇಶದ ಸೈನ್ಯದ ಖಾತೆಗೆ ಹಣ ಕಳುಹಿಸುತ್ತಿರುವ ದೇಶ ಭಕ್ತ ನರಸಿಂಹರಾವ್ ಹೆಬ್ಬಾರ್ ಕೂಡ ಒಬ್ಬರು.

ಸುಮಾರು 86 ವರ್ಷದ ಹೆಬ್ಬಾರ್ ಮೂಡಿಗೆರೆ ತಾಲ್ಲೂಕಿನ ಕೂವೆಯ ಮಾವಿನಕಟ್ಟೆ ನಿವಾಸಿ. ನಮಗೆ ವಯಸ್ಸಾಗಿದೆ ಮನೆಯಲ್ಲಿ ವಿಶ್ರಾಂತಿ ಪಡೆದರೆ ಸಾಕು ಎಂದು ಕೊಂಡು ಜೀವನ ನಡೆಸುವ ಜನರೇ ಹೆಚ್ಚು.‌ ಆದರೆ ನರಸಿಂಹರಾವ್ ಹೆಬ್ಬಾರ್ ಸಣಕಲು ದೇಹವಾಗಿದ್ದರೂ ಪಾದರಸದಂತೆ ಚುರುಕು. ಮನೆಯಲ್ಲಿ ಸುಮ್ಮನೇ ಕೂರುವುದಿಲ್ಲ.

 

ಕೊಟ್ಟಿಗೆಹಾರ, ಬಾಳೆಹೊನ್ನೂರು,ಮತ್ತಿತರ ಕಡೆ ವೀಳ್ಯದೆಲೆ ವ್ಯಾಪಾರದ ಕೆಲಸವನ್ನು ಮಾಡಿ ದಿನ ಸಾಗಿಸುತ್ತಾರೆ.

Advertisement

ಯುವಕನಿರುವಾಗ ಸೈನ್ಯಕ್ಕೆ ಸೇರಬೇಕೆನ್ನುವ ಕನಸು ಹೊತ್ತಿದ್ದರು. ಆದರೆ ಅವರಿಗೆ ಎರವಲು ಮಾರ್ಗದರ್ಶನದ ಕೊರತೆಯಿಂದ ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡುವ ಅವಕಾಶ ದೊರೆಯಲಿಲ್ಲ. ಆಗ ಅವರು ದೇಶ ಪ್ರೇಮ ಬೆಳೆಸಿಕೊಳ್ಳಲು ಸೈನ್ಯಕ್ಕೆ ಪ್ರತಿ ವಾರ ಒಂದು ದಿನ ಒಪ್ಪತ್ತಿನ ಉಪವಾಸ ಮಾಡಿ ತಿಂಗಳಿಗೆ ರೂ400ರಂತೆ ಹಣ ಕಳುಹಿಸುತ್ತಾರೆ. ಈಗಲೂ ಕೂಡ ಎಲೆ ಮರೆಯಂತೆ ಸೈನ್ಯದ ಖಾತೆಗೆ ಹಣ ಕಳುಹಿಸಿ ಮಾನವೀಯತೆ ದೇಶಪ್ರೇಮ ಬೆಳೆಸಿಕೊಂಡಿದ್ದಾರೆ.ಯೋಧರೆಂದರೆ ಇವರಿಗೆ ಅಪಾರ ಪ್ರೀತಿ.

6 ದಶಕಗಳ ಹಿಂದೆ ಭಾರತದ ಪ್ರಧಾನಿ ಲಾಲ್ ಬಹದ್ದೂರು ಶಾಸ್ತ್ರಿ ಯವರು 1964ರಲ್ಲಿ ಬರಗಾಲದ ಪರಿಸ್ಥಿತಿಯಲ್ಲಿ ದೇಶಕ್ಕಾಗಿ ಒಂದು ದಿನ ಉಪವಾಸ ಇದ್ದು ಸೇನಾ ರಕ್ಷಣಾ ನಿಧಿಗೆ ಹಣ ಕಳುಹಿಸಿ ಎಂದು ಸುತ್ತೋಲೆ ಹೊರಡಿಸಿದ್ದರಂತೆ. ಆ ಒಂದು ಮಾತು ನರಸಿಂಹರಾವ್ ಹೆಬ್ಬಾರರಿಗೆ ಆಳವಾಗಿ ನಾಟಿದ್ದು ಅದನ್ನು ಅವರು ಆಣೆ, ಪೈಸೆ ಬಳಿಕ ರೂಪಾಯಿಯಲ್ಲಿ ನೀಡಿದ ದಾಖಲೆ ಅವರು ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಚಾಚೂ ತಪ್ಪದೇ ತನ್ನ ದಿನದ ಪಡಿಯನ್ನು ಸಂಗ್ರಹಿಸಿ ದೇಶದ ಸೇವೆಗೆ ನೀಡುತ್ತಿರುವುದು ಅಪ್ಪಟ ದೇಶ ಭಕ್ತರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.

ಇವರ ದೇಶಪ್ರೇಮಕ್ಕೆ ವಿವಿಧ ಸಂಘ ಸಂಸ್ಥೆಗಳಿಂದ ಹಲವು ಪ್ರಶಸ್ತಿಗಳು ಸಂದಿವೆ. ಇವರು ಬರೀ ಸೈನ್ಯಕ್ಕೆ ಮಾತ್ರ ಹಣ ನೀಡುತ್ತಿಲ್ಲ. ವಿವಿಧ ಸಂಘ ಸಂಸ್ಥೆಗಳಿಗೂ ತನ್ನ ವ್ಯಾಪಾರದಲ್ಲಿ ಬಂದ ಹಣದಲ್ಲಿ ದಾನ ನೀಡುತ್ತಿದ್ದಾರೆ. ನಾನು ಕೊಡುವ ಹಣ ಉತ್ತಮ ಕೆಲಸಗಳಿಗೆ ಸದುದ್ದೇಶಕ್ಕೆ ವಿನಿಯೋಗವಾಗಲಿ ಎಂಬುದು ನರಸಿಂಹ ಅವರ ಕನಸು. ಏನೇ ಆಗಲಿ, 87ರ ಹರಯದಲ್ಲೂ ಮನೆಯಲ್ಲಿ ಕೂರದೇ ತನಗಾದ ಕೆಲಸವನ್ನು ನಿಷ್ಟೆಯಿಂದ ಮಾಡಿ ವಾರದಲ್ಲಿ ಮೂರು ದಿನ ಹೊರ ಬಂದು ದುಡಿಯುತ್ತಿದ್ದಾರೆ.

ಮಕ್ಕಳು ಮನೆಯಲ್ಲಿ ಇರಿ ಎಂದರೂ ಕೇಳದೇ ಓಡಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಅವರು ಉತ್ತರ ಕೊಡುತ್ತಾರೆ. ಹೆಬ್ಬಾರ್ ಅಪ್ಪಟ ಯಕ್ಷಗಾನ ಕಲಾವಿದರಾಗಿದ್ದು ಸ್ಥಳೀಯ ಯಕ್ಷಗಾನ ಕಲಾವಿದರಿಗೂ ನೆರವು ನೀಡಿದ್ದಾರೆ. ಹಿಂದಿನಿಂದಲೂ ಯಕ್ಷಗಾನ ಕಲಾವಿದರಿಗೆ ಸನ್ಮಾನ ಮಾಡುತ್ತಾ ಬಂದಿದ್ದು ಕಲಾವಿದರನ್ನು ಕಂಡರೂ ಇವರಿಗೆ ಅಪಾರ ಗೌರವ. ದೇಶಭಕ್ತ ನರಸಿಂಹರಾವ್ ಹೆಬ್ಬಾರ್ ಅವರ ಕಾರ್ಯವನ್ನು ಸ್ಥಳೀಯರು, ದೇಶಾಭಿಮಾನಿಗಳು ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next