Advertisement

ಜಿಲ್ಲಾ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಮ್ಮಾನ

11:26 AM Jul 08, 2018 | |

ಕೊಡಿಯಾಲಬೈಲ್‌: ವಿಧಾನ ಪರಿಷತ್‌ ವಿಪಕ್ಷ ನಾಯಕರಾಗಿ ಆಯ್ಕೆಯಾದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಕಚೇರಿಯಲ್ಲಿ ಶನಿವಾರ ಅಭಿನಂದಿಸಲಾಯಿತು. ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ್‌ ಮಿಜಾರ್‌, ಸದನದಲ್ಲಿ ಹಲವು ಬಾರಿ ಜಿಲ್ಲೆಯ ಘನತೆಯನ್ನು ಎತ್ತಿ ಹಿಡಿದ ಶ್ರೀನಿವಾಸ ಪೂಜಾರಿಯವರು ರಾಜಕೀಯ ನಾಯಕರಿಗೆ ಮಾದರಿಯಾದವರು. ಅವರ ಬದ್ಧತೆಯನ್ನು ಗುರುತಿಸಿ ಇದೀಗ ಅವರಿಗೆ ವಿಪಕ್ಷ ನಾಯಕ ಸ್ಥಾನ ಒಲಿದಿದೆ. ಆ ಸ್ಥಾನವನ್ನು ಅವರು ಸಮರ್ಥವಾಗಿ ನಿಭಾಯಿಸುವರೆಂಬ ವಿಶ್ವಾಸ ಪ್ರತಿಯೊಬ್ಬರಿಗೂ ಇದೆ ಎಂದು ಅಭಿಪ್ರಾಯಪಟ್ಟರು.

Advertisement

ವಿಭಾಗ ಪ್ರಭಾರಿ ಉದಯಕುಮಾರ್‌ ಶೆಟ್ಟಿ ಮಾತನಾಡಿ, ಬಿಜೆಪಿಯು ಸಾಮಾನ್ಯ ಕಾರ್ಯಕರ್ತನ ಪಕ್ಷವಾಗಿದೆ. ಕೋಟದ ಸಾಮಾನ್ಯ ಕಾರ್ಯಕರ್ತನೊಬ್ಬ ವಿಧಾನ ಪರಿಷತ್‌ ವಿಪಕ್ಷ ನಾಯಕನ ಸ್ಥಾನವನ್ನು ಅಲಂಕರಿಸಲು ಸಾಧ್ಯವೆಂದರೆ ಪಕ್ಷವು ಕಾರ್ಯಕರ್ತರಿಗೆ ಕೊಡುವ ಗೌರವ ಎಂತಹುದು ಎಂಬುದನ್ನು ತಿಳಿದುಕೊಳ್ಳಬಹುದು ಎಂದು ಹೇಳಿದರು. ಶಾಸಕ ಡಿ. ವೇದವ್ಯಾಸ ಕಾಮತ್‌, ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಕಿಶೋರ್‌ ರೈ, ಮಾಜಿ ಜಿಲ್ಲಾಧ್ಯಕ್ಷ ಪ್ರತಾಪ್‌ ಸಿಂಹ ನಾಯಕ್‌ ಮತ್ತಿತರರು ಉಪಸ್ಥಿತರಿದ್ದರು.

‘ರಾಜ್ಯ ಸರಕಾರದಿಂದ ಕರಾವಳಿ ಅವಗಣನೆ’
ಸುರತ್ಕಲ್‌: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ ಕರಾವಳಿಗೆ ಅನ್ಯಾಯ ವಾಗಿದ್ದು ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಬಜೆಟ್‌ ಪುನರ್‌ ಪರಿಶೀಲಿಸಿ ತತ್‌ಕ್ಷಣ ಕರಾವಳಿಗೆ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು. ಸುರತ್ಕಲ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯ ಮಂತ್ರಿ ಅವರ ಪಕ್ಷ ಬಲಿಷ್ಠ ಇರುವಲ್ಲಿ ಹೆಚ್ಚಿನ ಅನುದಾನ ನೀಡಲಾಗಿದೆ. 
ಕರಾವಳಿಯನ್ನು ನಿರ್ಲಕ್ಷಿಸಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ವಿಧಾನ ಪರಿಷತ್‌ನಲ್ಲಿ ಈ ವಿಚಾರವನ್ನು ಪ್ರಸ್ತಾವಿಸಿ ಕರಾವಳಿಗೂ ಸೂಕ್ತ ಆರ್ಥಿಕ ಅನುದಾನ ನೀಡುವಂತೆ ಬಿಜೆಪಿ ಒತ್ತಾಯಿಸಲಿದೆ ಎಂದರು. ಈ ಬಾರಿ ಭಾರೀ ಮಳೆಯಾಗುತ್ತಿದ್ದರೂ ಮುಖ್ಯಮಂತ್ರಿಗಳು ಸಭೆ ನಡೆಸಿ ನಷ್ಟ ಪರಿಹಾರ, ಹಾನಿ ಮತ್ತಿತರ ಜನಪರ ಸಮಸ್ಯೆ ಚರ್ಚಿಸು ವಲ್ಲಿ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದರು. ಬಿಜೆಪಿ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next