ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ‘ವಿಶ್ವವಿಖ್ಯಾತ ಫಿಲಿಪ್ ಕೋಟ್ಲರ್ ಅಧ್ಯಕ್ಷೀಯ ಪ್ರಶಸ್ತಿ’ ಗೆದ್ದಿರುವುದನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ವ್ಯಂಗ್ಯದಿಂದ ಪ್ರಶಂಸಿಸಿ, ಪ್ರಶಸ್ತಿಯ ಸಾಚಾತನವನ್ನೇ ಪ್ರಶ್ನಿಸಿದ ಬೆನ್ನಿಗೇ, ವಿಶ್ವ ಮಾರ್ಕೆಟಿಂಗ್ ಗುರು ಎಂದೇ ಖ್ಯಾತರಾಗಿರುವ ಫಿಲಿಪ್ ಕೋಟ್ಲರ್ ಅವರು ಭಾರತಕ್ಕೆ ನಿಸ್ವಾರ್ಥ ಸೇವೆ ನೀಡಿರುವ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ.
ಕೋಟ್ಲರ್ ಅವರು ತಮ್ಮ ಟ್ವೀಟ್‌ನಲ್ಲಿ ಹೀಗೆ ಹೇಳಿದ್ದಾರೆ : ಪ್ರಪ್ರಥಮ ಫಿಲಿಪ್ ಕೋಟ್ಲರ್ ಅಧ್ಯಕ್ಷೀಯ ಪ್ರಶಸ್ತಿ ಜಯಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾನು ಅಭಿನಂದಿಸುತ್ತೇನೆ. ಭಾರತಕ್ಕೆ ಮೋದಿ ನೀಡುತ್ತಿರುವ ಅದ್ವಿತೀಯ ನಾಯಕತ್ವ ಮತ್ತು ನಿಸ್ವಾರ್ಥ ಸೇವೆ, ಜತೆಗೆ ಅವರ ಅವಿರತ ಪರಿಶ್ರಮವನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಮುಂಬರುವ ವರ್ಷಗಳಲ್ಲಿ ಈ ಪ್ರಶಸ್ತಿಗೆ ಭಾಜನರಾಗುವವರು ತೋರಬೇಕಾದ ಸಾಧನೆಯ ಮಟ್ಟ ಮೋದಿ ಅವರಿಂದಾಗಿ ಎತ್ತರಕ್ಕೆ ಏರಿದೆ.
ಈ ಪ್ರಶಸ್ತಿ ಮೋದಿ ಅವರಿಗೆ ಸಂದಿರುವುದನ್ನು ವ್ಯಂಗ್ಯದಿಂದ ಪ್ರಶಂಸಿಸಿ ಟೀಕಿಸಿದ್ದ ರಾಹುಲ್ ಗಾಂಧಿ, ‘ಅಷ್ಟೇನೂ ಪ್ರತಿಷ್ಠಿತವಲ್ಲದ ಈ ಪ್ರಶಸ್ತಿಗೆ ತೀರ್ಪುದಾರರು ಇಲ್ಲ; ಈ ಪ್ರಶಸ್ತಿಯನ್ನು ಈ ಮೊದಲು ಯಾರಿಗೂ ಕೊಟ್ಟದ್ದಿಲ್ಲ; ಈ ಪ್ರಶಸ್ತಿಗೆ ಕಂಡುಕೇಳರಿಯದ ಆಲಿಗಢದ ಕಂಪೆನಿಯೊಂದರ ಬೆಂಬಲವಿದೆ; ಜತೆಗೆ ಪತಂಜಲಿ ಮತ್ತು ರಿಪಬ್ಲಿಕ್ ಟಿವಿ ಇದರ ಈವೆಂಟ್ ಪಾರ್ಟ್ ನರ್ ಆಗಿವೆ’ ಎಂದು ಟ್ವೀಟ್ ಮಾಡಿದ್ದರು.
ರಾಹುಲ್ ಟ್ವೀಟ್‌ಗೆ ಕೇಂದ್ರ ಸಚಿವೆ ಸ್ಮತಿ ಇರಾನಿ ಅವರು ಟ್ಯಾಗ್ ಮಾಡಿ, ಪ್ರಧಾನಿ ಮೋದಿ ಅವರಂತಲ್ಲದ, ಗಾಂಧಿ ಕುಟುಂಬ ಈ ದೇಶದ ಪರಮೋಚ್ಚ ಭಾರತ ರತ್ನ ಪೌರ ಪ್ರಶಸ್ತಿಯನ್ನು ತಮಗೆ ತಾವೇ ಕೊಡಲು ನಿರ್ಧರಿಸಿದಂತಹ ಗಾಂಧಿ ಕುಟುಂಬದವರೊಬ್ಬರಿಂದ ಈ ರೀತಿಯ ಹೇಳಿಕೆ ಬಂದಿದೆ ಎಂದು ನೆನಪಿಸಿಕೊಟ್ಟಿದ್ದಾರೆ.
ಪೀಪಲ್, ಪ್ರಾಫಿಟ್ ಮತ್ತು ಪ್ಲಾನೆಟ್ ಎಂಬ ತ್ರಿವಳಿ ತಳ-ಪರಿಕಲ್ಪನೆಯ ಈ ಪ್ರಶಸ್ತಿಯನ್ನು ಈ ಬಾರಿಯಿಂದ ತೊಡಗಿ ವರ್ಷಂಪ್ರತಿ ಅದ್ವಿತೀಯ ಸಾಧಕ ರಾಷ್ಟ್ರ ನಾಯಕನೋರ್ವನಿಗೆ ನೀಡಲಾಗುತ್ತದೆ.
ಮೋದಿ ಅವರ ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ವಚ್ಚ ಭಾರತ್, ಆಧಾರ್ ಮುಂತಾಗಿ ಹಲವಾರು ಕ್ರಾಂತಿಕಾರಿ ಉಪಕ್ರಮಗಳನ್ನು ಲೆಕ್ಕಿಸಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ.
ಫಿಲಿಪ್ ಕೋಟ್ಲರ್ ಅವರು ನಾರ್ತ್ ವೆಸ್ಟರ್ನ್ ಯುನಿವರ್ಸಿಟಿಯ ಅತ್ಯಂತ ಪ್ರತಿಭಾನ್ವಿತ ಮಾರ್ಕೆಟಿಂಗ್ ಪ್ರೊಫೆಸರ್ ಆಗಿದ್ದಾರೆ.