ಕೊಟ್ಟಿಗೆಹಾರ: ನಾಗರಿಕರಿಗೆ ಉತ್ತಮ ಸೇವೆ ಶೀಘ್ರವಾಗಿ ನೀಡಲು ನೆರವಾಗುವಂತೆ ಅಂಚೆ ಕಚೇರಿಗಳಲ್ಲಿ ಮಂತ್ರ ಎಂಬ ಉಪಕರಣ ನೀಡಲಾಗಿದೆ.ಆದರೆ ವ್ಯವಸ್ಥೆಗಳನ್ನು ಮೇಲ್ದರ್ಜೆ ಏರಿಸಿದ್ದರೂ ನೆಟ್ ವರ್ಕ್ ಸಮಸ್ಯೆ ಮಾತ್ರ ಕಗ್ಗಂಟಾಗಿ ಉಳಿದಿದ್ದು ಅಂಚೆ ಕಚೇರಿಗಳ ಮುಂಭಾಗದಲ್ಲಿ ನೆಟ್ ವರ್ಕ್ ಸಿಗುವ ಬಸ್ ನಿಲ್ದಾಣಗಳಲ್ಲಿ ನಾಗರಿಕರು ಗಂಟೆ ಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ.
ಮಲೆನಾಡು ಭಾಗದ ಗ್ರಾಮೀಣ ಪ್ರದೇಶದಲ್ಲಿ ಈಗ ಮಳೆಗಾಲವಾದ್ದರಿಂದ ನೆಟ್ ವರ್ಕ್ ಸೇವೆ ಗಗನ ಕುಸುಮವಾಗುತ್ತಿದೆ.ಅಂಚೆ ಕಚೇರಿಗಳಲ್ಲಿ ಮಾಸಿಕ ವೇತನಕ್ಕಾಗಿ ಮಾತ್ರವಲ್ಲ ಕೆಲವು ಕಡೆ ಪಡಿತರ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ ಎದುರಾಗುತ್ತಿದೆ.ಇದರಿಂದ ಅಂಚೆ ಕಚೇರಿಗಳ ಸಿಬ್ಬಂದಿಗಳು ನೆಟ್ ವರ್ಕ್ ಸಮಸ್ಯೆಯಿಂದ ನಾಗರೀಕರಿಗೆ ಮಾಸಿಕ ವೇತನ ನೀಡಲು ಹೈರಾಣಾಗುವಂತಾಗಿದೆ.
ಅಂಚೆ ಕಚೇರಿಯಲ್ಲಿ ನೀಡಿರುವ ‘ಮಂತ್ರ’ ಯಂತ್ರದಲ್ಲಿ ನೆಟ್ ವರ್ಕ್ ಸಿಗುವುದೇ ಇಲ್ಲ.ಸಿಕ್ಕರೂ ತುಂಬಾ ಸಮಯ ಕಾಯಬೇಕಾಗುತ್ತದೆ.ಇದರಿಂದ ವೃದ್ಧರು, ಮಹಿಳೆಯರು ಸೇವೆಗಾಗಿ ಕಚೇರಿ ಮುಂದೆ ಕಾದು ಕುಳಿತುಕೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.ಬಾಳೂರು ಅಂಚೆ ಕಚೇರಿಯಲ್ಲಿ ನೆಟ್ ವರ್ಕ್ ಸಾಗದೇ ಒಂದು ಕಿ.ಮೀ ಅಂತರದ ರಸ್ತೆ ಬದಿಯ ಬಸ್ ನಿಲ್ದಾಣದಲ್ಲಿ ಅಂಚೆ ಸಿಬ್ಬಂದಿಗಳು ಕುಳಿತು ಸೇವೆ ನೀಡಬೇಕಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಸ್ವಾಮ್ಯದ BSNL ಸಿಮ್ ಗಳನ್ನು ಕೇಂದ್ರ ಸರ್ಕಾರದ ಅಂಚೆ ಕಚೇರಿಗಳ ಯಂತ್ರಗಳಲ್ಲಿ ಅಳವಡಿಸಿದ್ದು ನೆಟ್ ವರ್ಕ್ ಸಮಸ್ಯೆ ಹೆಚ್ಚಾಗಿದೆ.ವಿದ್ಯುತ್ ಇಲ್ಲದಿದ್ದರೆ ನೆಟ್ ವರ್ಕ್ ‘ಮಂತ್ರ’ ಯಂತ್ರದಲ್ಲಿ ಸಿಗುತ್ತಿಲ್ಲ.ಇದರಿಂದ ಸಮಸ್ಯೆಯಾಗಿದೆ ಎಂದು ಮುಖಂಡ ಪರೀಕ್ಷಿತ್ ಜಾವಳಿ ಹೇಳಿದ್ದಾರೆ.
ಗ್ರಾಮೀಣ ಪ್ರದೇಶದಲ್ಲೂ ಈಗ ಖಾಸಗಿ ಕಂಪೆನಿಯ ಸಿಮ್ಮ್ ಗಳು ಕಾರ್ಯ ನಿರ್ವಹಿಸುತ್ತಿದ್ದು ಬಾಳೂರು ಹಾಗೂ ಮತ್ತಿತರ ಗ್ರಾಮೀಣ ಪ್ರದೇಶದಲ್ಲಿ ನೆಟ್ ವರ್ಕ್ ಸಮಸ್ಯೆ ತಲೆದೋರುತ್ತಿದೆ.ಅಂಚೆ ಕಚೇರಿಯಲ್ಲಿ ಪ್ರತಿಯೊಂದು ಕೆಲಸಕ್ಕೂ ಕಂಪ್ಯೂಟರ್ ಗಳನ್ನು ಆಶ್ರಯಿಸಿರುವುದರಿಂದ ಸಾರ್ವಜನಿಕರ ಕೆಲಸಗಳಿಗೂ ತೊಂದರೆಯಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಗ್ರಾಮೀಣ ಭಾಗದ ಅಂಚೆ ಕಚೇರಿಗಳಲ್ಲಿ ಆಗುತ್ತಿರುವ ನೆಟ್ ವರ್ಕ್ ಸಮಸ್ಯೆಗಳನ್ನು ಸರಿಪಡಿಸಿ ವೃದ್ಧರಿಗೆ, ಮಹಿಳೆಯರಿಗೆ ತ್ವರಿತ ಸೇವೆ ನೀಡಲು ಸಹಕರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.